ರಸ್ತೆ ಕಾಮಗಾರಿ ಹಣ ನುಂಗಲು ಗ್ರಾಮವನ್ನೇ ಸೃಷ್ಟಿಸಿದ ಅಧಿಕಾರಿಗಳು

Public TV
2 Min Read

ರಾಯಚೂರು: ರಸ್ತೆಗಳೇ ಇಲ್ಲದ ಗ್ರಾಮಗಳನ್ನ ನೀವು ನೋಡಿರಬಹುದು. ಆದರೆ ಗ್ರಾಮವೇ ಇಲ್ಲದ ಜಾಗಕ್ಕೆ ರಸ್ತೆ ನಿರ್ಮಿಸಿರುವುದನ್ನ ನೋಡಿರಲಿಕ್ಕಿಲ್ಲ. ಆದರೆ ರಾಯಚೂರಿನಲ್ಲಿ ಅಧಿಕಾರಿಗಳು ಇಂತಹ ಎಡವಟ್ಟು ಕೆಲಸವನ್ನ ಮಾಡಿದ್ದಾರೆ. ವಿಶೇಷ ಅಭಿವೃದ್ಧಿ ಯೋಜನೆಯಡಿ ರಸ್ತೆ ಕಾಮಗಾರಿ ಮಾಡಿ ಕೋಟ್ಯಂತರ ರೂಪಾಯಿ ಸರ್ಕಾರಿ ಅನುದಾನವನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ.

ತಾಲೂಕಿನ ಪೂರತಿಪ್ಲಿ ಗ್ರಾಮದಿಂದ 2.3 ಕಿಲೋ ಮೀಟರ್‍ವರೆಗೆ ರಸ್ತೆ ಕಾಮಗಾರಿಯನ್ನೇನೋ ಮಾಡಲಾಗಿದೆ. ಆದರೆ ಅಲ್ಲಿ ಯಾವ ಕ್ಯಾಂಪ್ ಕೂಡ ಇಲ್ಲ. ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ ಹಾಗೂ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ದಿ ಸಂಸ್ಥೆಗಳು ವಿಶೇಷ ಅಭಿವೃದ್ಧಿ ಯೋಜನೆಯಡಿ 1 ಕೋಟಿ 61 ಲಕ್ಷ ಅನುದಾನದಲ್ಲಿ ಪೂರತಿಪ್ಲಿಯಿಂದ ಪೂರತಿಪ್ಲಿ ಕ್ಯಾಂಪ್‍ವರೆಗೆ 2.3 ಕೀ.ಮೀ ರಸ್ತೆ ನಿರ್ಮಿಸಿರುವುದಾಗಿ ಹೇಳಿಕೊಂಡಿವೆ. ಆದರೆ ರಾಯಚೂರು ತಹಶೀಲ್ದಾರ್ ಕಂದಾಯ ಇಲಾಖೆ ದಾಖಲೆಗಳಲ್ಲಿ ಪೂರತಿಪ್ಲಿ ಕ್ಯಾಂಪ್ ಹೆಸರಿನ ಗ್ರಾಮವೇಯಿಲ್ಲ ಅಂತ ವರದಿ ನೀಡಿದ್ದಾರೆ.

ಹಾಗಾದರೆ ರಸ್ತೆ ನಿರ್ಮಾಣದ ಹಿಂದಿನ ಉದ್ದೇಶವೇನು ಅನ್ನೊದು ಗ್ರಾಮಸ್ಥರ ಪ್ರಶ್ನೆಯಾಗಿದೆ. ರಸ್ತೆಯೂ ಕಳಪೆಯಾಗಿರುವುದರಿಂದ ಗುತ್ತೆದಾರನ ಜೊತೆ ಅಧಿಕಾರಿಗಳು ಹಾಗೂ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ಇದರಲ್ಲಿ ಶಾಮೀಲಾಗಿದ್ದಾರೆ ಅಂತ ಗ್ರಾಮಸ್ಥರು ಹಾಗೂ ಹೋರಾಟಗಾರರು ಆರೋಪಿಸಿದ್ದಾರೆ.

ಪೂರತಿಪ್ಲಿ ಕ್ಯಾಂಪ್ 2.8 ಕಿ.ಮೀ ಅನ್ನೊ ಮೈಲುಗಲ್ಲು, ಪೂರತಿಪ್ಲಿ ರಾಯಚೂರು ಪೂರತಿಪ್ಲಿ ಕ್ಯಾಂಪ್ ಅಂತ ಬರೆದಿರುವ ಮಾರ್ಗಸೂಚಿ ಫಲಕ, ರಸ್ತೆ ಕಾಮಗಾರಿಯ ಬೋರ್ಡ್ ಗಳು ಅಲ್ಲಲ್ಲಿ ಹಾಕಲಾಗಿದೆ. ಇವುಗಳನ್ನ ನೋಡಿದರೆ ಯಾರಿಗಾದರೂ ಇಲ್ಲೆಲ್ಲೋ ಪೂರತಿಪ್ಲಿ ಕ್ಯಾಂಪ್ ಹೆಸರಿನ ಗ್ರಾಮವಿದೆ ಎಂದು ಅನಿಸುತ್ತೆ. ಆದರೆ ಜಮೀನುಗಳಿಗೆ ಹೋಗಲು ಇದ್ದ ಪುಟ್ಟ ರಸ್ತೆಯನ್ನೇ ನಿವೇಶನಗಳು ಇಲ್ಲದ, ಜನವಸತಿಯಿಲ್ಲದ, ದಾಖಲೆಯಲ್ಲೂ ಇಲ್ಲದ ಪೂರತಿಪ್ಲಿ ಕ್ಯಾಂಪ್‍ವರೆಗೆ ರಸ್ತೆ ನಿರ್ಮಿಸಲಾಗಿದೆ. ದಾರಿಯಲ್ಲಿನ ಬಸವಣ್ಣನ ದೇವಾಲಯದವರೆಗೆ ರಸ್ತೆಯನ್ನ ಮಾಡಲಾಗಿದೆ. ಕೇವಲ ಮೂರು ತಿಂಗಳು ಅವಧಿಯಲ್ಲಿ ಸಂಪೂರ್ಣ ಕಾಮಗಾರಿ ಮುಗಿಸಿ ಗುತ್ತಿಗೆದಾರ ಸೈಯದ್ ಅಕ್ಬರ್ ಪಾಷಾ ಅನುದಾನ ಬಿಡುಗಡೆ ಮಾಡಿಸಿಕೊಂಡಿದ್ದಾರೆ.

ಕಾಮಗಾರಿ ಬಗ್ಗೆ ನೀಡಿದ ದೂರನ್ನ ಪರಿಶೀಲಿಸಿ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು ರಸ್ತೆಯಿಂದ ಜಮೀನಿಗೆ ಹೋಗುವ ರೈತರಿಗೆ ಅನುಕೂಲವಾಗಿದೆ ಅಂತ ವರದಿ ನೀಡಿ ಅಕ್ರಮವನ್ನ ಮುಚ್ಚಿಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ಬಸನಗೌಡ ದದ್ದಲ ಅನುದಾನ ದುರ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದಲೇ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಈ ಕಾಮಗಾರಿ ಮಾಡಿಸಿದ್ದಾರೆ ಎಂದು ರೈತ ಕೂಲಿ ಸಂಗ್ರಾಮ ಸಮಿತಿ ರಾಜ್ಯಾಧ್ಯಕ್ಷ ಬಸವರಾಜ್ ಗಾರಲದಿನ್ನಿ ಆರೋಪಿಸಿದ್ದಾರೆ.

ಜಿಲ್ಲೆಯಲ್ಲಿ ರಸ್ತೆಗಳೇ ಇಲ್ಲದ ಗ್ರಾಮಗಳು ಸಾಕಷ್ಟಿದ್ದರೂ ಗ್ರಾಮವೇ ಇಲ್ಲದ ಪ್ರದೇಶಕ್ಕೆ ರಸ್ತೆ ನಿರ್ಮಿಸಿರುವುದು ವಿಚಿತ್ರವಾಗಿದೆ. ಹೀಗಾಗಿ ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ತನಿಖೆ ನಡೆಸಿ ಕ್ರಮಕ್ಕೆ ಮುಂದಾಗಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *