ಲಾಕ್‍ಡೌನ್ ಎಫೆಕ್ಟ್- ಜನರ ಮನರಂಜನೆಗಾಗಿ ರಾಮಬಾಣ ಬಿಟ್ಟ ಕೇಂದ್ರ ಸರ್ಕಾರ

Public TV
1 Min Read

ನವದೆಹಲಿ: ಮಹಾಮಾರಿ ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಏಪ್ರಿಲ್ 14ರವರೆಗೆ ಲಾಕ್‍ಡೌನ್ ಘೋಷಿಸಲಾಗಿದೆ. ಹೀಗಾಗಿ ಕೆಲವರು ಮನೆಯಲ್ಲಿ ಕುಳಿತು ಎಲ್ಲಾ ವೆಬ್ ಸಿರೀಸ್‍ಗಳನ್ನು ನೋಡಿ ಮುಗಿಸುತ್ತಿದ್ದಾರೆ. ಹೀಗಾಗಿ ಜನರಿಗೆ ಮನರಂಜನೆ ನೀಡಲು ಸರ್ಕಾರ ರಾಮಬಾಣವನ್ನು ಬಿಟ್ಟಿದ್ದು, 80ರ ದಶಕದ ಪ್ರಸಿದ್ಧ ಟಿವಿ ಧಾರಾವಾಹಿ ರಾಮಾಯಣವು ಮತ್ತೊಮ್ಮೆ ದೂರದರ್ಶನ ಚಾನೆಲ್‍ನಲ್ಲಿ ನಾಳೆ ಆರಂಭವಾಗಲಿದೆ.

ಈ ಕುರಿತು ಟ್ವೀಟ್ ಮಾಡಿರುವ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವ್ಡೇಕರ್, ಸಾರ್ವಜನಿಕರ ಬೇಡಿಕೆಯ ಮೇರೆಗೆ ದೂರದರ್ಶನದ ರಾಷ್ಟ್ರೀಯ ಚಾನೆಲ್‍ನಲ್ಲಿ ಮಾರ್ಚ್ 28ರ ಶನಿವಾರ ‘ರಾಮಾಯಣ’ ಪ್ರಸಾರ ಮತ್ತೆ ಪ್ರಾರಂಭವಾಗಲಿದೆ. ಮೊದಲ ಎಪಿಸೋಡ್ ಬೆಳಗ್ಗೆ 9ಕ್ಕೆ ಮತ್ತು ಎರಡನೇ ಎಪಿಸೋಡ್ ರಾತ್ರಿ 9ಕ್ಕೆ ಪ್ರಸಾರವಾಗಲಿದೆ ಎಂದು ತಿಳಿಸಿದ್ದಾರೆ.

ಅಷ್ಟೇ ಅಲ್ಲ ಬಿ.ಆರ್.ಚೋಪ್ರಾ ಅವರ ಪ್ರಸಿದ್ಧ ಧಾರಾವಾಹಿ ‘ಮಹಾಭಾರತ’ವನ್ನು ಮರು ಪ್ರಸಾರ ಮಾಡುವ ಸಾಧ್ಯತೆಯನ್ನೂ ಸರ್ಕಾರ ಪರಿಶೀಲಿಸುತ್ತಿದೆ. ರಾಮಾನಂದ್ ಸಾಗರ್ ಅವರ ‘ರಾಮಾಯಣ’ ಮೊದಲ ಬಾರಿಗೆ 1987ರಲ್ಲಿ ಪ್ರಸಾರವಾಗಿತ್ತು. ಬಿ.ಆರ್.ಚೋಪ್ರಾ ಅವರ ‘ಮಹಾಭಾರತ’ 1988ರಲ್ಲಿ ದೂರದರ್ಶನದಲ್ಲಿ ಮೊದಲ ಬಾರಿಗೆ ಪ್ರಸಾರವಾಗಿತ್ತು.

ಕೊರೊನಾ ವೈರಸ್ ಸೋಂಕಿನಿಂದಾಗಿ 21 ದಿನಗಳ ಲಾಕ್‍ಡೌನ್ ಘೋಷಣೆಯಾದಾಗಿನಿಂದಲೂ ಜನರು ಸಾಮಾಜಿಕ ಜಾಲತಾಣದಲ್ಲಿ ‘ರಾಮಾಯಣ’ ಮತ್ತು ‘ಮಹಾಭಾರತ’ವನ್ನು ದೂರದರ್ಶನದಲ್ಲಿ ಮರು ಪ್ರಸಾರ ಮಾಡುವಂತೆ ಸಚಿವರಿಗೆ ಒತ್ತಾಯಿಸಿದ್ದರು. ಇದರಿಂದಾಗಿ ಸಚಿವ ಪ್ರಕಾಶ್ ಜಾವ್ಡೇಕರ್ ಅವರ ಸಲಹೆಯಿಂದ ಪ್ರಸಾರ ಭಾರತಿ ಸಿಇಒ ಶಶಿ ಶೇಖರ್ ಅವರು ‘ರಾಮಾಯಣ’ ಮತ್ತು ‘ಮಹಾಭಾರತ’ ಹಕ್ಕುದಾರರೊಂದಿಗೆ ಮಾತುಕತೆ ನಡೆಸಿದ್ದಾರೆ.

80ರ ದಶಕದ ಉತ್ತರಾರ್ಧದಲ್ಲಿ ‘ರಾಮಾಯಣ’ ಮತ್ತು ‘ಮಹಾಭಾರತ’ ಧಾರಾವಾಹಿಗಳು ತಮ್ಮ ಪ್ರಸಾರದ ಸಮಯದಲ್ಲಿ ರಸ್ತೆಗಳಲ್ಲಿ ಜನರನ್ನು ನಿರ್ಜನಗೊಳಿಸುತ್ತಿದ್ದವು. ಎರಡೂ ಧಾರಾವಾಹಿಗಳನ್ನು ಭಾರತೀಯ ಟಿವಿ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಧಾರಾವಾಹಿಗಳೆಂದು ಪರಿಗಣಿಸಲಾಗಿದೆ. ‘ರಾಮಾಯಣ’ ಮತ್ತು ‘ಮಹಾಭಾರತ’ಗಳನ್ನು 55 ದೇಶಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಜನರು ವೀಕ್ಷಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *