SSLC ಫಲಿತಾಂಶ ಸುಧಾರಣೆಗೆ ಅಧಿಕಾರಿಗಳ ಕಸರತ್ತು: ಶಿಕ್ಷಕರ ಕೊರತೆ ನಡುವೆ ನಾನಾ ಪ್ರಯತ್ನ

Public TV
2 Min Read

ರಾಯಚೂರು: ಶೈಕ್ಷಣಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಸ್‌ಎಸ್‌ಎಲ್‌ಸಿ (SSLC) ಫಲಿತಾಂಶ ಹೆಚ್ಚಿಸಲು ಸರ್ಕಾರ ನಾನಾ ಕಸರತ್ತು ನಡೆಸಿದೆ.

ರಾಯಚೂರಿನಲ್ಲಿ ಸ್ವತಃ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿಯೇ ಶಿಕ್ಷಕರು, ಅಧಿಕಾರಿಗಳಿಗೆ ಕಾರ್ಯಗಾರ ಮಾಡಿದ್ದಾರೆ. ಆದರೆ ಶಿಕ್ಷಕರ ಖಾಲಿ ಹುದ್ದೆಗಳನ್ನು ತುಂಬದೇ ಫಲಿತಾಂಶ ಸುಧಾರಣೆ ಹೇಗೆ ಅಂತ ಶಿಕ್ಷಣ ಪ್ರೇಮಿಗಳು ಪ್ರಶ್ನಿಸುತ್ತಿದ್ದಾರೆ.ಇದನ್ನೂ ಓದಿ: ಆನೆಯನ್ನು ಯಶಸ್ವಿಯಾಗಿ ಮೇಲಕ್ಕೆತ್ತಿದ ಅರಣ್ಯ ಇಲಾಖೆ – `ಆಪರೇಷನ್ ಕಾಡಾನೆ’ ಹೇಗಿತ್ತು?

ರಾಯಚೂರು ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ನೂರಾರು ಶೂನ್ಯ ಶಿಕ್ಷಕರ ಶಾಲೆಗಳಿವೆ. ಸುಮಾರು 25 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿಯಿವೆ. ವಿಷಯವಾರು ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗಿದೆ. ಆದರೂ ಶಿಕ್ಷಣ ಇಲಾಖೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸಲು ನಾನಾ ಕಾರ್ಯಕ್ರಮಗಳನ್ನ ಆಯೋಜಿಸುತ್ತಲೇ ಇದೆ. ಈ ವರ್ಷ ಜೂನ್‌ನಿಂದ 29 ಅಂಶಗಳಲ್ಲಿ ಕೆಲಸ ಮಾಡಲಾಗುತ್ತಿದ್ದು, ಆತ್ಮವಿಶ್ವಾಸದಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗಿ ಪರೀಕ್ಷೆ ಬರೆಯಲು ಅನುಸರಿಸಬೇಕಾದ ವಿಧಾನಗಳ ಬಗ್ಗೆ ಸುತ್ತೋಲೆ ಹೊರಡಿಸಿ ಶಾಲೆಗಳಲ್ಲಿ ಪಾಠ ಮಾಡಲು ಸೂಚಿಸಲಾಗಿದೆ. ಶಿಕ್ಷಕರು, ಅಧಿಕಾರಿಗಳಿಗೆ ತರಬೇತಿ ಮೇಲೆ ತರಬೇತಿ ನೀಡುತ್ತಿದೆ. ಪಾಸಿಂಗ್ ಅಂಕವನ್ನ ಕೂಡ ಸರ್ಕಾರ ಇಳಿಸಿದೆ.

ರಾಯಚೂರು, ವಿಜಯನಗರ, ಬಳ್ಳಾರಿ, ಕೊಪ್ಪಳ ಜಿಲ್ಲೆ ಫಲಿತಾಂಶ ಹೆಚ್ಚಿಸಲು ರಾಯಚೂರಿನಲ್ಲಿ ಶಿಕ್ಷಕರು, ಬಿಇಓಗಳು ಸೇರಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹಾಗೂ ಮಾಸ್ಟರ್ ಟ್ರೇನರ್ಸ್‌ಗಳಿಗೆ ಕಲಬುರಗಿ ವಿಭಾಗ ಮಟ್ಟದ ಕಾರ್ಯಗಾರ ಮಾಡಲಾಗಿದೆ. ಸ್ವತಃ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ.ರಶ್ಮಿ ಮಹೇಶ್ ಕಾರ್ಯಾಗಾರದಲ್ಲಿ ಭಾಗವಹಿಸಿ, ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಫಲಿತಾಂಶಕ್ಕೆ ಶಿಕ್ಷಕರ ಕೊರತೆಗೆ ದೊಡ್ಡ ಸಮಸ್ಯೆಯಾಗಿದೆ.

ಸರ್ಕಾರ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಮಾಸ್ಟರ್ ಟ್ರೇನರ್ಸ್‌ಗೆ ತರಬೇತಿ ಕಾರ್ಯಗಾರ, ಮಕ್ಕಳಿಗೆ ಸ್ಪೆಷಲ್ ಕ್ಲಾಸ್ ಮಾಡುತ್ತಿರುವುದು ಸರಿ, ಆದರೆ ಪ್ರಾಥಮಿಕ ಶಾಲಾ ಶಿಕ್ಷಣ ಗಟ್ಟಿಗೊಳಿಸದೇ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಹೇಗೆ ಸಾಧ್ಯ ಅನ್ನೋದು ಶಿಕ್ಷಣ ಪ್ರೇಮಿಗಳು, ಪೋಷಕರ ಪ್ರಶ್ನೆಯಾಗಿದೆ. ಶಿಕ್ಷಕರಿಲ್ಲದಿದ್ದರೆ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಿಲ್ಲ. ನೇರವಾಗಿ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸ್ಪೆಷಲ್ ಕ್ಲಾಸ್ ಮಾಡುವುದರಿಂದ ಪ್ರಯೋಜನವಿಲ್ಲ. ಖಾಲಿ ಹುದ್ದೆಗಳನ್ನ ಭರ್ತಿ ಮಾಡಿ. ಫಲಿತಾಂಶ ಕುಸಿತಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ ಸಿಇಓ, ಡಿಡಿಪಿಐಗಳು ಮಾತ್ರ ಹೊಣೆಗಾರರಲ್ಲಾ ಸರ್ಕಾರವೇ ನೇರ ಹೊಣೆಗಾರ ಅಂತ ಅಸಮಾಧಾನ ಹೊರಹಾಕಿದ್ದಾರೆ.ಇದನ್ನೂ ಓದಿ: ಗಣಿಗಾರಿಕೆ ಸಚಿವಾಲಯದ ನಿಯೋಗ ಹೊತ್ತ ವಿಮಾನ ಅಪಘಾತ – ಎಲ್ಲರೂ ಪಾರು

Share This Article