ಕಾರು ಡಿಕ್ಕಿಯಾಗಿ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ ಸಾವು – NRI ಅರೆಸ್ಟ್, ಕಾರು ಸೀಜ್

Public TV
1 Min Read

ಚಂಡೀಗಢ: ಕಾರು ಡಿಕ್ಕಿ ಹೊಡೆದು ವಿಶ್ವದ ಅತ್ಯಂತ ಹಿರಿಯ ಮ್ಯಾರಥಾನ್ ಓಟಗಾರ ಶತಾಯುಷಿ ಫೌಜಾ ಸಿಂಗ್ (Fauja Singh) ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತ ಮಾಡಿದ ಆರೋಪಿ ಅನಿವಾಸಿ ಭಾರತೀಯ (NRI) ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಅಮೃತ್‌ಪಾಲ್ ಸಿಂಗ್ ಧಿಲ್ಲೋನ್ ಬಂಧಿತ ಅನಿವಾಸಿ ಭಾರತೀಯ. ‘ಟರ್ಬನ್ಡ್ ಟೊರ್ನಾಡೊ’ ಎಂದು ಜನಪ್ರಿಯವಾಗಿರುವ 114 ವರ್ಷದ ಫೌಜಾ ಸಿಂಗ್ ಜಲಂಧರ್‌ನಲ್ಲಿರುವ ತಮ್ಮ ಮನೆಯ ಬಳಿ ಸಂಜೆ ವಾಕಿಂಗ್ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಿಂಗ್ ಮೃತಪಟ್ಟಿದ್ದಾರೆ. ಇದನ್ನೂ ಓದಿ: 36 ರೂ. ಸಾಕಾಗಲ್ಲ, 40 ರೂ.ಗೆ ದರ ಏರಿಸಬೇಕು – ಜಿಲ್ಲಾಧಿಕಾರಿಗೆ ಆಟೋ ಅಸೋಸಿಯೇಶನ್ ಪತ್ರ

ಜಲಂಧರ್‌ನ ಕರ್ತಾರ್‌ಪುರದ ಅಮೃತ್‌ಪಾಲ್ ಸಿಂಗ್ ಧಿಲ್ಲೋನ್ ಕೆನಡಾದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದು, ಒಂದು ವಾರದ ಹಿಂದಷ್ಟೇ ಭಾರತಕ್ಕೆ ಬಂದಿದ್ದ. ಸಿಸಿಟಿವಿ ದೃಶ್ಯಗಳನ್ನು ಬಳಸಿಕೊಂಡು ಧಿಲ್ಲೋನ್‌ನ ಕಾರನ್ನು ಗುರುತಿಸಿದ ನಂತರ ಪೊಲೀಸರ ಹಲವಾರು ತಂಡ ಆರೋಪಿಗಾಗಿ ಶೋಧ ನಡೆಸಿತು. ಅಪಘಾತ ಮಾಡಿದ ಫಾರ್ಚೂನರ್ ಕಾರು (Fortuner Car) ಕಪುರ್ತಲಾ ನಿವಾಸಿ ವರೀಂದರ್ ಸಿಂಗ್ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿತ್ತು. ಈ ಹಿನ್ನೆಲೆ ಅವರನ್ನು ವಿಚಾರಿಸಿದಾಗ ಕಾರನ್ನು ಅಮೃತ್‌ಪಾಲ್‌ಗೆ ಮಾರಾಟ ಮಾಡಿರುವುದಾಗಿ ವರೀಂದರ್ ಸಿಂಗ್ ತಿಳಿಸಿದ್ದಾರೆ. ತನಿಖೆ ಬಳಿಕ ಆರೋಪಿ ಅಮೃತ್‌ಪಾಲ್‌ನನ್ನು ಬಂಧಿಸಿ ಕಾರನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಹಣ ಸಂಗ್ರಹಿಸಿ 3 ಕಿ.ಮೀ. ರಾಜ್ಯ ಹೆದ್ದಾರಿಯ ಗುಂಡಿ ಮುಚ್ಚಿದ ಬೀದರ್‌ ಗ್ರಾಮಸ್ಥರು!

2000ರಲ್ಲಿ ಮ್ಯಾರಥಾನ್ ಪ್ರಯಾಣ ಆರಂಭಿಸಿದ್ದ ಫೌಜಾ ಸಿಂಗ್, 8 ಮ್ಯಾರಾಥಾನ್‌ಗಳಲ್ಲಿ ಭಾಗವಹಿಸಿದ್ದರು. ಈ ಮೂಲಕ ಅತ್ಯಂತ ಹಿರಿಯ ಮ್ಯಾರಾಥಾನ್ ಓಟಗಾರ ಎಂದು ಪ್ರಸಿದ್ಧಿ ಪಡೆದಿದ್ದರು. ಆದರೆ ಜನನ ಪ್ರಮಾಣಪತ್ರ ಇಲ್ಲದ ಕಾರಣ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಅಧಿಕೃತವಾಗಿ ನೋಂದಾಯಿಸಲು ಸಾಧ್ಯವಾಗಿರಲಿಲ್ಲ. ಇದನ್ನೂ ಓದಿ: ಡಿಜಿಟಲ್ ಅರೆಸ್ಟ್ ಎಂದು ಬೆದರಿಸಿ ಲಕ್ಷ ಲಕ್ಷ ವಸೂಲಿ – ಡೆತ್‌ನೋಟ್ ಬರೆದಿಟ್ಟು ಬೆಸ್ಕಾಂ ಸಿಬ್ಬಂದಿ ಆತ್ಮಹತ್ಯೆ

Share This Article