ಸಂತ್ರಸ್ತರಿಗೆ ಪರಿಹಾರ ಚೆಕ್ ನೀಡಲು ಲಂಚ ಕೇಳುತ್ತಿದ್ದಾರೆ ಅಧಿಕಾರಿಗಳು

Public TV
3 Min Read

ಬೆಳಗಾವಿ: ಜಿಲ್ಲೆಯ ಜನರು ಕಂಡು ಕೇಳರಿಯದ ಪ್ರವಾಹಕ್ಕೆ ಸಿಲುಕಿ ಈಗಲೂ ಒದ್ದಾಡುತ್ತಿದ್ದಾರೆ. ಪ್ರವಾಹ ನಿಂತು ತಿಂಗಳಾದರೂ ಬರೀ ಹತ್ತು ಸಾವಿರ ಕೊಡುವುದಕ್ಕೆ ರಾಜ್ಯ ಸರ್ಕಾರ ಸೀಮಿತವಾಗಿದೆ. ಈ ಮಧ್ಯೆ ಈ ಪರಿಹಾರ ಹಣದ ಚೆಕ್ ನೀಡಲು ಅಧಿಕಾರಿಗಳು ಹಾಗೂ ಕೆಲ ಸ್ಥಳೀಯ ಮುಖಂಡರು ಸಂತ್ರಸ್ತರ ಬಳಿ ಲಂಚ ಪೀಕುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ಡಿಸಿಎಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಿರುವ ಜಿಲ್ಲೆಯಲ್ಲಿ ಅಧಿಕಾರಿಗಳು ಏಜೆಂಟರುಗಳಿಂದ ಹಣದ ದಂಧೆ ನಡೆಯುತ್ತಿದೆ. ಒಂದೆಡೆ ಬಿದ್ದ ಮನೆಗಳು ಬಿದ್ದಲ್ಲಿಯೇ ಇವೆ. ಜನರಿಗೆ ಸುರಿಲ್ಲದೆ ದೇವಸ್ಥಾನ, ಮಸೀದಿಗಳಲ್ಲಿ ವಾಸಿಸುತ್ತಿದ್ದಾರೆ. ಇನ್ನೊಂದೆಡೆ ಸರ್ಕಾರದಿಂದ ಹಣ ಬಂದರೂ ನಿರಾಶ್ರಿತರಿಗೆ ಚೆಕ್‍ಗಳು ಮುಟ್ಟುತ್ತಿಲ್ಲ. ಜಲಪ್ರವಾಹಕ್ಕೆ ಸಿಕ್ಕು ಕಣ್ಣೀರಿಡುತ್ತಿರುವ ಕುಟುಂಬಗಳಿಂದ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಕಮಾಯಿ ಮಾಡುತ್ತಿದ್ದಾರೆ. ಇದನ್ನೂ ಓದಿ:ನೆರೆ ‘ಪೀಡಕರು’- ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂತ್ರಸ್ತರಿಗೆ ತಲುಪುತ್ತಿಲ್ಲ ಪರಿಹಾರ

ಸಂತ್ರಸ್ತರಿಗೆ ನೀಡುವ ಚೆಕ್‍ಗಳನ್ನು 1500 ರೂಪಾಯಿಂದ 3 ಸಾವಿರದವರೆಗೂ ಮಾರಾಟವಾಗುತ್ತಿವೆ. ರಾಮದುರ್ಗ, ಗೋಕಾಕ್, ಅರಭಾವಿಯ ಗ್ರಾಮದ ಕೆಲ ಮುಖಂಡರು ಹಾಗೂ ಸ್ಥಳೀಯ ಅಧಿಕಾರಿಗಳು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಅದರಲ್ಲೂ ರಾಮದುರ್ಗ ತಾಲೂಕಿನ ಹಂಪಿಹೊಳಿ ಗ್ರಾಮದಲ್ಲಿ ಹತ್ತು ಸಾವಿರದ ಚೆಕ್ ಕೊಟ್ಟರೆ ಸ್ಥಳದಲ್ಲೇ ಡ್ರಾ ಮಾಡಿಕೊಡಲಾಗುತ್ತೆ. ಚೆಕ್ ಹಿಡಿದು ಬ್ಯಾಂಕ್‍ಗಳಿಗೆ ಜನರು ಹೋದರೆ ಹಂಪಿಹೊಳಿ ಗ್ರಾಮದ ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿಗಳು ತಕ್ಷಣ ಹಣಬೇಕು ಎಂದರೆ ಗ್ರಾಮದ ಮುಖಂಡರನ್ನು ಸಂಪರ್ಕಿಸಿ ಎಂದು ಹೇಳಿ ಕಳುಹಿಸುತ್ತಿದ್ದಾರೆ. ಅವರ ಬಳಿ ಹೋದರೆ ಹಣ ಪಡೆಯಲು ಒಂದು ಚೆಕ್‍ಗೆ ಒಂದೂವರೆ ಸಾವಿರದಿಂದ ಮೂರು ಸಾವಿರದವರೆಗೂ ಲಂಚವನ್ನು ಜನರು ನೀಡಬೇಕಾಗಿದೆ. ಹೀಗೆ ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಮದ ಮುಖಂಡರು ಸಂತ್ರಸ್ತರ ಬಳಿ ಹಣ ವಸೂಲಿ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಪ್ರವಾಹದ ಹೆಸರಿನಲ್ಲಿ ಕೋಟ್ಯಾಂತರ ಅನುದಾನದ ಬಂದರೂ ಸಂತ್ರಸ್ತರಿಗೆ ಮಾತ್ರ ಅದು ಮುಟ್ಟುತ್ತಿಲ್ಲ. ಸಂತ್ರಸ್ತರ ಬದಲಿಗೆ ಪ್ರವಾಹದಿಂದ ಯಾವುದೇ ಹಾನಿಯಾಗದವರಿಗೆ ಚೆಕ್‍ಗಳು ಸುಲಭವಾಗಿ ಸಿಗುತ್ತಿವೆ. ಚೆಕ್ ಸಿಗದಿದ್ದಕ್ಕೆ ಗುರುವಾರವಷ್ಟೇ ಗೋಕಾಕ್ ತಾಲೂಕಿನ ಹಲವು ಗ್ರಾಮದ ನಿರಾಶ್ರಿತರು ಸರ್ಕಾರಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ಸರ್ಕಾರದಿಂದ ಚೆಕ್ ಬಂದರೂ ಅವುಗಳು ತಮಗೆ ಬೇಕಾದ ಕಾರ್ಯಕರ್ತರ ಕೈಗೆ ಸೇರುತ್ತಿವೆ. ಈ ದಂಧೆಯಲ್ಲಿ ಜನಪ್ರತಿನಿಧಿಗಳು ಹಾಗೂ ಮೇಲಾಧಿಕಾರಿಗಳು ಕೂಡ ಶಾಮೀಲಾಗಿದ್ದಾರಾ? ಜಿಲ್ಲಾಧಿಕಾರಿ ಎಸ್.ಬಿ ಬೊಮ್ಮನಹಳ್ಳಿ ಅವರಿಗೆ ಈ ಬಗ್ಗೆ ತಿಳಿದಿದ್ದರೂ ಸೈಲೆಂಟ್ ಆಗಿದ್ದಾರಾ ಎಂಬ ಅನುಮಾನಗಳು ಹುಟ್ಟುಕೊಂಡಿದೆ. ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ನಿರಾಶ್ರಿತರಿಗೆ ಆಗುತ್ತಿರುವ ಮೋಸವನ್ನು ತಡೆದು, ಈ ದಂಧೆಗೆ ಬ್ರೇಕ್ ಹಾಕಿ ಸಂತ್ರಸ್ತರಿಗೆ ಹಣ ತಲುಪಿಸುವ ವ್ಯವಸ್ಥೆ ಮಾಡಬೇಕಿದೆ.

ಈ ಹಿಂದೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡಿಯೂರಿನಲ್ಲಿ ಚೆಕ್ ಹಾಗೂ ರೇಷನ್ ಪಡೆಯೋಕೆ ಆಧಾರ್ ಕಾರ್ಡ್ ತೆಗೆದುಕೊಂಡು ಬನ್ನಿ ಎಂದು ಅಧಿಕಾರಿಗಳು ಸಂತ್ರಸ್ತರಿಗೆ ಗೋಳಾಡಿಸಿದ್ದರು. ಎಲ್ಲವೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ ಅಂದರೆ, ಎಲ್ಲಾದರೂ ಹೋಗಿ ಏನಾದರೂ ಮಾಡಿ, ಆಧಾರ್ ತಗೆದುಕೊಂಡು ಬಂದರೇನೆ ನಿಮಗೆ ಚೆಕ್ ಕೊಡುತ್ತೇವೆ ಎಂದು ಅಧಿಕಾರಿಗಳು ಸಂತ್ರಸ್ತರನ್ನು ಪೀಡಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿತ್ತು. ಪ್ರವಾಹಕ್ಕೆ ಕೆಲವರ ರೇಷನ್ ಕಾರ್ಡ್ ಕೂಡ ನೀರಿನಲ್ಲಿ ಕೊಚ್ಚಿ ಹೋಗಿರುವುದರಿಂದ ರೇಷನ್ ಸಿಗದೆ, ಕೆಲಸವೂ ಇಲ್ಲದೆ ಭಿಕ್ಷೆ ಬೇಡುವ ಸ್ಥಿತಿ ಬಂದಿದೆ. ಈ ನೋವಿನಲ್ಲೂ ಅಸಾಹಯಕರ ಜೀವ ಹಿಂಡುತ್ತಿರುವ ಅಧಿಕಾರಿಗಳ ಈ ಕಿರುಕುಳದಿಂದ ಸಂತ್ರಸ್ತರು ಕಣ್ಣೀರು ಹಾಕಿದ್ದರು.

ಪ್ರವಾಹದಿಂದ ಏನೆಲ್ಲಾ ಅನಾಹುತಗಳಾಗಿವೆ ಅನ್ನೋದು ರಾಜ್ಯದ ಜನತೆಗೆ ತಿಳಿದಿದೆ. ಪ್ರವಾಹ ಪೀಡಿತ ಪ್ರದೇಶದ ಜನರ ಬದುಕಿನ ಬಂಡಿಯ ಚಕ್ರಗಳೇ ಕಳಚಿಕೊಂಡಿವೆ. ಈಗ ಮತ್ತೆ ಆರಂಭದಿಂದ ಅವರು ಬದುಕು ಕಟ್ಟಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಒಂದು ಹೊತ್ತಿನ ಊಟಕ್ಕೂ ಬೇಡಿ ತಿನ್ನೋ ಪರಿಸ್ಥಿತಿ ಬಂದಿದೆ. ಹಾಕೋಳೋಕೆ ಇರೋ ಒಂದೇರಡು ಬಟ್ಟೆಯಲ್ಲೆ ಕಂಡವರ ಮನೆಯಲ್ಲಿ ಜೀವನ ನಡೆಸುವ ಹಾಗಾಗಿದೆ. ಆದರೆ ಇದರ ಮಧ್ಯೆ ಸ್ಥಳೀಯ ಅಧಿಕಾರಿಗಳ ಕಾಟ ಅತೀರೇಕವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *