ಐವರ ಜಲಸಮಾಧಿ ಬಳಿಕ ಎಚ್ಚೆತ್ತ ಅಧಿಕಾರಿಗಳು – ಆರಂಭವಾಯ್ತು ತಡೆಗೋಡೆ ನಿರ್ಮಾಣ ಕಾರ್ಯ

By
1 Min Read

ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ಕಾರು (Car) ನಾಲೆಗೆ ಬಿದ್ದು, ಐವರು ಜಲಸಮಾಧಿಯಾದ ಆಘಾತಕಾರಿ ಘಟನೆಯ ಬಳಿಕ ಇದೀಗ ಅಧಿಕಾರಿಗಳು ಎಚ್ಚೆತ್ತಿದ್ದಾರೆ. ದುರ್ಘಟನೆ ನಡೆದ ಸ್ಥಳದಲ್ಲಿ ಇದೀಗ ತಡೆಗೋಡೆ (Barrier) ನಿರ್ಮಿಸುವ ಕಾರ್ಯ ಆರಂಭವಾಗಿದೆ.

ದುರ್ಘಟನೆ ಪಾಂಡವಪುರ ತಾಲೂಕಿನ ಬನಘಟ್ಟ ಬಳಿಯ ವಿಸಿ ನಾಲೆಯಲ್ಲಿ (VC Canal) ಸಂಭವಿಸಿತ್ತು. ಭದ್ರವಾತಿ ನಿವಾಸಿಗಳಾದ ಚಂದ್ರಪ್ಪ (61), ಕೃಷ್ಣಪ್ಪ (60), ಧನಂಜಯ (55), ಬಾಬು ಹಾಗೂ ಜಯಣ್ಣ ಘಟನೆಯಲ್ಲಿ ಸಾವನ್ನಪ್ಪಿದ್ದರು. ಮೃತರು ಇಂಡಿಕಾ ಕಾರಿನಲ್ಲಿ ಮಂಗಳವಾರ ಸಂಜೆ 4:45 ರ ವೇಳೆಯಲ್ಲಿ ಮೈಸೂರಿನಿಂದ ಭದ್ರಾವತಿ ಕಡೆಗೆ ಪ್ರಯಾಣ ಬೆಳೆಸಿದ್ದರು. ಬನಘಟ್ಟದ ವಿಸಿ ನಾಲೆ ಸೇತುವೆ ಬಳಿ ಬರುತ್ತಿದ್ದಂತೆ ನಿಯಂತ್ರಣ ತಪ್ಪಿದ ಕಾರು ನೇರವಾಗಿ ನಾಲೆಗೆ ಉರುಳಿಬಿದ್ದಿದೆ.

ಕಿರಿದಾದ ರಸ್ತೆ ಹಾಗೂ ತಿರುವಿದ್ದ ಕಾರಣ ಚಾಲಕನಿಗೆ ಕಾರು ನಿಯಂತ್ರಿಸಲು ಸಾಧ್ಯವಾಗಿಲ್ಲ. ಅಲ್ಲದೇ ಕೆಆರ್‌ಎಸ್ ಅಣೆಕಟ್ಟಿನಿಂದ ನಾಲೆಗೆ ನೀರು ಬಿಟ್ಟಿರುವುದರಿಂದ ನಾಲೆಯಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ಇದರಿಂದ ನಾಲೆಗೆ ಬಿದ್ದ ಕಾರಿನಲ್ಲಿದ್ದ ಐವರು ಮೃತಪಟ್ಟಿದ್ದರು. ಇದನ್ನೂ ಓದಿ: ನಾಪತ್ತೆಯಾಗಿ ಮೂರು ದಿನಗಳ ಬಳಿಕ ದಟ್ಟ ಅರಣ್ಯದಲ್ಲಿ ಪತ್ತೆಯಾದ 85ರ ವೃದ್ಧೆ

ಇದೀಗ ಬಳಘಟ್ಟ ಬಳಿಯ ವಿಸಿ ನಾಲೆಗೆ ತಡೆಗೋಡೆ ನಿರ್ಮಿಸುವ ಕಾರ್ಯ ಆರಂಭವಾಗಿದೆ. ಅಧಿಕಾರಿಗಳು ಸ್ಥಳದಲ್ಲೇ ಖುದ್ದು ಹಾಜರಿದ್ದು ಕೆಲಸ ಮಾಡಿಸುತ್ತಿದ್ದಾರೆ. ತಡೆಗೋಡೆ ನಿರ್ಮಿಸುವ ಜೊತೆಗೆ ಹೆದ್ದಾರಿ ಪಕ್ಕದಲ್ಲಿದ್ದ ಗಿಡಗಂಟೆ ತೆರವುಗೊಳಿಸಿ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ.

ದುರ್ಘಟನೆ ಬಳಿಕ ಇಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಸ್ಥಳಕ್ಕೆ ಅಧಿಕಾರಿಗಳನ್ನು ಕರೆಸಿ ತಡೆಗೋಡೆ ನಿರ್ಮಿಸಲು ಸೂಚಿಸಿದ್ದಾರೆ. ಸದ್ಯ ರಾಷ್ಟ್ರೀಯ ಹೆದ್ದಾರಿ ವಲಯದ ಅಧಿಕಾರಿಗಳು ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಚಿಂತಾಮಣಿ ಮನೆಯ ಮೇಲೆ ಪೊಲೀಸ್‌ ದಾಳಿ – ಹುಲಿ ಉಗುರು ಪತ್ತೆ, ಯುವಕ ನಾಪತ್ತೆ

Share This Article