ಅಂಗವಿಕಲರ ತ್ರಿಚಕ್ರ ಬೈಸಿಕಲ್ ಕೊಟ್ಟು ಫೋಟೋ ತೆಗೆಸಿ ಕಸಿದುಕೊಂಡ್ರು!

Public TV
1 Min Read

ಚಿತ್ರದುರ್ಗ: ಅಂಗವಿಕಲ ಫಲಾನುಭವಿ ಅಂತಾ ವಾಹನ ಕೊಟ್ಟಿದೀವಿ ಅಂತಾ ಫೋಟೋ ತೆಗೆದು ಕಾರ್ಯಕ್ರಮ ಮುಗಿದ ಮೇಲೆ ಎರಡು ದಿನ ಆದ್ಮೇಲೆ ಗಾಡಿ ಕೊಡ್ತೀವಿ ಎಂದು ಹೇಳಿ ಎರಡೂವರೆ ತಿಂಗಳಾದ್ರೂ ನೀಡದೇ ಅವಮಾನ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಹೊಳಲ್ಕೆರೆ ತಾಲೂಕಿನ ಕೆಂಗುಂಟೆ ಗ್ರಾಮದ ನಿವಾಸಿ ಪ್ರಸನ್ನ ಕುಮಾರ್ ಹುಟ್ಟು ಅಂಗವಿಕಲನಾಗಿದ್ದು, ಮೂರು ಚಕ್ರದ ಬೈಸಿಕಲ್‍ಗಾಗಿ ತಾಲೂಕು ಪಂಚಾಯ್ತಿಗೆ ಅರ್ಜಿ ಸಲ್ಲಿಸಿದ್ರು. ಸಿ.ರವಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸಲ್ಲಿಸಿದ ಅರ್ಜಿಗೆ ಅನುಮೋದನೆ ಸಿಕ್ಕಿತ್ತು. ಬಳಿಕ ಅಧ್ಯಕ್ಷರು ಬದಲಾಗಿ ಸುನಿತಾ ಧನಂಜ್ ನಾಯಕ್ ಅಧ್ಯಕ್ಷರಾದ್ರು. ಇವ್ರು ಅಧ್ಯಕ್ಷರಾದ ಸುಮಾರು ಒಂದು ವರ್ಷಕ್ಕೆ ಅಂದ್ರೆ 2016 ಡಿಸೆಂಬರ್ 5 ರಂದು 17 ಮಂದಿಗೆ ಮೂರು ಚಕ್ರದ ಬೈಸಿಕಲ್ ನೀಡಲಾಯಿತು.

ಕಾರ್ಯಕ್ರಮ ಮುಗಿದ ಮೇಲೆ ಕೊಟ ವಾಹನವನ್ನ ಅಧಿಕಾರಿಗಳು ನಿಮ್ಮ ವಾಹನದ ಟಿ.ಪಿಯಾಗಿಲ್ಲ ಅಂತಾ ವಾಪಸ್ ಪಡೆದಿದ್ದಾರೆ. ಬೆಳಗ್ಗೆ ಪತ್ರಿಕೆಗಳಲ್ಲಿ ವಾಹನ ಕೊಡಲಾಗಿದೆ ಅನ್ನೋ ಫೋಟೋ ನೋಡಿ ಗಾಬರಿಯಾಗಿದ್ರು. ಸುಮಾರು ಎರಡೂವರೆ ತಿಂಗಳಿನಿಂದ ಅಲೆಯುತಿದ್ದರೂ ಪ್ರಸನ್ನಕುಮಾರ್ ಅವರಿಗೆ ವಾಹನ ಭಾಗ್ಯ ಸಿಕ್ಕಿಲ್ಲ.

ತಾಲೂಕು ಪಂಚಾಯ್ತಿ ಅಧಿಕಾರಿಗಳೇ ದಾಖಲೆಗಳನ್ನ ಜಿಲ್ಲಾ ವಿಕಲ ಚೇನತರ ಕಲ್ಯಾಣಾಧಿಕಾರಿಗಳ ಕಚೇರಿಗೆ ತಲುಪಿಸುವಲ್ಲಿ ವಿಳಂಬ ಮಾಡಿದ್ದಾರೆ. ಇದ್ರಲ್ಲಿ ನಮ್ಮದೇನೂ ಪಾತ್ರ ಇಲ್ಲ. ಕಚೇರಿಗೆ ಬಂದ ದಿನವೇ ವಾಹನಗಳನ್ನ ಕೊಡಿಸುವ ಉಸ್ತುವಾರಿ ಹೊತ್ತಿರುವ ಹಾವೇರಿಯ ಕಂಪನಿಗೆ ನಾವು ಪತ್ರ ರವಾನಿಸಿದ್ದೇವೆ. ಉಳಿದಂತೆ ತಾಂತ್ರಿಕವಾಗಿ ಯಾವುದೇ ತೊಂದರೆ ಇಲ್ಲ. ಟಿ.ಪಿ. ಬಂದ ಕೂಡಲೇ ವಾಹನ ನೀಡ್ತೀವಿ ಎಂದು ವಿಕಲ ಚೇತನರ ಕಲ್ಯಾಣ ಅಧಿಕಾರಿ ವೈಶಾಲಿ ಹೇಳಿದ್ದಾರೆ.

ಅಧಿಕಾರಿಗಳ ಬೇಜವಾಬ್ದಾರಿಯಿಂದ ವಿಕಲ ಚೇತನ ಪ್ರಸನ್ನ ಕುಮಾರರಿಗೆ ವಾಹನಭಾಗ್ಯ ಇದ್ರೂ, ಪಡೆಯುವ ಭಾಗ್ಯ ಇಲ್ಲವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಿಂಗಳುಗಟ್ಟಲೆ ವಿಕಲಚೇತನರನ್ನ ಕಚೇರಿಗೆ ಅಲೆಸಿಕೊಳ್ಳುವುದನ್ನ ಬಿಟ್ಟು ಪೂರಕವಾಗಿ ಕೆಲಸ ಮಾಡುವ ಮನಸ್ಸು ಬೇಕಿದೆ.

 

Share This Article
Leave a Comment

Leave a Reply

Your email address will not be published. Required fields are marked *