ದುರ್ಗಾ ಪೂಜೆ ಮಾಡಿದಕ್ಕೆ ಕಿಡಿಕಾರಿದ ಮೌಲ್ವಿಗಳಿಗೆ ನುಸ್ರತ್ ತಿರುಗೇಟು

Public TV
2 Min Read

ಕೋಲ್ಕತ್ತಾ: ದುರ್ಗಾ ಪೂಜೆ ಮಾಡಿದ್ದಕ್ಕೆ ತೃಣಮೂಲ ಕಾಂಗ್ರೆಸ್ ಸಂಸದೆ, ನಟಿ ನುಸ್ರತ್ ಜಹಾನ್ ವಿರುದ್ಧ ಮತ್ತೊಮ್ಮೆ ಇಸ್ಲಾಂ ಧಾರ್ಮಿಕ ಗುರುಗಳು ಕಿಡಿಕಾರಿದ್ದಾರೆ. ಆದರೆ ನುಸ್ರತ್ ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡು ಮೌಲ್ವಿಗಳಿಗೆ ಸಖತ್ ತಿರುಗೇಟು ಕೊಟ್ಟಿದ್ದಾರೆ.

ಕೋಲ್ಕತ್ತಾದಲ್ಲಿ ನಡೆದ ದುರ್ಗಾ ಪೂಜೆ ಪತಿ ಜೊತೆಗೂಡಿ ಪೂಜೆ ಸಲ್ಲಿಸಿದ್ದರು. ಈ ರೀತಿ ಕಾಣಿಸಿಕೊಂಡು ಇಸ್ಲಾಂ ಧರ್ಮವನ್ನು ಅವಮಾನಿಸುವ ಬದಲು ಹೆಸರನ್ನು ಬದಲಾಯಿಸಿಕೊಳ್ಳಿ ಎಂದು ಮೌಲ್ವಿ ಮುಫ್ತಿ ಅಸಾದ್ ಕಾಸ್ಮಿ ಟೀಕಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನುಸ್ರತ್ ಅವರು, ಎಲ್ಲ ಧರ್ಮದ ಸೌಹಾರ್ದತೆ ಸಾರಲು ನನ್ನದೇ ಆದ ದಾರಿಯಲ್ಲಿ ನಾನು ಹೋಗುತ್ತಿದ್ದೇನೆ. ನಾನು ಮಾಡುತ್ತಿರುವ ಸರಿಯೆಂದು ನನಗೆ ಅನಿಸುತ್ತಿದೆ. ನಾವು ಎಲ್ಲಾ ಧರ್ಮದ ಹಬ್ಬಗಳನ್ನು ಆಚರಿಸಬೇಕು ಎಂದು ತಿರುಗೇಟು ನೀಡಿದ್ದಾರೆ.

ಅವರು ನನಗೆ ಹೆಸರು ಇಟ್ಟಿಲ್ಲ, ನಿನ್ನ ಹೆಸರನ್ನು ಬದಲಿಸಿಕೊ ಎಂದು ಹೇಳುವ ಹಕ್ಕು ಅವರಿಗಿಲ್ಲ ಎಂದು ಮಾತಿನ ಚಾಟಿ ಬೀಸಿದ್ದಾರೆ. ಹಿಂದೂ, ಮುಸ್ಲಿಂ ಎಂಬ ಧರ್ಮದ ಬೇಧ ಬೇಡ. ಪೂಜೆಯನ್ನು ಖುಷಿಯಿಂದ ಆಚರಿಸಿ. ಇದಕ್ಕೆ ರಾಜಕೀಯ ಬಣ್ಣ ಹಚ್ಚಬೇಡಿ, ಇದು ಹಬ್ಬವನ್ನು ಸಂಭ್ರಮಿಸುವ ಸಮಯ ಎಂದು ಹೇಳಿದ್ದಾರೆ.

ಅಲ್ಲಾಹು ಹೊರತುಪಡಿಸಿ ಇತರೆ ದೇವರುಗಳನ್ನು ಪೂಜಿಸಲು ಇಸ್ಲಾಂ ಧರ್ಮದಲ್ಲಿ ಅನುಮತಿ ನೀಡಿಲ್ಲ. ಆದರೆ, ನುಸ್ರತ್ ದುರ್ಗಾ ಪೂಜೆಯನ್ನು ನೆರವೇರಿಸಿದ್ದಾರೆ. ಇದು ಸಂಪೂರ್ಣವಾಗಿ ಇಸ್ಲಾಂ ವಿರೋಧಿಯಾಗಿದೆ. ಅವರು ಇಸ್ಲಾಂ ಅನ್ನು ಅನುಸರಿಸುತ್ತಿಲ್ಲ. ಇದಲ್ಲದೆ ಮುಸ್ಲಿಮೇತರ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಹೀಗಾಗಿ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಲಿ, ಅದನ್ನು ಬಿಟ್ಟಿ ಇಸ್ಲಾಂಗೆ ಅಪಮಾನ ಮಾಡುವುದು ಸರಿಯೇ ಎಂದು ಮುಫ್ತಿ ಅಸಾದ್ ಕಾಸ್ಮಿ ಪ್ರಶ್ನಿಸಿದ್ದರು.

ಎಲ್ಲರನ್ನೂ ಒಳಗೊಂಡ ಭಾರತದ ಪ್ರತಿನಿಧಿ ಎಂದು ಈ ಹಿಂದೆ ಸಂಸದೆ ನುಸ್ರತ್ ಜಹಾನ್ ಹೇಳಿದ್ದರು. ಉದ್ಯಮಿ ನಿಖಿಲ್ ಜೈನ್ ಅವರನ್ನು ನುಸ್ರತ್ ಅವರು ಮದುವೆಯಾದ ಬಳಿಕ ಹಿಂದೂ ಧಾರ್ಮಿಕ ಆಚರಣೆ, ಪೂಜೆ ಪುನಸ್ಕಾರಗಳಲ್ಲಿ ಅವರು ತೊಡಗಿಕೊಂಡಿದ್ದರು. ಆದ್ದರಿಂದ ಅವರ ವಿರುದ್ಧ ಭಾರಿ ಟೀಕೆಗಳು ಕೇಳಿಬಂದಿತ್ತು.

ಸಂಸದರಾದ ಬಳಿಕ ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಹಣೆಗೆ ಸಿಂಧೂರ ಇಟ್ಟುಕೊಂಡು ಬಂದಿದ್ದಕ್ಕೆ ಕೂಡ ನುಸ್ರತ್ ವಿರುದ್ಧ ಮೌಲ್ವಿಗಳು ಕಿಡಿಕಾರಿದ್ದರು. ಈಗ ಸಾಂಪ್ರದಾಯಿಕ ಸೀರೆಯನ್ನುಟ್ಟು, ಹಣೆಗೆ ಸಿಂಧೂರ ಹಾಗೂ ಮಂಗಳಸೂತ್ರವನ್ನು ಹಾಕಿಕೊಂಡು ನುಸ್ರತ್ ಅವರು ದುರ್ಗಾ ಪೂಜೆ ಮಾಡಿದ್ದೂ ಕೂಡ ಮೌಲ್ವಿಗಳ ಕೆಂಗಣ್ಣಿಗೆ ಕಾರಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *