ಅ.22ಕ್ಕೆ ರಾಜ್ಯದ ಅತಿ ಎತ್ತರದ ಶ್ರೀರಾಮಾಂಜನೇಯ ಮೂರ್ತಿ ಲೋಕಾರ್ಪಣೆ

Public TV
2 Min Read

ಬೆಂಗಳೂರು: ರಾಜಾಜಿನಗರದ (Rajajinagara) ಶ್ರೀರಾಮಮಂದಿರದಲ್ಲಿ ಶ್ರೀರಾಮ ಸೇವಾ ಮಂಡಳಿಯಿಂದ ಕರ್ನಾಟಕದ ಅತಿ ಎತ್ತರದ 63 ಅಡಿ ಉದ್ದದ ಶ್ರೀರಾಮಾಂಜನೇಯ ಪ್ರತಿಮೆಯ (Sri Ramanjaneya Statue) ಚರ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮ ಅ.21 ರಿಂದ ಮೂರು ದಿನಗಳ ಕಾಲ ಅದ್ದೂರಿಯಾಗಿ ನೆರವೇರಲಿದೆ. 23 ರಂದು ವಿಧ್ಯುಕ್ತವಾಗಿ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ ಎಂದು ಮಾಗಡಿ ಕೆಂಪೇಗೌಡ ಅಭಿವೃದ್ದಿ ಸಮಿತಿ ಅಧ್ಯಕ್ಷ ಹೆಚ್.ಎಂ.ಕೃಷ್ಣಮೂರ್ತಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿರವರ ದಿವ್ಯ ಸಾನಿಧ್ಯದಲ್ಲಿ ಈ ಮೂರ್ತಿ ಲೋಕಾರ್ಪಣೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ರಾಜ್ಯದ ಪ್ರಮುಖ ಧಾರ್ಮಿಕ ಮುಖಂಡರು, ಧರ್ಮಗುರುಗಳು, ರಾಜಕೀಯ ನೇತರಾರರ ಸಮ್ಮುಖದಲ್ಲಿ, ಭಕ್ತರ ಅಮಿತೋತ್ಸಾಹದ ನಡುವೆ ಮೂರ್ತಿ ಪ್ರತಿಷ್ಠಾಪನೆ ನೆರವೇರಲಿದೆ. ಇದನ್ನೂ ಓದಿ: ಬೆಂಗ್ಳೂರು ಸೇರಿದಂತೆ ರಾಜ್ಯದೆಲ್ಲೆಡೆ ಭಾರೀ ಮಳೆ – ಹಲವೆಡೆ ಅವಾಂತರ

21 ರಂದು ಸಂಜೆ ಗಣಪತಿಪೂಜೆ, ವಿದ್ವಜ್ಜನ ಪ್ರಾರ್ಥನೆ, ದೇವತಾ ಪ್ರಾರ್ಥನೆ, ಕಳಸ ಪ್ರತಿಷ್ಟಾಪನೆ ಕಾರ್ಯ ಶುಭಾರಂಭವಾಗಲಿದೆ. 22 ರಂದು ಬೆಳಗ್ಗೆ 63ಅಡಿಯ ಶ್ರೀರಾಮಾಂಜನೇಯ ಚರಪ್ರತಿಷ್ಟಾನದ ಪೂಜೆ, ಹೋಮ ಸಂಕಲ್ಪವನ್ನು ಸಿದ್ದಗಂಗಾಮಠ ಸಿದ್ದಲಿಂಗಾಮಹಾಸ್ವಾಮೀಜಿ ನೇತೃತ್ವದಲ್ಲಿ ಪ್ರಾರಂಭವಾಗಲಿದೆ.

23 ರಂದು ಬೆಳಗ್ಗೆ 11ಗಂಟೆಗೆ ಶ್ರೀರಾಮಾಂಜನೇಯ ಚರ ಪ್ರತಿಷ್ಠಾಪನೆ ಮತ್ತು ಲೋಕರ್ಪಣೆಯನ್ನು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು, ಅದಿ ಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ ಅವರು ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರೈಲ್ವೆ ಮತ್ತು ಜಲಶಕ್ತಿಮ ಯೋಜನಾ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ, ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಹೆಚ್.ಎಂ.ರೇವಣ್ಣ, ಶಾಸಕರಾದ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಕೆ.ಗೋಪಾಲಯ್ಯ, ರಾಜ್ಯ ಸಭಾ ಸದಸ್ಯ ಸುಧಾಂಶು ತ್ರಿವೇದಿ ಭಾಗವಹಿಸಲಿದ್ದಾರೆ.

ಶ್ರೀರಾಮಾಂಜನೇಯ ಚರ ಪ್ರತಿಷ್ಠಾಪನಾ ಸ್ವಾಗತ ಸಮಿತಿಯಲ್ಲಿ ಲೋಕಸಭಾ ಸದಸ್ಯ ಪಿ.ಸಿ.ಮೋಹನ್, ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಸುರೇಶ್ ಕುಮಾರ್, ರಾಜಕೀಯ ಮುಖಂಡ ಆರ್.ವಿ.ಹರೀಶ್ ರವರು ಸಹಕಾರ ನೀಡುತ್ತಿದ್ದಾರೆ. 63ಅಡಿ ಶ್ರೀರಾಮಾಂಜನೇಯ ಚರಮೂರ್ತಿ ಶಿವಮೊಗ್ಗದ ಶಿಲ್ಪಿ ಜೀವನ್ ರವರು 8ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಿದ್ದಾರೆ.

ಧರ್ಮಸ್ಥಳದ ಡಾ. ವಿರೇಂದ್ರಹೆಗಡೆ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನೆರವೇರುತ್ತಿದ್ದು, ಮಾಜಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ, ಚಲನಚಿತ್ರ ನಟರುಗಳಾದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್, ರಮೇಶ್ ಅರವಿಂದ್, ಶ್ರೀಮುರುಳಿ ಹಾಗೂ ಬಿಜೆಪಿ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ರವರು, ಆನೇಕ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇವಾ ಮಂಡಳಿ ಅಧ್ಯಕ್ಷ ಕೆ.ಎಸ್.ಶ್ರೀಧರ್, ಮಾಜಿ ಬಿಬಿಎಂಪಿ ಸದಸ್ಯ ಮೋಹನ್ ಕುಮಾರ್, ಶ್ರೀಮತಿ ಜಯರತ್ನ, ಶಿಲ್ಪಿ ಜೀವನ್ ಶಿವಮೊಗ್ಗ ಇದ್ದರು. ಇದನ್ನೂ ಓದಿ: ಹೆಗ್ಗಾರಿಗೆ ಹಗ್ಗವೇ ಗತಿ – ಮೂರು ವರ್ಷದ ಹಿಂದೆ ಬಿದ್ದ ಸೇತುವೆಗಿಲ್ಲ ಸರ್ಕಾರದ ಅನುದಾನ!

Share This Article