ಕೈ ನಡುಗುತ್ತಿದೆ ಅಂತಾ ಟೀಕಿಸಿದ ಬಿಜೆಪಿ ವಿರುದ್ಧ ನವೀನ್ ಪಟ್ನಾಯಕ್ ಕಿಡಿ

Public TV
1 Min Read

ಭುವನೇಶ್ವರ: ಮಾತನಾಡುತ್ತಿದ್ದ ಸಂದರ್ಭದಲ್ಲಿ ಕೈ ನಡುಗುತ್ತಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯವರ ಟೀಕೆಗೆ ಒಡಿಶಾ ಸಿಎಂ ನವೀನ್ ಪಟ್ನಾಯಕ್ (Naveen Patnaik) ಕಿಡಿಕಾರಿದ್ದಾರೆ.

ಬೇಡದ ವಿಚಾರಗಳನ್ನು ಸಮಸ್ಯೆಗಳನ್ನಾಗಿ ಮಾಡಲು ಹೆಸರುವಾಸಿಯಾಗಿರುವ ಬಿಜೆಪಿ (BJP) ಇದೀಗ ನನ್ನ ಕೈಗಳ ಬಗ್ಗೆ ಚರ್ಚಿಸುತ್ತಿದೆ. ಇದು ಖಂಡಿತವಾಗಿಯೂ ಕೆಲಸ ಮಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಏನಿದು ವಿಚಾರ..?: ಬಿಜೆಡಿ ಮುಖ್ಯಸ್ಥ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಇದನ್ನು ಬಿಜೆಪಿ ರಾಜಕೀಯ ಅಸ್ತ್ರ ಮಾಡಿಕೊಂಡಿದೆ. ನಡುಗುವ ಕೈಗಳಲ್ಲಿ ಮೈಕ್ ಹಿಡಿದು ನವೀನ್ ಪಟ್ನಾಯಕ್ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅವರ ಸಹಾಯಕ್ಕೆ ಬಿಜೆಡಿ ನಾಯಕ ವಿಕೆ ಪಾಂಡಿಯನ್ ಬಂದಿದ್ದಾರೆ.

ಈ ವಿಡಿಯೋ ಶೇರ್ ಮಾಡುತ್ತಿರುವ ಬಿಜೆಪಿ, 77ರ ಹರೆಯದ ನವೀನ್ ಪಟ್ನಾಯಕ್ ಅವರ ಕೈಗಳು 5 ವರ್ಷಗಳಾದರೂ ನಡುಗುತ್ತಿವೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಪಾಂಡಿಯನ್ ಅವರು ಪಟ್ನಾಯಕ್ ಅವರ ನಡುಗುವ ಕೈಯನ್ನು ಹಿಡಿದು ಅದನ್ನು ಮರೆಮಾಚಲು ಪ್ರಯತ್ನಿಸುವ ರೀತಿ ಗಮನ ಸೆಳೆದಿದೆ ಎಂದು ಕುಟುಕಿದೆ. ಇದನ್ನೂ ಓದಿ: ಭಾಷಣದ ನಡುವೆ ತಲೆ ಮೇಲೆ ನೀರು ಸುರಿದುಕೊಂಡ ರಾಹುಲ್‌ ಗಾಂಧಿ!- ವೀಡಿಯೋ ವೈರಲ್‌

ಇತ್ತ ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ಬಿಸ್ವಾ ಶರ್ಮಾ ತಮ್ಮ ಎಕ್ಸ್‌ ಖಾತೆಯಲ್ಲಿ, ಇದೊಂದು ಅತೀವ ಸಂಕಟದ ವೀಡಿಯೋ ವಿ.ಕೆ. ಪಾಂಡಿಯನ್ ಅವರು ನವೀನ್ ಪಟ್ನಾಯಕ್ ಅವರ ಕೈ ಚಲನೆಯನ್ನು ಸಹ ನಿಯಂತ್ರಿಸಿದ್ದಾರೆ‌ ಎಂದಿದ್ದಾರೆ. ಇತ್ತ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು, ನವೀನ್ ಪಟ್ನಾಯಕ್ ಅಸ್ವಸ್ಥತೆ ಕಾರಣದಿಂದ ತಮ್ಮ ಅಧಿಕಾರಾವಧಿಯನ್ನು ಕೊನೆಗೊಳಿಸಬೇಕು ಎಂದು ತಮ್ಮ ಎಕ್ಸ್‌ ಖಾತೆಯ ಮೂಲಕ ಸಲಹೆ ನೀಡಿದ್ದಾರೆ.

Share This Article