ಇನ್ಮೇಲೆ ನೀವು ಕಾಶ್ಮೀರದ ಬೆಳ್ಳಗಿನ ಯುವತಿಯರನ್ನ ಮದ್ವೆ ಆಗಬಹುದು: ಬಿಜೆಪಿ ಶಾಸಕ

Public TV
2 Min Read

ಲಕ್ನೋ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370 ರದ್ದು ಮಾಡಿದ್ದರಿಂದ ಆಗುವ ಪ್ರಯೋಜನವೇನು ಅಂತ ತಿಳಿಸಲು ಹೋಗಿ ಉತ್ತರ ಪ್ರದೇಶದ ಬಿಜೆಪಿ ಶಾಸಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮುಜಾಫರ್ ನಗರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ವಿಕ್ರಮ್ ಸೈನಿ ಅವರು, ಇನ್ನುಮುಂದೆ ನೀವು ಕಾಶ್ಮೀರದ ಬೆಳ್ಳಗಿನ ಯುವತಿಯರನ್ನ ಮದುವೆ ಆಗಬಹುದು ಎಂದು ಹೇಳಿದ್ದಾರೆ. ಶಾಸಕರ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಕೇಂದ್ರ ಸರ್ಕಾರವು ಕಾಶ್ಮೀರದ ವಿಚಾರವಾಗಿ ತೆಗೆದುಕೊಂಡ ನಿರ್ಧಾರದಿಂದ ಬಿಜೆಪಿ ಕಾರ್ಯಕರ್ತರು ಅಲ್ಲಿಗೆ ಹೋಗಿ ಜಮೀನು, ಆಸ್ತಿ ಖರೀದಿಸಬಹುದು. ಅಲ್ಲಿಯವರನ್ನು ಮದುವೆ ಕೂಡ ಆಗಬಹುದು. ಇನ್ನುಮುಂದೆ ಕಾಶ್ಮೀರದಲ್ಲಿ ಯಾವುದೇ ಸಮಸ್ಯೆಗಳು ಇರುವುದಿಲ್ಲ. ಅಲ್ಲಿನ ಯುವತಿಯರ ಮೇಲೆ ತುಂಬಾ ದಬ್ಬಾಳಿಕೆ ನಡೆಯುತಿತ್ತು. ಕಾಶ್ಮೀರ ಯುವತಿ ಉತ್ತರ ಪ್ರದೇಶದ ಯುವಕನನ್ನು ಮದುವೆ ಆಗುವಂತಿರಲಿಲ್ಲ. ಒಂದು ವೇಳೆ ಮದುವೆಯಾದರೆ ಆಕೆಯ ಪೌರತ್ವ ರದ್ದು ಮಾಡುತ್ತಿದ್ದರು. ಭಾರತಕ್ಕೆ ಹಾಗೂ ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಪೌರತ್ವವಿತ್ತು ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ನಿರ್ಧಾರವನ್ನು ಮುಸ್ಲಿಂ ಕಾರ್ಯಕರ್ತರು ಸಂಭ್ರಮಿಸಬೇಕು. ಏಕೆಂದರೆ ನೀವು ಕಾಶ್ಮೀರದ ಬೆಳ್ಳಗಿನ ಯುವತಿಯರನ್ನು ಮದುವೆ ಆಗಬಹುದು. ಹಿಂದೂ-ಮುಸ್ಲಿಂ ಸೇರಿದಂತೆ ದೇಶದ ಎಲ್ಲರೂ ಕೇಂದ್ರದ ನಿರ್ಧಾರವನ್ನು ಸಂಭ್ರಮಿಸಬೇಕು ಎಂದು ಶಾಸಕ ವಿಕ್ರಮ್ ಸೈನಿ ಹೇಳಿಕೆ ನೀಡಿದ್ದಾರೆ.

ಈ ವಿವಾದಾತ್ಮಕ ಹೇಳಿಕೆ ಕುರಿತು ಮಾಧ್ಯಮಗಳು ಪ್ರಶ್ನೆ ಮಾಡಿದ್ದಕ್ಕೆ ವಿಕ್ರಮ್ ಸೈನಿ ಅವರು ತಮ್ಮ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ. ಯಾವುದೇ ಸಮಸ್ಯೆ ಇಲ್ಲದೆ ಯಾರು ಬೇಕಾದರೂ ಕಾಶ್ಮೀರ ಯುವತಿಯರನ್ನು ಮದುವೆ ಆಗಬಹುದು ಅಂತ ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ? ಮೋದಿ ಜೀ ನಮ್ಮ ಕನಸನ್ನು ನನಸು ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ವಿಕ್ರಮ್ ಸೈನಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದು ಇದೇ ಮೊದಲೇನಲ್ಲ. 2019 ಜನವರಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ಭಾರತದಲ್ಲಿ ಆತಂಕವಿದೆ ಎಂದು ಹೇಳಿವವರು ದೇಶದ್ರೋಹಿಗಳು. ಭಾರತದಲ್ಲಿ ವಾಸಿಸಲು ಆತಂಕವಿದೆ ಅಂತ ಹೇಳಿದವರಿಗೆ ಬಾಂಬ್ ಹಾಕಿ ಕೊಲ್ಲಬೇಕು, ಯಾರೊಬ್ಬರನ್ನೂ ಬಿಡುವುದಿಲ್ಲ. ಭದ್ರತೆ ಎಂಬುದು ನನ್ನ ಅಂತರ್ಗತ ಭಾವನೆ. ನನಗೆ ಖಾತೆ ಕೊಡಿ ಇಂತಹವರನ್ನು ನಾನು ಬಾಂಬ್ ಇಟ್ಟು ಉಡಾಯಿಸುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.

Share This Article
Leave a Comment

Leave a Reply

Your email address will not be published. Required fields are marked *