ಹೊಸ ನಿಯಮಕ್ಕೂ ಮುಂಚೆಯೇ 6.53 ಲಕ್ಷ ದಂಡ ಕಟ್ಟಿದ್ದ ಟ್ರಕ್ ಮಾಲೀಕ

Public TV
1 Min Read

ಭುವನೇಶ್ವರ: ಟ್ರಕ್ ಮಾಲೀಕನೊಬ್ಬ ಹೊಸ ಮೋಟಾರು ವಾಹನಗಳ ಕಾಯ್ದೆ ಬರುವ ಮೊದಲೇ 6.53 ಲಕ್ಷ ದಂಡ ಕಟ್ಟಿರುವ ಘಟನೆ ಒಡಿಶಾದ ಸಂಬಲ್ಪುರದಲ್ಲಿ ನಡೆದಿದೆ.

ನಾಗಾಲ್ಯಾಂಡ್ ನೋಂದಾಯಿತ ಟ್ರಕ್ಕೊಂದು ಏಳು ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ 6.53 ಲಕ್ಷ ದಂಡವನ್ನು ಮಾಲೀಕ ಕಟ್ಟಿದ್ದಾರೆ. ಈ ಮಾಹಿತಿ ತಡವಾಗಿ ಬೆಳಕಿಗೆ ಬಂದಿದ್ದು, ಹೊಸ ಸಂಚಾರಿ ನಿಯಮ ಸೆಪ್ಟಂಬರ್ 1 ರಿಂದ ಜಾರಿಗೆ ಬಂದಿದ್ದರೆ ಈ ಟ್ರಕ್ ಮಾಲೀಕನಿಗೆ ಆಗಸ್ಟ್ 10 ರಂದೇ ಹಳೆಯ ಕಾಯ್ದೆಯ ಅಡಿ ಬರೋಬ್ಬರಿ 6.53 ಲಕ್ಷ ರೂ. ದಂಡ ವಿಧಿಸಲಾಗಿದೆ.

ಸಂಬಲ್ಪುರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಆರ್.ಟಿ.ಒ) ಟ್ರಕ್ ಚಾಲಕ ದಿಲೀಪ್ ಕಾರ್ತಾ ಮತ್ತು ಲಾರಿ ಮಾಲೀಕ ಶೈಲೇಶ್ ಶಂಕರ್ ಲಾಲ್ ಗುಪ್ತ ಅವರ ಲಾರಿಗೆ ಒಡಿಶಾ ಮೋಟಾರು ವಾಹನಗಳ ತೆರಿಗೆ (ಒಎಂವಿಟಿ) ಕಾಯ್ದೆಯಡಿ ರಸ್ತೆ ತೆರೆಗೆ ಪಾವತಿಸದ್ದಕ್ಕೆ 6,40,500 ರೂ ದಂಡ ಹಾಕಲಾಗಿದೆ.

ಶೈಲೇಶ್ ಶಂಕರ್ ಲಾಲ್ ಗುಪ್ತ ಲಾರಿಯನ್ನು 2014ರ ಜುಲೈ 21 ರಂದು ಖರೀದಿಸಿದ ನಂತರ ರಸ್ತೆ ತೆರಿಗೆಯನ್ನು ಪಾವತಿಸಿರಲಿಲ್ಲ. ಸೆ.30 ರಂದು ದಂಡವನ್ನು ಪಾವತಿ ಮಾಡಲು ತೆರಳಿದ್ದಾರೆ. ಹೀಗಾಗಿ 5 ವರ್ಷ ತೆರಿಗೆ ಪಾವತಿ ಮಾಡದೇ ಲಾರಿ ಚಾಲನೆ ಮಾಡಿದಕ್ಕೆ ಅವರಿಗೆ 6,40,500 ದಂಡ ಹಾಕಿದ್ದರೆ ಇತರೇ ಸಂಚಾರಿ ನಿಯಮ ಉಲ್ಲಂಘನೆ ಮಾಡಿದಕ್ಕೆ ಉಳಿದ 12,500 ರೂ. ದಂಡವನ್ನು ವಿಧಿಸಲಾಗಿದೆ.

ಮಾಲೀಕನಿಗೆ ನೀಡಿರುವ ಚಲನ್ ಪ್ರತಿ ಪ್ರಕಾರ, ರಸ್ತೆ ತೆರಿಗೆ ದಂಡದ ಜೊತೆಗೆ, ಸಾಮಾನ್ಯ ಅಪರಾಧಕ್ಕೆ 100 ರೂ. ಹಾಗೂ ಆದೇಶಗಳ ಅವಿಧೇಯತೆ ಮತ್ತು ಅಡಚಣೆಗೆ 500 ರೂ, ವಾಯು ಮತ್ತು ಶಬ್ದ ಮಾಲಿನ್ಯ ಮಾಡಿದ್ದಕ್ಕೆ 1,000 ರೂ. ಮತ್ತು ಸರಕು ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸಿದ್ದಕ್ಕೆ 5,000 ರೂ., ಇದಲ್ಲದೆ ಪರವಾನಗಿ ಇಲ್ಲದೆ ವಾಹನವನ್ನು ಬಳಸಿದ್ದಕ್ಕಾಗಿ ಅಥವಾ ಪರವಾನಗಿ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ 5,000 ರೂ. ವಿಮೆಯಿಲ್ಲದೆ ಲಾರಿ ಚಲಿಸಿದಕ್ಕೆ 1,000 ರೂ. ಸೇರಿ ಒಟ್ಟು 6.53 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *