ಜಾಗತಿಕ ತೈಲ, ಅನಿಲ ಬಿಕ್ಕಟ್ಟು; ಅಗತ್ಯ ಸರಕುಗಳ ಕಾಯ್ದೆಯ ಸೆಕ್ಷನ್ 3 ಜಾರಿಗೊಳಿಸಿದ ಸರ್ಕಾರ

2 Min Read

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಭಾರತದ ಮೇಲೂ ಹಲವು ಸಮಸ್ಯೆ ತಂದೊಡ್ಡಿದೆ. ಕಚ್ಚಾತೈಲ, ಗ್ಯಾಸ್ ಸಮಸ್ಯೆ ಬಳಿಕ ಷೇರುಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಠಿಯಾಗುತ್ತಿದ್ದು, ರೂಪಾಯಿ ಮೌಲ್ಯವೂ ಕುಸಿಯುತ್ತಿದೆ. ಈ ನಡುವೆ ಬ್ಲ್ಯಾಕ್ ಮಾರ್ಕೆಟ್ ಮೇಲೆ ನಿಗಾ ವಹಿಸಲು ಸರ್ಕಾರ ಅಗತ್ಯ ಸರಕುಗಳ ಕಾಯ್ದೆಯ ಸೆಕ್ಷನ್ 3 ಜಾರಿ ಮಾಡಿದೆ.

ಅಮೆರಿಕ-ಇಸ್ರೇಲ್‌, ಇರಾನ್ ಸಂಘರ್ಷ 21 ದಿನಕ್ಕೆ ಕಾಲಿಟ್ಟಿದೆ. ಯುದ್ಧ ಇನ್ನಷ್ಟು ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ. ಹಿಗಾಗಿ, ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಸೇರಿದಂತೆ ಗ್ಯಾಸ್ ಸಮಸ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಗ್ಯಾಸ್ ಅನ್ನು ಅಗತ್ಯ ಸರಕುಗಳ ಕಾಯ್ದೆಗೆ ಸೇರಿಸಿದ್ದ ಸರ್ಕಾರ ಈಗ, ಅಗತ್ಯ ಸರಕುಗಳ ಕಾಯ್ದೆಯ ಸೆಕ್ಷನ್ 3 ಅನ್ನು ಜಾರಿಗೊಳಿಸಿದೆ.

ಸೆಕ್ಷನ್ 3 ರ ಜಾರಿಯಿಂದ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ನೈಸರ್ಗಿಕ ಅನಿಲದ ಉತ್ಪಾದನೆ, ಸಂಸ್ಕರಣೆ, ಸಂಸ್ಕರಣೆ, ಸಂಗ್ರಹಣೆ, ಆಮದು, ರಫ್ತು, ಮಾರುಕಟ್ಟೆ ಮತ್ತು ಬಳಕೆಯಲ್ಲಿ ತೊಡಗಿರುವ ಎಲ್ಲಾ ಕಂಪನಿಗಳು ಮಾಹಿತಿಯನ್ನು ಸರ್ಕಾರದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶದೊಂದಿಗೆ ನವೀಕೃತ ಡೇಟಾವನ್ನು ಹಂಚಿಕೊಳ್ಳುವುದು ಕಡ್ಡಾಯವಾಗಲಿದೆ.

ಗಲ್ಫ್ ಪ್ರದೇಶದಲ್ಲಿನ ಕೆಲವು ವಾಯುಪ್ರದೇಶಗಳನ್ನು ತಪ್ಪಿಸುವಂತೆ ಸೂಚನೆ
ಇರಾನ್ ಗಲ್ಫ್ ದೇಶಗಳ ಮೇಲೆ ದಾಳಿ ಮುಂದುವರಿಸಿರುವ ಹಿನ್ನೆಲೆ ಗಲ್ಫ್ ಪ್ರದೇಶದಲ್ಲಿನ ಕೆಲವು ವಾಯುಪ್ರದೇಶಗಳನ್ನು ತಪ್ಪಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯದಿಂದ ಸೂಚನೆ ನೀಡಿದೆ. ಬಹ್ರೇನ್, ಇರಾನ್, ಇರಾಕ್, ಇಸ್ರೇಲ್, ಜೋರ್ಡಾನ್, ಕುವೈತ್, ಲೆಬನಾನ್, ಕತಾರ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ವಾಯುಪ್ರದೇಶಗಳನ್ನು ತಪ್ಪಿಸುವಂತೆ ಹಾಗೂ ಓಮನ್ ಮತ್ತು ಸೌದಿ ಅರೇಬಿಯಾ ವಾಯುಪ್ರದೇಶದೊಳಗೆ FL 320 ಅಥವಾ 32,000 ಅಡಿಗಳಿಗಿಂತ ಕಡಿಮೆ ಕಾರ್ಯನಿರ್ವಹಿಸದಂತೆ ಸಲಹೆ ನೀಡಲಾಗಿದೆ.

ಕುಸಿದ ರೂಪಾಯಿ ಮೌಲ್ಯ; ಷೇರು ಮಾರುಕಟ್ಟೆ ಅಧಃಪತನ
ಮಧ್ಯಪ್ರಾಚ್ಯದ ಸಂಘರ್ಷದಿಂದಾಗಿ ಭಾರತದ ಷೇರುಮಾರುಕಟ್ಟೆಯಲ್ಲಿ ದೊಡ್ಡ ಕುಸಿತ ಕಂಡುಬಂದಿದೆ. ಇಂದು ಮಾರುಕಟ್ಟೆಯಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದರೂ ನಿನ್ನೆ ಸೆನ್ಸೆಕ್ಸ್ 2,496 ಅಂಕಗಳು, ನಿಫ್ಟಿ 50 ಇಂಡೆಕ್ಸ್ 775.65 ಅಂಕಗಳ ಕುಸಿದಿತ್ತು. ಇದರಿಂದ ಹೂಡಿಕೆದಾರರಿಗೆ 17 ಲಕ್ಷ ಕೋಟಿ ನಷ್ಟವಾಗಿತ್ತು. ಈ ಬೆನ್ನಲ್ಲೇ ಭಾರತದ ರೂಪಾಯಿ ಮೌಲ್ಯ ಕುಸಿದಿದೆ. ಇಂದು 19 ಪೈಸೆ ಕುಸಿತದೊಂದಿಗೆ 93.08 ಕ್ಕೆ ರೂಪಾಯಿ ಮೌಲ್ಯ ತಲುಪಿದೆ.

Share This Article