ಓಲಾ ಉದ್ಯೋಗಿ ಆತ್ಮಹತ್ಯೆ – ಸಿಇಓ ಭವಿಶ್‌ ಅಗರ್‌ವಾಲ್‌ ಮೇಲೆ ಎಫ್‌ಐಆರ್‌

Public TV
2 Min Read

– ಸಂಬಳ ನೀಡದೇ ಕಿರುಕುಳ
– ಡೆತ್‌ ನೋಟ್‌ ಬರೆದು ಆತ್ಮಹತ್ಯೆ

ಬೆಂಗಳೂರು: ಪ್ರಸಿದ್ಧ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಕಂಪನಿ ಓಲಾ (OLA) ಸಿಬ್ಬಂದಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಇಓ ಭವಿಶ್‌ ಅಗರ್‌ವಾಲ್‌ (Bhavish Aggarwal), ಓಲಾ ಸಂಸ್ಥೆ ಮತ್ತು ಎಂಜಿನಿಯರ್‌ ಮೇಲೆ ಎಫ್‌ಐಆರ್‌ ದಾಖಲಾಗಿದೆ.

ಕಂಪನಿಯ ಹೋಮೋಲೋಗೇಷನ್ ವಿಭಾಗದ ಅರವಿಂದ್ ಕೆ(38) ಅವರು ಚಿಕ್ಕಲಸಂದ್ರದಲ್ಲಿರುವ ಮಂಜುನಾಥನಗರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಸೆ.28 ರಂದು ವಿಷ ಸೇವಿಸಿ ಆತ್ಮಹತ್ಯೆ (Sucidde) ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಂಡ ಎರಡು ದಿನದ ಬಳಿಕ ಅರವಿಂದ್ ಅಕೌಂಟ್ 17.46 ಲಕ್ಷ ರೂ. ಹಣ ಜಮೆಯಾಗಿತ್ತು.

ಹಣ ಜಮೆಯಾದ ಬಗ್ಗೆ ಅನುಮಾನದಿಂದ ಕಂಪನಿಯವರನ್ನ ಕುಟುಂಬಸ್ಥರು ಪ್ರಶ್ನಿಸಿದ್ದರು. ಆದರೆ ಕಂಪನಿಯಿಂದ ಸರಿಯಾದ ಸ್ಪಷ್ಟನೆ ಸಿಕ್ಕಿರಲಿಲ್ಲ. ಹೀಗಾಗಿ ಅನುಮಾನ ಹೆಚ್ಚಾದ ನಂತರ ಮನೆಯನ್ನು ಪರಿಶೀಲಿಸಿದಾಗ 28 ಪುಟಗಳ ಡೆತ್ ನೋಟ್ ಪತ್ತೆಯಾಗಿತ್ತು. ಡೆತ್‌ ನೋಟ್‌ ಆಧಾರದ ಮೇಲೆ ಅರವಿಂದ್ ಅವರ ಸಹೋದರ ಅಶ್ವಿನ್‌ ಅವರು ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು ಎಫ್‌ಐಆರ್‌ ದಾಖಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಅಡಿ ಸುಬ್ರತ್ ಕುಮಾರ್ ದಾಸ್(ಎ1),ಭವೀಶ್ ಅಗರ್ವಾಲ್ (ಎ2),ಓಲಾ ಎಲೆಕ್ಟ್ರಿಕ್ ಕಂಪನಿ(ಎ3) ಆರೋಪಿಗಳನ್ನಾಗಿ ಮಾಡಲಾಗಿದೆ.

 ಆತ್ಮಹತ್ಯೆಗೆ ಶರಣಾದ ಅರವಿಂದ್ ಕೆ
ಆತ್ಮಹತ್ಯೆಗೆ ಶರಣಾದ ಅರವಿಂದ್ ಕೆ

ದೂರಿನಲ್ಲಿ ಏನಿದೆ?
ನನ್ನ ತಮ್ಮ ಅರವಿಂದ್ ಕೋರಮಂಗಲದಲ್ಲಿರುವ ಓಲಾ ಎಲೆಕ್ಟ್ರಿಕ್‌ ಕಂಪನಿಯಲ್ಲಿ 2022 ರಿಂದ ಹೋಮೋ ಲೋಗೇಷನ್ ಎಂಜಿನಿಯರ್ ಆಗಿ ಉದ್ಯೋಗ ಮಾಡುತ್ತಿದ್ದ. ಸೆ.28ರ ಬೆಳಗ್ಗೆ 10:45 ರಂದು ಆತ್ಮಹತ್ಯೆಗೆ ಯತ್ನಿಸಿದ್ದು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಆತನ ಕೋಣೆಯಲ್ಲಿ ಡೆತ್‌ನೋಟ್‌ ಸಿಕ್ಕಿದ್ದರೂ ಸಾವಿನ ಬಗ್ಗೆ ಸರಿಯಾದ ವಿವರ ತಿಳಿಯದ ಕಾರಣ ಅಸಹಜ ಸಾವಿನ ಅಡಿ ಪ್ರಕರಣ ದಾಖಲಾಗಿತ್ತು.  ಇದನ್ನೂ ಓದಿ:  ಬೆಂಗಳೂರು | ಜಿಟಿ ಮಾಲ್‌ನ 3ನೇ ಫ್ಲೋರ್‌ನಿಂದ ಬಿದ್ದು ವ್ಯಕ್ತಿ ಸಾವು

ಅರವಿಂದ್‌ ಮೃತಪಟ್ಟ ಎರಡು ದಿನದ ನಂತರ ಅಂದರೆ ಸೆ.30 ರಂದು ಸಹೋದರನ  ಖಾತೆಗೆ 17,46,313 ರೂ. ಹಣವನ್ನು NEFT ಮೂಲಕ ಓಲಾ ಕಂಪನಿ ಜಮೆ ಮಾಡಿದೆ. ಅನುಮಾನಾಸ್ಪದವಾಗಿ ಹಣ ಜಮೆಯಾದ ಬಗ್ಗೆ ಕಂಪನಿ ಸಿಬ್ಬಂದಿಯನ್ನು ಪ್ರಶ್ನೆ ಮಾಡಿದ್ದಕ್ಕೆ ನಮಗೆ ಯಾವುದೇ ಸರಿಯಾದ ಉತ್ತರ ನೀಡಲಿಲ್ಲ.

ನಂತರ ಕಂಪನಿಯ ಪ್ರತಿನಿಧಿಗಳಾದ ಕೃತೇಶ್ ದೇಸಾಯಿ ಪರಮೇಶ್ ಮತ್ತು ರೋಷನ್ ಎಂಬುವರು ತಮ್ಮ ಮನೆಗೆ ಬಂದು ಹಣಕಾಸಿನ ವ್ಯವಹಾರದ ಬಗ್ಗೆ, ಅಸ್ಪಷ್ಟವಾಗಿ ಮಾಹಿತಿ ನೀಡಿದ್ದು ಇದು ಕಂಪನಿಯವರ ತಪ್ಪುಗಳನ್ನು ಮರೆಮಾಚುವ ಪ್ರಯತ್ನದಂತೆ ಕಂಡುಬಂದಿದ್ದು ನಮಗೆ ಅನುಮಾನ ಮೂಡಿಸಿದೆ.

ಡೆತ್ ನೋಟ್‌ನಲ್ಲಿ ಕಂಪನಿಯ ಹೆಡ್ ಆಫ್ ಹೋಮೋರೋಗೇಷನ್ ಎಂಜಿನಿಯರ್ ಸಂಬ್ರತ್ ಕುಮಾರ್ ದಾಸ್ ಮತ್ತು ಕಂಪನಿ ಮಾಲೀಕ ಬಾವೀಶ್ ಅಗರ್‌ವಾಲ್‌ ಕೆಲಸದಲ್ಲಿ ಒತ್ತಡ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ತನಗೆ ನೀಡಬೇಕಾಗಿರುವ ವೇತನ ಮತ್ತು ಇತರೆ ಭತ್ಯೆ ನೀಡದೇ ಕಿರುಕುಳ ನೀಡುತ್ತಿದ್ದರಿಂದ ತಾನು ಬೇಸತ್ತು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಉಲ್ಲೇಖಿಸಿದ್ದಾನೆ. ಹೀಗಾಗಿ ತನ್ನ ತಮ್ಮನ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ದೂರು ನೀಡುತ್ತಿದ್ದೇನೆ.

Share This Article