ಬೆಂಗಳೂರು: ಚಂದನವನದಲ್ಲಿ ಟ್ರೇಲರ್ ನಿಂದ ಸಖತ್ ಸದ್ದು ಮಾಡುತ್ತಿರುವ `ರಾಜು ಕನ್ನಡ ಮೀಡಿಯಂ’ ಸಿನಿಮಾ ತೆರೆಗೆ ಬರಲು ಮತ್ತೊಂದು ಕಂಟಕ ಎದುರಾಗಿದೆ. ಸಿನಿಮಾ ರಿಲೀಸ್ ಬಿಡುಗಡೆಗೆ ತಡೆಯಾಜ್ಞೆ ಕೋರಿ ನಿರ್ಮಾಪಕ ಡಾ.ಎನ್.ಲಕ್ಷ್ಮೀಪತಿ ಬಾಬು ಸಿವಿಲ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಸಿನಿಮಾದ ನಿರ್ಮಾಣದ ಸಮಯದಲ್ಲಿ ನಿರ್ಮಾಪಕರಾದ ಸುರೇಶ್ ಮತ್ತು ಲಕ್ಷ್ಮೀಪತಿ ಬಾಬು ಇಬ್ಬರು ಒಪ್ಪಂದದ ಮೇರೆಗೆ ಸುರೇಶ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ತರಲು ಯೋಚಿಸಿದ್ದರು. ಸುರೇಶ್ ಬ್ಯಾನರ್ ಅಡಿಯಲ್ಲಿ ಇಬ್ಬರು ನಿರ್ಮಾಪಕರು 60:40 ಅನುಪಾತದಲ್ಲಿ ಬಂಡವಾಳವನ್ನು ಹೂಡಿಕೆ ಮಾಡಿ ಸಿನಿಮಾ ಮಾಡಲು ನಿರ್ಧರಿಸಿದ್ದರು ಎಂದು ಹೇಳಲಾಗುತ್ತಿದೆ.
ಸದ್ಯ ಸುರೇಶ್ ಅವರು ನನ್ನಿಂದ ಶೇ.60ರಷ್ಟು ಬಂಡವಾಳವನ್ನು ಪಡೆದುಕೊಂಡು, ಸಿನಿಮಾವನ್ನು `ಸುರೇಶ್ ಆರ್ಟ್ಸ್’ನಲ್ಲಿ ತೆರೆಗೆ ತರಲು ಸಜ್ಜಾಗಿದ್ದಾರೆ ಎಂದು ಲಕ್ಷ್ಮೀಪತಿ ಬಾಬು ಆರೋಪಿಸುತ್ತಿದ್ದಾರೆ. ಇತ್ತ ಸುರೇಶ್ ಇಂದು ಕೋರ್ಟ್ ರಜೆಯಿದ್ದು, ನಾಳೆ ಎಲ್ಲವನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಫಸ್ಟ್ ರ‍್ಯಾಂಕ್ ರಾಜು ಖ್ಯಾತಿಯ ಗುರುನಂದನ್ ನಾಯಕ ನಟನಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಆವಂತಿಕಾ ಶೆಟ್ಟಿ, ಆಶಿಕಾ ರಂಗನಾಥ್, ಸಾಧು ಕೋಕಿಲ, ಓಂ ಪ್ರಕಾಶ್, ಚಿಕ್ಕಣ್ಣ, ಕುರಿ ಪ್ರತಾಪ್ ಸೇರಿದಂತೆ ದೊಡ್ಡ ತಾರಾಬಳಗವನ್ನು ಸಿನಿಮಾ ಹೊಂದಿದೆ. ಸಿನಿಮಾದಲ್ಲಿ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಗಮನವನ್ನು ಸೆಳೆಯಲಿದ್ದಾರೆ. ಸಿನಿಮಾ ನರೇಶ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ಕಿರಣ್ ರವೀಂದ್ರನಾಥ್ ಸಂಗೀತ ನೀಡಿದ್ದಾರೆ.