ಸ್ಪಿನ್ ಮಾಂತ್ರಿಕ ಕುಂಬ್ಳೆ 10 ವಿಕೆಟ್ ಸಾಧನೆಗೆ 21ರ ಸಂಭ್ರಮ

Public TV
2 Min Read

ಬೆಂಗಳೂರು: ಈ ದಿನ ಸುವರ್ಣ ಅಕ್ಷರಗಳನ್ನ ಬರೆದಿಡಬೇಕಾದ ದಿನ. ವೈಟ್ ಅಂಟ್ ವೈಟ್‍ನಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆ ಕ್ರಿಕೆಟ್ ಇತಿಹಾಸ ಬರೆದ ದಿನ. 21 ವರ್ಷಗಳ ಹಿಂದೆ ಅಂದ್ರೆ 1999ರಲ್ಲಿ ಕನ್ನಡಿಗ ಸ್ಪಿನ್ ಮಾಂತ್ರಿಕ ಅನೀಲ್ ಕುಂಬ್ಳೆ ಒಂದೇ ಪಂದ್ಯದಲ್ಲಿ 10 ವಿಕೆಟ್ ಕಿತ್ತು ವಿಶ್ವದಾಖಲೆ ಬರೆದಿದ್ದರು.

ಅದು 1999 ಫೆಬ್ರವರಿ 7ರಂದು ಬದ್ಧ ವೈರಿ ಪಾಕಿಸ್ತಾನ ವಿರುದ್ಧದ 2ನೇ ಟೆಸ್ಟ್ ಪಂದ್ಯ. ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಐತಿಹಾಸಿಕ ಹೋರಾಟ ಅದು. ಪಾಕಿಸ್ತಾನ ಚೇಸಿಂಗ್‍ಗೆ 420 ರನ್ ಪಡೆದುಕೊಂಡು ಕ್ರೀಸ್‍ಗಿಳಿದಿತ್ತು. ಆಗ ಪಾಕಿಸ್ತಾನ ಪರ ಆರಂಭಿಕರಾಗಿ ಮೈದಾಕ್ಕಿಳಿದು ಶಾಹೀದ್ ಅಫ್ರಿದಿ ಹಾಗೂ ಸಯೀದ್ ಅನ್ವರ್ ಜೊತೆಯಾಟ ನೋಡಿದ ಕ್ರಿಕೆಟ್ ಅಭಿಮಾನಿಗಳು ಇಂಡಿಯಾ ಟೆಸ್ಟ್ ಕೈ ಚೆಲ್ಲುತ್ತೆ ಎಂದು ಭಾವಿಸಿದ್ದರು. ಆದರೆ ಅಫ್ರಿದಿ ಅವರನ್ನ ತಮ್ಮ ಲೆಗ್ ಸ್ಪಿನ್ ಬಲೆಗೆ ಸಿಲುಕಿಸಿದ ಅನಿಲ್ ಕುಂಬ್ಳೆ ಮೊದಲ ವಿಕೆಟ್ ಪತನಕ್ಕೆ ಕಾರಣವಾದರು. ಕುಂಬ್ಳೆ ಎಸೆದ ಚೆಂಡಿಗೆ ಉತ್ತರ ಕೊಡಲು ಕ್ರೀಸ್ ಬಿಟ್ಟು ಮುಂದೆ ಬಂದ ಅಫ್ರಿದಿಯನ್ನು ವಿಕೆಟ್ ಕೀಪರ್ ನಯನ್ ಮೊಂಗಿಯಾ ಸ್ಟಂಪ್ ಮಾಡಿದ್ದರು. ಅಂದು ಪಾಕಿಸ್ತಾನ ಮೊದಲ ವಿಕೆಟ್‍ಗೆ ಶತಕದ ಜೊತೆಯಾಟವಾಡಿತ್ತು.

ಇಲ್ಲಿಂದ ಕುಂಬ್ಳೆ ವಿಕೆಟ್ ಬೇಟೆ ಶುರುವಾಯಿತು. ನಂತರ ಇಜಾಜ್ ಅಹಮದ್, ದೈತ್ಯ ಇನ್ಜಮಾಮ್ ಉಲ್ ಹಕ್‍ರನ್ನು ತಮ್ಮ ಖೆಡ್ಡಾಗೆ ಕೆಡವಿದ ಕುಂಬ್ಳೆ ವಿಕೆಟ್‍ಗಳ ಸುರಿಮಳೆಗೈದರು. ಬ್ಯಾಟಿಂಗ್ ಪಿಚ್ ಆಗಿರುವ ಕೋಟ್ಲಾ ಮೈದಾನ ಬ್ಯಾಟ್ಸ್‍ಮನ್‍ಗಳಿಗೆ ತದ್ವಿರುದ್ಧವಾಗಿತ್ತು. ಈ ಪಿಚ್ ಕುಂಬ್ಳೆಗೆ ವರದಾನವಾಯಿತು. ಸ್ಪಿನ್ ಜಾದುವಿನಿಂದ ಪಾಕಿಸ್ತಾನದ ಆಟಗಾರರನ್ನು ಕಟ್ಟಿಹಾಕಿದ ಜಂಬೋ ಬ್ಯಾಕ್ ಟು ಬ್ಯಾಕ್ ವಿಕೆಟ್‍ಗಳನ್ನ ಉರುಳಿಸುತ್ತಾ ಹೋದರು.

ಶ್ರೀನಾಥ್ ಸಾಥ್:
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಜೊತೆ ಟೀಂ ಇಂಡಿಯಾದಲ್ಲಿ ಮತ್ತೊಬ್ಬ ಕನ್ನಡಿಗ ಇದ್ದರು. ಅವರೇ ಅಂದಿನ ಸ್ಪೀಡ್ ಸ್ಟಾರ್ ಮೈಸೂರು ಎಕ್ಸ್‍ಪ್ರೆಸ್ ಜಾವಗಲ್ ಶ್ರೀನಾಥ್. ಒಂದು ಕಡೆ ತಮ್ಮ ಆಪ್ತ ಸ್ನೇಹಿತ ಪಾಕ್ ವಿಕೆಟ್‍ಗಳನ್ನು ಚೆಂಡಾಡುತ್ತಿದ್ದರೆ, ಮತ್ತೊಂದು ಕಡೆ ಶ್ರೀನಾಥ್ ಕುಂಬ್ಳೆ ದಾಖಲೆ ನಿರ್ಮಿಸುವುದಕ್ಕೆ ಆಸರೆಯಾಗಿ ನಿಂತಿದ್ದರು.

ಕುಂಬ್ಳೆ ಪಾಕಿಸ್ತಾನದ 8 ಹಾಗೂ 9ನೇ ವಿಕೆಟ್ ಪಡೆದಿದ್ದಾಗ ಬೌಲಿಂಗ್ ಕ್ರೀಸ್‍ನಲ್ಲಿದ್ದಿದ್ದು ಜಾವಗಲ್ ಶ್ರೀನಾಥ್. ಹೇಗಾದರೂ ಮಾಡಿ ಕುಂಬ್ಳೆಗೆ 10ನೇ ವಿಕೆಟ್ ಸಿಗಬೇಕು ಅಂತ ಹಠಕ್ಕೆ ಬಿದ್ದ ಶ್ರೀನಾಥ್, ಕಳಪೆ ಬೌಲಿಂಗ್ ಮಾಡಿದರು. ಕೊನೆಗೂ ಇತಿಹಾಸ ಸೃಷ್ಟಿಸುವ ಸಮಯ ಬಂದೇ ಬಿಡ್ತು. ಪಾಕಿಸ್ತಾನದ ಕೊನೆ ವಿಕೆಟ್ ಕಬಳಿಸಿ, 2ನೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್ ಪೂರೈಸಿದ ಅನಿಲ್ ಕುಂಬ್ಳೆ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವಿಶ್ವದಾಖಲೆ ಬರೆದರು. 207 ರನ್‍ಗೆ ಪಾಕಿಸ್ತಾನ ಆಲೌಟ್ ಆಯಿತು. 212ರನ್‍ಗಳಿಂದ ಭಾರತ ವಿಜಯೋತ್ಸವ ಆಚರಿಸಿತು. ಭಾರತ ಕ್ರಿಕೆಟ್ ಇತಿಹಾಸದಲ್ಲಿ ಅನಿಲ್ ಕುಬ್ಳೆ ಅವರ ಈ ಅಮೋಘ ಪ್ರದರ್ಶನಕ್ಕೆ ಇಂದಿಗೆ 21 ವರ್ಷಗಳ ಸಂಭ್ರಮ.

Share This Article
Leave a Comment

Leave a Reply

Your email address will not be published. Required fields are marked *