ಪ್ರೀತಿಸಿ ಮದುವೆಯಾದ ಜೋಡಿಗೆ ನೇಗಿಲು ಕಟ್ಟಿ ಎತ್ತುಗಳಂತೆ ಉಳುಮೆ ಮಾಡಿಸಿ ಚಿತ್ರಹಿಂಸೆ

Public TV
1 Min Read

ಭುವನೇಶ್ವರ: ಪ್ರೀತಿಸಿ (Love) ಮದುವೆಯಾದ (Marriage) ಜೋಡಿಗೆ ನೇಗಿಲು ಕಟ್ಟಿ ಎತ್ತುಗಳಂತೆ ಉಳುಮೆ ಮಾಡಿಸಿ ಚಿತ್ರಹಿಂಸೆ ನೀಡಿದ ಘಟನೆ ಒಡಿಶಾದ (Odisha) ರಾಯಗಡ ಜಿಲ್ಲೆಯ ಕಂಜಮಝಿರಾ ಗ್ರಾಮದಲ್ಲಿ ನಡೆದಿದೆ.

ಯುವಕ ಹಾಗೂ ಯುವತಿ ಸ್ಥಳೀಯ ಪದ್ಧತಿಗೆ ವಿರುದ್ಧವಾಗಿ ಮದುವೆಯಾಗಿದ್ದಾರೆ ಎಂದು ಗ್ರಾಮಸ್ಥರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಸಮಾಜದ ಮುಂದೆ ಶಿಕ್ಷಿಸುವ ಉದ್ದೇಶದಿಂದ ನೇಗಿಲು ಕಟ್ಟಿ ಉಳುಮೆ ಮಾಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಕಿರುತೆರೆ ನಟಿ ಶ್ರುತಿಗೆ ಮನೆಯಲ್ಲೇ ಚಾಕು ಇರಿದು ಕೊಲೆಗೆ ಯತ್ನ, ಪತಿ ಅರೆಸ್ಟ್‌

ಯುವಕ ಮತ್ತು ಯುವತಿ ಇತ್ತೀಚೆಗೆ ಪ್ರೀತಿಸಿ ಮದುವೆಯಾಗಿದ್ದರು. ಇದಕ್ಕೆ ಕೆಲವು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಆ ಯುವಕ ಮದುವೆಯಾದ ಯುವತಿಯ ತಂದೆಯ ಚಿಕ್ಕಮ್ಮನ ಮಗನಾಗಿದ್ದು, ಸ್ಥಳೀಯ ಪದ್ಧತಿಗಳ ಪ್ರಕಾರ ಇಂತಹ ಮದುವೆ ನಿಷಿದ್ಧವೆಂದು ಪರಿಗಣಿಸಲಾಗುತ್ತದೆ ಎನ್ನಲಾಗಿದೆ. ಇದನ್ನೂ ಮೀರಿಯೂ ಮದುವೆಯಾಗಿದ್ದಕ್ಕೆ ಗ್ರಾಮಸ್ಥರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ಉಳುಮೆಯ ನಂತರ ಜೋಡಿಯನ್ನು ಗ್ರಾಮದ ದೇವಾಲಯಕ್ಕೆ ಕರೆದೊಯ್ದು, ಅವರ ಪಾಪ ಶುದ್ಧೀಕರಿಸಲು, ಶುದ್ಧೀಕರಣ ವಿಧಿಗಳನ್ನು ಮಾಡಲಾಯಿತು. ಗ್ರಾಮಸ್ಥರ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ತನಿಖೆ ನಡೆಸಲು ಪೊಲೀಸರ ತಂಡವೊಂದು ಗ್ರಾಮಕ್ಕೆ ಭೇಟಿ ನೀಡಿದೆ. ಈ ಸಂಬಂಧ ಶೀಘ್ರದಲ್ಲೇ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಎಸ್. ಸ್ವಾತಿ ಕುಮಾರ್ ತಿಳಿಸಿದ್ದಾರೆ.

ಜನವರಿಯಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ರಾಯಗಡ ಜಿಲ್ಲೆಯ ಒಂದು ಕುಟುಂಬದ ಸದಸ್ಯರು ಬೇರೆ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ  ‘ಶುದ್ಧೀಕರಣ’ ಎಂದು ತಲೆ ಬೋಳಿಸಲಾಗಿತ್ತು. ಇದನ್ನೂ ಓದಿ: ಟೆನ್ನಿಸ್‌ ತಾರೆಯ ಕೊಲೆಗೆ ಸ್ಫೋಟಕ ಟ್ವಿಸ್ಟ್‌ – ಮ್ಯೂಸಿಕ್‌ ಆಲ್ಬಂಗೆ ಸಿಟ್ಟಾಗಿ ಮಗಳ ಹತ್ಯೆ?

Share This Article