ಅ.20ಕ್ಕೆ ಟಿನ್ ಫ್ಯಾಕ್ಟರಿ – ಸಿಲ್ಕ್ ಬೋರ್ಡ್ ಪ್ರತ್ಯೇಕ ಬಸ್ ಪಥಕ್ಕೆ ಚಾಲನೆ

Public TV
1 Min Read

ಬೆಂಗಳೂರು: ಸಂಚಾರ ದಟ್ಟಣೆ ತಗ್ಗಿಸಲು ಬಸ್ ಬೇ ಐಡಿಯಾ ರೂಪಿಸಲಾಗಿದ್ದು, ಬೆಂಗಳೂರಿನ 12 ರಸ್ತೆಗಳಲ್ಲಿ ಬಸ್ ಸಂಚಾರಕ್ಕೆ ಪ್ರತ್ಯೆಕ ವ್ಯವಸ್ಥೆ ಮಾಡುವ ಕುರಿತು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‍ಕುಮಾರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಬಿಬಿಎಂಪಿ ವತಿಯಿಂದ ಬಿಎಂಟಿಸಿ ಬಸ್ ಸಂಚಾರಕ್ಕಾಗಿ ಪ್ರತ್ಯೇಕ ‘ಬಸ್ ಪಥ’ ವನ್ನು 12 ಪ್ರಮುಖ ರಸ್ತೆಗಳಲ್ಲಿ ನಿರ್ಮಿಸಲಾಗುತ್ತಿದೆ. ಸಂಚಾರ ದಟ್ಟಣೆ ತಪ್ಪಿಸಲು ಪ್ರಾಯೋಗಿಕವಾಗಿ ಅ.20 ರಿಂದ ಕೆ.ಆರ್.ಪುರ-ಮಾರತ್ ಹಳ್ಳಿವರೆಗಿನ ಪ್ರತ್ಯೇಕ ‘ಬಸ್ ಪಥ’ಕ್ಕೆ ಚಾಲನೆ ಸಿಗಲಿದೆ. ಸಾರ್ವಜನಿಕರು ಬಿಎಂಟಿಸಿ ಸಾರಿಗೆ ಬಳಸಿ, ಸಂಚಾರ ದಟ್ಟಣೆ ತಪ್ಪಿಸಲು ಸಹಕರಿಸಿ ಎಂದು ಟ್ವೀಟ್ ಮಾಡಿದ್ದಾರೆ.

ಇತ್ತ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ, ರಾಜ್ಯ ಸಾರಿಗೆ ಆಯುಕ್ತ ಎನ್.ಶಿವಕುಮಾರ್ ಅವರ ತಂಡವು ಬಿಎಂಟಿಸಿಯ ಪ್ರತ್ಯೇಕ ಬಸ್ ಪಥವನ್ನು ಪರಿಶೀಲನೆ ನಡೆಸಿತು. ಬಿಎಂಟಿಸಿಯ ಬಸ್ ನಲ್ಲಿಯೇ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೊದಲ ಹಂತದಲ್ಲಿ ಕೆ.ಆರ್.ಪುರ ಟಿನ್ ಫ್ಯಾಕ್ಟರಿಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ಬಸ್ ಕಾರಿಡಾರ್ ನಿರ್ಮಾಣವಾಗಲಿದೆ. ಬಿಎಂಟಿಸಿ ಬಸ್ ಗಳ ಸುಗಮ ಸಂಚಾರಕ್ಕಾಗಿ ನವೆಂಬರ್ 1ರಿಂದ ಬಸ್ ಕಾರಿಡಾರ್ ಆರಂಭಗೊಳ್ಳಲಿದೆ.

ಈ ಯೋಜನೆಗೆ ಒಟ್ಟು 15 ಕೋಟಿ ರೂಪಾಯಿ ವೆಚ್ಚವಾಗಿದ್ದು, ಈ ಕಾರಿಡಾರ್ ನಲ್ಲಿ ಕೇವಲ ಬಿಎಂಟಿಸಿ ಬಸ್ ಹಾಗೂ ತುರ್ತು ಸೇವಾ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ. ಇತರೆ ವಾಹನಗಳ ಮೇಲೆ ನಿಗಾ ಇಡಲು ಸಿಸಿ ಕ್ಯಾಮರಾಗಳ ಅಳವಡಿಕೆ ಮಾಡಲಾಗುತ್ತಿದೆ. ಇದೇ 20ರಿಂದ ಈ ಪಥದಲ್ಲಿ ಮಾರ್ಗ ಪರೀಕ್ಷೆ ಸಂಚಾರ ನಡೆಸಲು ಬಿಎಂಟಿಸಿಯಿಂದ ತೀರ್ಮಾನಿಸಲಾಗಿದೆ. ಇತ್ತೀಚೆಗಷ್ಟೇ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಬಸ್ ಕಾರಿಡಾರ್‍ನ ಮೊದಲನೇ ಮಾರ್ಗವನ್ನು ಪರಿಶೀಲಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *