ಎನ್ಆರ್‌ಸಿ ರಾಷ್ಟ್ರಾದ್ಯಂತ ವಿಸ್ತರಣೆ- ಸಂಸತ್‍ನಲ್ಲಿ ಅಮಿತ್ ಶಾ ಘೋಷಣೆ

Public TV
1 Min Read

ನವದೆಹಲಿ: ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ದೇಶಾದ್ಯಂತ ವಿಸ್ತರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.

ರಾಜ್ಯಸಭೆಯಲ್ಲಿ ಬುಧವಾರ ಎನ್ಆರ್‌ಸಿ ಕುರಿತ ಚರ್ಚೆಯ ಸಂದರ್ಭದಲ್ಲಿ ಇದನ್ನು ಘೋಷಿಸಿದ್ದು, ಎನ್ಆರ್‌ಸಿಯನ್ನು ರಾಷ್ಟ್ರವ್ಯಾಪಿ ನಡೆಸಲಾಗುವುದು. ಯಾವುದೇ ಧರ್ಮವನ್ನು ಲೆಕ್ಕಿಸದೆ ಎಲ್ಲ ನಾಗರಿಕರು ಈ ಪ್ರಕ್ರಿಯೆಯ ಭಾಗವಾಗಲಿದ್ದಾರೆ. ಪೌರತ್ವ ತಿದ್ದುಪಡಿ ಮಸೂದೆಗಿಂತ ಇದು ಭಿನ್ನವಾಗಿದೆ. ಹೀಗಾಗಿ ರಾಷ್ಟ್ರಾದ್ಯಂತ ಎನ್ಆರ್‌ಸಿಯನ್ನು ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದರು.

ಎನ್ಆರ್‌ಸಿಗೆ ಯಾವುದೇ ನಿಬಂಧನೆಗಳಿಲ್ಲ, ಎನ್ಆರ್‌ಸಿ ಅಡಿಯಲ್ಲಿ ಯಾವುದೇ ಧರ್ಮಗಳು ಬರುವುದಿಲ್ಲ. ಭಾರತದ ಎಲ್ಲ ನಾಗರಿಕರು, ಧರ್ಮವನ್ನು ಲೆಕ್ಕಿಸದೆ ಎನ್ಆರ್‌ಸಿ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುತ್ತಾರೆ. ಪೌರತ್ವ ತಿದ್ದುಪಡಿ ಮಸೂದೆಗಿಂತ ಇದು ಭಿನ್ನವಾಗಿದೆ ಎಂದು ಅಮಿತ್ ಶಾ ಸಂಸತ್‍ನಲ್ಲಿ ಸ್ಪಷ್ಟಪಡಿಸಿದರು.

ಕರಡು ಪಟ್ಟಿಯಲ್ಲಿ ಯಾರ ಹೆಸರು ಕಾಣಿಸಿಕೊಂಡಿಲ್ಲವೋ ಅವರು ನ್ಯಾಯಮಂಡಳಿಗೆ ಹೋಗುವ ಹಕ್ಕನ್ನು ಹೊಂದಿದ್ದಾರೆ ಎಂದು ಇದೇ ವೇಳೆ ಶಾ ಮನವರಿಕೆ ಮಾಡಿದರು.

ಎನ್ಆರ್‌ಸಿ ಪಟ್ಟಿಯಿಂದ ಹೆಸರು ಕಾಣೆಯಾಗಿರುವವರು ಅಸ್ಸಾಂನಾದ್ಯಂತ ತಹಶೀಲ್ದಾರ್ ಮಟ್ಟದಲ್ಲಿ ರಚಿಸಲಾಗಿರುವ ನ್ಯಾಯ ಮಂಡಳಿಗಳನ್ನು ಸಂಪರ್ಕಿಸಬಹುದು. ನ್ಯಾಯಮಂಡಳಿಯನ್ನು ಸಂಪರ್ಕಿಸಲು ಹಣವಿಲ್ಲದಿದ್ದರೆ, ವಕೀಲರನ್ನು ನೇಮಿಸಿಕೊಳ್ಳುವ ವೆಚ್ಚವನ್ನು ಅಸ್ಸಾಂ ಸರ್ಕಾರ ಭರಿಸಲಿದೆ ಎಂದು ಇದೇ ವೇಳೆ ತಿಳಿಸಿದರು. ಈ ಮೂಲಕ ಅಸ್ಸಾಂನಲ್ಲಿ ಉಂಟಾಗಿರುವ ಗೊಂದಲಕ್ಕೆ ತೆರೆ ಎಳೆದರು.

ಅಸ್ಸಾಂನಲ್ಲಿ ಎನ್ಆರ್‌ಸಿ ಕುರಿತು ಗೊಂದಲ ಉಂಟಾಗಿದ್ದು, ನವೀಕರಿಸಿದ ಅಂತಿಮ ಎನ್ಆರ್‌ಸಿ ಪಟ್ಟಿಯಲ್ಲಿ 19 ಲಕ್ಷಕ್ಕೂ ಅಧಿಕ ಅರ್ಜಿದಾರರನ್ನು ಕೈ ಬಿಡಲಾಗಿದೆ ಎಂದು ಆರೋಪಿಸಲಾಗಿದೆ.

ಅಕ್ರಮವಾಗಿ ವಲಸೆ ಬಂದವರನ್ನು ಪ್ರಮುಖವಾಗಿ ಮಾರ್ಚ್ 25, 1971ರಂದು ಬಾಂಗ್ಲಾದೇಶದಿಂದ ಅಸ್ಸಾಂಗೆ ಪ್ರವೇಶಿಸಿ, ಇಲ್ಲಿಯೇ ನೆಲೆಸಿದ್ದಾರೆ. ಅಂತಹವರನ್ನು ಅವರ ದೇಶಕ್ಕೆ ಗಡಿಪಾರು ಮಾಡುವ ಉದ್ದೇಶವನ್ನು ಎನ್‍ಆರ್‍ಸಿ ಹೊಂದಿದೆ.

Share This Article
Leave a Comment

Leave a Reply

Your email address will not be published. Required fields are marked *