ದೇಶಕ್ಕಾಗಿ ಕುಟುಂಬದಿಂದ ದೂರವಿದ್ದೇವೆ: ನರ್ಸ್ ಸುಗಂಧ

Public TV
2 Min Read

– ಮಗಳನ್ನು ನೋಡಿದ ತಕ್ಷಣ ಕಷ್ಟ ಮರೆತುಹೋಯ್ತು
– ಕೊರೊನಾ ಮುಕ್ತ ಭಾರತಕ್ಕೆ ಪಣ
– ದಯವಿಟ್ಟು ಪರಿಸ್ಥಿತಿಯನ್ನು ಅರಿತು ಮನೆಯಲ್ಲಿರಿ

ಬೆಳಗಾವಿ: 21 ದಿನಗಳ ಬಳಿಕ ಮಗಳನ್ನು ಸೇರಿದ ನರ್ಸ್ ಸುಗಂಧ ಅವರು ಪಬ್ಲಿಕ್ ಟಿವಿ ಜೊತೆ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಮಗಳನ್ನು ಬಿಟ್ಟಿರೋದು ಕಷ್ಟವಾಯ್ತು ಆದ್ರೆ ಕೊರೊನಾ ವಿರುದ್ಧ ಹೋರಾಡೋದು ನಮ್ಮ ಕರ್ತವ್ಯ, ದೇಶಕ್ಕಾಗಿ ಕುಟುಂಬದಿಂದ ವೈದ್ಯಕೀಯ ಸಿಬ್ಬಂದಿಯೆಲ್ಲಾ ದೂರವಿದ್ದೇವೆ ಎಂದು ಹೇಳಿದ್ದಾರೆ.

ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸುಗಂಧ ಅವರು, ಮಗಳನ್ನು ನೋಡಿದ ತಕ್ಷಣ ಪಟ್ಟ ಕಷ್ಟವೆಲ್ಲ ಮರೆತುಹೋಯ್ತು. ಕೊರೊನಾ ಡ್ಯೂಟಿಯಲ್ಲಿದ್ದಕ್ಕೆ ವೈದ್ಯರು ಹಾಗೂ ನರ್ಸ್‍ಗಳನ್ನು ಕ್ವಾರಂಟೈನಲ್ಲಿ ಇಟ್ಟಿದ್ದರು. ಈಗ ನಾವೆಲ್ಲಾ ಕ್ವಾರಂಟೈನ್ ಅವಧಿ ಮುಗಿಸಿ ಮನೆಗೆ ಬಂದಿದ್ದೇವೆ. ಮನೆಯವರನ್ನು ನೋಡಿ ಖುಷಿಯಾಯ್ತು. ನನ್ನ ಮಗಳು ನನ್ನನ್ನು ಹೆಚ್ಚು ಹಚ್ಚಿಕೊಂಡಿದ್ದಾಳೆ. ಅವಳನ್ನು ಹೆಚ್ಚು ನಾನೇ ನೋಡಿಕೊಳ್ಳುತ್ತಿದ್ದೆ. ಇದೇ ಮೊದಲ ಬಾರಿಗೆ ನಾನು ಇಷ್ಟು ದಿನ ಅವಳನ್ನು ಬಿಟ್ಟು ದೂರ ಇದ್ದಿದ್ದು. ಅವಳು ಕೂಡ ನಾನಿಲ್ಲದೇ ಕಷ್ಟಪಟ್ಟಿದ್ದಾಳೆ. ನನ್ನಂತೆ ಸಾಕಷ್ಟು ಮಂದಿ ನರ್ಸಗಳಿಗೆ, ವೈದ್ಯಕೀಯ ಸಿಬ್ಬಂದಿಗೆ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ. ಆದರೆ ನಾವೆಲ್ಲಾ ಕೊರೊನಾ ಮುಕ್ತ ಭಾರತವನ್ನು ಮಾಡಲು ಪಣತೊಟ್ಟಿದ್ದೇವೆ. ಮಕ್ಕಳಿದ್ದಾರೆ ಎಂದು ಕರ್ತವ್ಯ ಬಿಟ್ಟು ಮನೆಯಲಿದ್ದರೆ ನಾವು ವೈದ್ಯಕೀಯ ಸಿಬ್ಬಂದಿ ಆಗಿರೋದಕ್ಕೆ ಅರ್ಥವಿಲ್ಲ. ದೇಶಕ್ಕಾಗಿ ವೈದ್ಯಕೀಯ ಸಿಬ್ಬಂದಿ ಹೋರಾಡುತ್ತಿದ್ದೇವೆ ಎಂದು ತಮ್ಮ ಕರ್ತವ್ಯ, ಜವಾಬ್ದಾರಿಗಳ ಬಗ್ಗೆ ಹೇಳಿದರು.

ಕ್ವಾರಂಟೈನ್‍ನಲ್ಲಿದ್ದಾಗ ತುಂಬಾ ಕಷ್ಟವಾಗಿತ್ತು. ಅತ್ತ ಡ್ಯೂಟಿ ಕೂಡ ಮಾಡುವಂತಿರಲಿಲ್ಲ. ಇತ್ತ ಮನೆಗೂ ಹೋಗುವಂತಿರಲಿಲ್ಲ. ಮಗಳು, ಕುಟುಂಬದವರು ತುಂಬಾ ನೆನಪಾಗುತ್ತಿದ್ದರು. ಮಗಳು ನನಗೋಸ್ಕರ ಕಷ್ಟಪಡುತ್ತಿರೋದನ್ನು ತಿಳಿದು ಮನಸಲ್ಲೇ ತುಂಬಾ ದುಃಖವಾಗುತ್ತಿತ್ತು. 21 ದಿನಗಳು ಕಳೆದು ಮನೆಗೆ ಹೋಗಿ ಮಗಳನ್ನು ನೋಡಿದಾಗ ಮಾತನಾಡೋಕೆ ಆಗಲಿಲ್ಲ. ಅವಳನ್ನು ನೋಡಿದ ಖುಷಿಗೆ ಕಣ್ಣಿರು ಬಂದುಬಿಟ್ಟಿತು. ಅವಳನ್ನು ಎತ್ತಿಕೊಂಡು ಮುದ್ದಾಡಿದೆ ಎಂದು ಖುಷಿಯನ್ನು ಹಂಚಿಕೊಂಡರು.

ದೇವರ ಕೃಪೆಯಿಂದ ಕ್ವಾರಂಟೈನಲ್ಲಿದ್ದ ಯಾವ ಸಿಬ್ಬಂದಿಗೂ ಸೋಂಕು ತಗುಲಿರಲಿಲ್ಲ. ಎಲ್ಲರಿಗೂ ತಪಾಸಣೆ ನಡೆಸಿ ವರದಿ ಬಂದ ಬಳಿಕವೇ ಎಲ್ಲರನ್ನು ಮನೆಗೆ ಕಳುಹಿಸಿದ್ದಾರೆ. ಮತ್ತೆ ಸೋಮವಾರದಿಂದ ನಾವು ಕರ್ತವ್ಯಕ್ಕೆ ತೆರೆಳಲಿದ್ದೇವೆ. ಸದ್ಯ ಜನರಲ್ ವಾರ್ಡಿಗೆ ಡ್ಯೂಟಿ ಹಾಕಿದ್ದಾರೆ. ರೊಟೆಷನಲ್ ಶಿಫ್ಟ್ ಹಾಕುತ್ತಿರುತ್ತಾರೆ. ಪದೇ ಪದೇ ಕೊರೊನಾ ವಾರ್ಡಿಗೆ ಡ್ಯೂಟಿ ಹಾಕಲ್ಲ. ಸಿಬ್ಬಂದಿ ಕಡಿಮೆ ಇದ್ದರೆ ಮಾತ್ರ ಹಾಕುತ್ತಾರೆ. ಆಗ ಮತ್ತೆ ನಮ್ಮನ್ನು ಕ್ವಾರಂಟೈನ್‍ನಲ್ಲಿ ಇಡುತ್ತಾರೆ ಎಂದು ಸುಗಂಧ ಅವರು ತಿಳಿಸಿದರು.

ವೈದ್ಯಕೀಯ ಸಿಬ್ಬಂದಿ, ಪೊಲೀಸರು ಕಷ್ಟಪಟ್ಟು ಕೊರೊನಾವನ್ನು ತಡೆಗಟ್ಟಲು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಮಾಧ್ಯಮದವರು ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇಷ್ಟೆಲ್ಲಾ ಮಾಡುತ್ತಿದ್ದರೂ ಜನರು ಅರ್ಥ ಮಾಡಿಕೊಳ್ಳುತ್ತಿಲ್ಲ. ದಯವಿಟ್ಟು ಪರಿಸ್ಥಿತಿ ಅರ್ಥ ಮಾಡಿಕೊಂಡು ಮನೆಯಲ್ಲಿಯೇ ಇರಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಸರ್ಕಾರಿ ನಿಯಮವನ್ನು ಪಾಲಿಸಿ ಸೋಂಕಿನಿಂದ ದೂರವಿದ್ದು, ಸುರಕ್ಷಿತವಾಗಿರಿ ಎಂದು ಸುಗಂಧ ಅವರು ಮನವಿ ಮಾಡಿಕೊಂಡರು.

ಜನರು ಮಾಡುತ್ತಿರುವುದನ್ನು ನೋಡಿದರೆ ಸಿಟ್ಟು ಬರುತ್ತಿದೆ. ಪೊಲೀಸರು ಹೊಡೆಯುತ್ತಾರೆ ಎಂದು ಜನರು ದೂರುತ್ತಿದ್ದಾರೆ. ಇವರು ಹೊರಗೆ ಬಾರದೇ ಮನೆಯಲ್ಲಿದ್ದರೆ ಯಾರೂ ಅವರಿಗೆ ಹೊಡೆಯಲ್ಲ. ಅಗತ್ಯವಿದ್ದರೆ ಮಾತ್ರ ಹೊರಗೆ ಬನ್ನಿ, ಸುಮ್ಮನೆ ಬಂದು ಸೋಂಕಿಗೆ ತುತ್ತಾಗಬೇಡಿ. ನಿಮಗಾಗಿ ನಾವು ಕಷ್ಟಪಡುತ್ತಿದ್ದೇವೆ, ನಮಗಾಗಿ ನೀವು ಮನೆಯಲ್ಲಿ ಇರಿ. ಪೊಲೀಸರಿಗೆ, ವೈದ್ಯಕೀಯ ವರ್ಗಕ್ಕೆ ಸಹಕರಿಸಿ. ಈ ಕೊರೊನಾವನ್ನು ಜೊತೆಗೂಡಿ ನಿರ್ಮೂಲನೆ ಮಾಡೋಣ ಎಂದು ನರ್ಸ್ ಸುನಂದಾ ಕರೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *