ಜಿಂಬಾಬ್ವೆಯಿಂದ ಗುಜರಾತ್‌ಗೆ ವಾಪಸ್ಸಾಗಿದ್ದ ವ್ಯಕ್ತಿಯಲ್ಲಿ ಓಮಿಕ್ರಾನ್‌ ಪತ್ತೆ- ಭಾರತದಲ್ಲಿ 3ಕ್ಕೇರಿದ ಸಂಖ್ಯೆ

Public TV
1 Min Read

ಗಾಂಧಿನಗರ: ಜಿಂಬಾಬ್ವೆಯಿಂದ ಗುಜರಾತ್‌ಗೆ ವಾಪಸ್ಸಾಗಿದ್ದ ವ್ಯಕ್ತಿಯಲ್ಲಿ ಓಮಿಕ್ರಾನ್‌ ಇರುವುದು ಪತ್ತೆಯಾಗಿದೆ. ಆ ಮೂಲಕ ದೇಶದಲ್ಲಿ ಓಮಿಕ್ರಾನ್‌ ಸೋಂಕು ಪ್ರಕರಣಗಳ ಸಂಖ್ಯೆ 3ಕ್ಕೇರಿದೆ.

ಜಾಮ್‌ನಗರ ನಿವಾಸಿ 72 ವರ್ಷ ವಯಸ್ಸಿನ ವ್ಯಕ್ತಿಯಲ್ಲಿ ಓಮಿಕ್ರಾನ್‌ ಸೋಂಕು ಪತ್ತೆಯಾಗಿದೆ ಎಂದು ಗುಜರಾತ್‌ ಆರೋಗ್ಯ ಆಯುಕ್ತ ಜೈ ಪ್ರಕಾಶ್‌ ಶಿವಹರೆ ತಿಳಿಸಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್‌ ಚಿಕಿತ್ಸೆಗೆ ಆರೋಗ್ಯ ಇಲಾಖೆಯಿಂದ ಸಿದ್ಧತೆ

ಸೋಂಕಿತನನ್ನು ಐಸೊಲೇಟ್‌ ಮಾಡಲಾಗಿದೆ. ಆತ ತಂಗಿದ್ದ ಪ್ರದೇಶವನ್ನು ಸೂಕ್ಷ್ಮ ಕಂಟೈನ್‌ಮೆಂಟ್‌ ವಲಯ ಎಂದು ಘೋಷಿಸಲಾಗಿದೆ. ಆತನ ಸಂಪರ್ಕಕ್ಕೆ ಬಂದವರ ಪತ್ತೆ ಹಾಗೂ ಪರೀಕ್ಷೆ ಕಾರ್ಯ ನಡೆಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮನೋಜ್‌ ಅಗರ್‌ವಾಲ್‌ ಹೇಳಿದ್ದಾರೆ.

ಕರ್ನಾಟಕದಲ್ಲಿ ಓಮಿಕ್ರಾನ್‌ ಸೋಂಕಿತ ಎರಡು ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರಿನ ಒಬ್ಬರು ಹಾಗೂ ಬೆಂಗಳೂರಿಗೆ ಬಂದಿದ್ದ ದಕ್ಷಿಣ ಆಫ್ರಿಕಾ ಪ್ರಜೆ ಈಗಾಗಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್‌ ಪತ್ತೆಯಾದ ನಂತರ ದೇಶದ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಪರೀಕ್ಷೆ ಹಾಗೂ ಕಣ್ಗಾವಲನ್ನು ತೀವ್ರಗೊಳಿಸಲಾಗಿದೆ. ಇದನ್ನೂ ಓದಿ: ಲಸಿಕೆ ಪ್ರಮಾಣ ಪತ್ರ ಎಡವಟ್ಟು – ವ್ಯಾಕ್ಸಿನ್ ಪಡೆಯಲು ಬಂದಾತನಿಗೆ ಶಾಕ್

ಓಮಿಕ್ರಾನ್‌ ಅತಿ ವೇಗವಾಗಿ ಹರಡುತ್ತದೆಯೇ ಅಥವಾ ದೇಹದಲ್ಲಿ ಹೆಚ್ಚು ಪರಿಣಾಮ ಬೀರುತ್ತದೆಯೇ ಎಂಬ ಬಗ್ಗೆ ತಿಳಿದುಕೊಳ್ಳಲು ಕಾಲಾವಕಾಶ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *