ಕೋವಿಡ್‌ ಲಸಿಕೆಯ ಬೂಸ್ಟರ್‌ ಡೋಸ್‌ ಪಡೆದವರಲ್ಲೂ ಓಮಿಕ್ರಾನ್‌ ಪತ್ತೆ!

Public TV
1 Min Read

ಸಿಂಗಾಪುರ: ಕೋವಿಡ್‌ ಮೂರನೇ ಅಲೆ ಭೀತಿ ಶುರುವಾಗಿರುವ ಹೊತ್ತಿನಲ್ಲೇ ಬೂಸ್ಟರ್‌ ಡೋಸ್‌ ಬಗ್ಗೆಯೂ ಭರವಸೆಯ ಮಾತುಗಳು ವ್ಯಕ್ತವಾಗಿದೆ. ಕೋವಿಡ್‌ ಲಸಿಕೆ ಪಡೆದವರಲ್ಲಿ ಮತ್ತಷ್ಟು ರೋಗನಿರೋಧಕ ಶಕ್ತಿ ಹೆಚ್ಚಿಸಲು ಬೂಸ್ಟರ್‌ ಡೋಸ್‌ ಸಹಕಾರಿಯಾಗಲಿದೆ ಎಂದು ಅಧ್ಯಯನಗಳು ಪ್ರತಿಪಾದಿಸಿವೆ. ಆದರೆ ಬೂಸ್ಟರ್‌ ಡೋಸ್‌ ಪಡೆದವರಲ್ಲೂ ಓಮಿಕ್ರಾನ್‌ ಸೋಂಕು ಪತ್ತೆಯಾಗಿರುವುದು ಆತಂಕ ಹೆಚ್ಚಿಸಿದೆ.

ಹೌದು, ಕೋವಿಡ್‌-19 ಬೂಸ್ಟರ್‌ ಪಡೆದಿದ್ದರೂ ಸಿಂಗಾಪುರದ ಇಬ್ಬರಲ್ಲಿ ಓಮಿಕ್ರಾನ್‌ ಸೋಂಕು ಪತ್ತೆಯಾಗಿದೆ. ವಿಮಾನ ಪ್ರಯಾಣಿಕರ ಸೇವಾ ಕಾರ್ಯಕರ್ತೆಯಾಗಿ ಕೆಲಸ ನಿರ್ವಹಿಸುತ್ತಿರುವ 24 ವರ್ಷದ ಮಹಿಳೆಗೆ ಓಮಿಕ್ರಾನ್‌ ದೃಢಪಟ್ಟಿದೆ. ಸ್ಥಳೀಯವಾಗಿ ಪತ್ತೆಯಾದ ಮೊದಲ ಪ್ರಕರಣ ಇದಾಗಿದೆ. ಮತ್ತೊಬ್ಬ ಜರ್ಮನಿಯಿಂದ ಸಿಂಗಾಪುರಕ್ಕೆ ಆಗಮಿಸಿದ್ದ. ಇಬ್ಬರೂ ಬೂಸ್ಟರ್‌ ಡೋಸ್‌ ಪಡೆದುಕೊಂಡಿದ್ದರು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಓಮಿಕ್ರಾನ್‌ ಸೋಂಕಿತನ ಪತ್ನಿ, ಬಾಮೈದುನನಿಗೂ ಸೋಂಕು- ಗುಜರಾತ್‌ನಲ್ಲಿ 3ಕ್ಕೇರಿದ ಸಂಖ್ಯೆ

OMICRON Karnataka

ಫೈಜರ್‌ ಹಾಗೂ ಬಯೋನ್‌ಟೆಕ್‌ ಲಸಿಕಾ ತಯಾರಿಕಾ ಸಂಸ್ಥೆಗಳ ಆರಂಭಿಸಿರುವ ಲ್ಯಾಬ್‌ ಅಧ್ಯಯನಗಳು, ಓಮಿಕ್ರಾನ್‌ ರೂಪಾಂತರವನ್ನು ತಟಸ್ಥಗೊಳಿಸಲು ಕೋವಿಡ್‌ ಲಸಿಕೆಯ ಮೂರನೇ ಡೋಸ್‌ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದವು. ಕೋವಿಡ್‌ ವಿರುದ್ಧ ಹೋರಾಡಲು ಎರಡು ಡೋಸ್‌ ಲಸಿಕೆ ಪಡೆಯುವುದು ಅಗತ್ಯ. ಹೆಚ್ಚುವರಿಯಾಗಿ ಬೂಸ್ಟರ್‌ ಡೋಸ್‌ ಪಡೆಯುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಮತ್ತಷ್ಟು ಹೆಚ್ಚುತ್ತದೆ ಎಂದು ಅಧ್ಯಯನ ತಿಳಿಸಿತ್ತು.

ಓಮಿಕ್ರಾನ್‌ ಸೋಂಕಿಗೆ ತುತ್ತಾಗಿರುವ ಇಬ್ಬರನ್ನೂ ಐಸೋಲೇಷನ್‌ ಮಾಡಲಾಗಿದೆ. ಅವರ ಸಂಪರ್ಕಕ್ಕೆ ಬಂದವರನ್ನೂ 10 ದಿನ ಮನೆಯಲ್ಲೇ ಕ್ವಾರಂಟೈನ್‌ ಮಾಡಲಾಗಿದೆ. ಈ ವೇಳೆ ಅವರಿಗೆ ಅಗತ್ಯ ವಸ್ತುಗಳನ್ನು ಪೂರೈಸಲಾಗುವುದು ಎಂದು ಸಚಿವಾಲಯ ಮಾಹಿತಿ ನೀಡಿದೆ. ಇದನ್ನೂ ಓದಿ: ಕರ್ನಾಟಕ: ಓಮಿಕ್ರಾನ್‌ನಿಂದ ಗುಣಮುಖರಾಗಿ ಡಿಸ್ಚಾರ್ಜ್‌ ಆದವರಿಗೆ ಹೊಸ ಗೈಡ್‌ಲೈನ್ಸ್‌

Share This Article
Leave a Comment

Leave a Reply

Your email address will not be published. Required fields are marked *