ʻಕೈʼ ಸರ್ಕಾರಕ್ಕೆ ಎರಡೂವರೆ ವರ್ಷ ಹೊತ್ತಲ್ಲೇ ನವೆಂಬರ್ ಕ್ರಾಂತಿನಾ? – ಡಿಕೆ ಆಪ್ತೇಷ್ಠ ಶಾಸಕರ ದೆಹಲಿ ಪರೇಡ್

2 Min Read

– ಎಂಎಲ್‌ಎಗಳ ಭೇಟಿಯಾಗದ ಖರ್ಗೆ

ಬೆಂಗಳೂರು: ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿರೋ ಹೊತ್ತಲ್ಲೇ ರಾಜ್ಯ ರಾಜಕೀಯದಲ್ಲಿ ನವೆಂಬರ್ ಕ್ರಾಂತಿ ಶುರುವಾದಂತೆ ಕಾಣುತ್ತಿದೆ. ಪವರ್ ಶೇರಿಂಗ್ ಬಗ್ಗೆ ಕಾಂಗ್ರೆಸ್ (Congress) ಹೈಕಮಾಂಡ್ ಯಾವುದೇ ಸಂದೇಶ ನೀಡದಿರೋದ್ರಿಂದ ಹೈಕಮಾಂಡ್ ಮೇಲೆ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಬಣ ಒತ್ತಡಕ್ಕೆ ಮುಂದಾಗಿದೆ.

ಗುರುವಾರ ಮಧ್ಯಾಹ್ನ 2 ಪ್ರತ್ಯೇಕ ವಿಮಾನಗಳಲ್ಲಿ ಡಿಕೆಶಿ ಬಣದ ಶಾಸಕರು ದೆಹಲಿಗೆ ಹಾರಿದ್ದಾರೆ. ಕೃಷಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಒಕ್ಕಲಿಗ ಶಾಸಕರಾದ ಕುಣಿಗಲ್ ರಂಗನಾಥ್ (Kunigal Ranganath), ನೆಲಮಂಗಲದ ಶ್ರೀನಿವಾಸ್, ಗುಬ್ಬಿ ಶ್ರೀನಿವಾಸ್, ಮಂಡ್ಯದ ಗಣಿಗ ರವಿ, ಮದ್ದೂರಿನ ಕದಲೂರು ಉದಯ್, ಶೃಂಗೇರಿಯ ರಾಜೇಗೌಡ, ಆನೇಕಲ್ ಶಿವಣ್ಣ, ಕುಡಚಿಯ ಮಹೇಂದ್ರ ತಮ್ಮಣ್ಣನವರ್, ಸಕ್ಕರೆ ಸಚಿವ ಶಿವಾನಂದ ಪಾಟೀಲ್, ಮೇಲ್ಮನೆ ಸದಸ್ಯರಾದ ಎಸ್.ರವಿ, ದಿನೇಶ್ ಗೂಳಿಗೌಡ ದೆಹಲಿಯಲ್ಲಿ ಖರ್ಗೆ ಭೇಟಿಗೆ ಯತ್ನಿಸಿದ್ದಾರೆ. ಆದರೆ, ಖರ್ಗೆ ಯಾರನ್ನೂ ಭೇಟಿಯಾಗದೇ ಹಿಂಬಾಗಿಲಿನಿಂದ ತೆರಳಿದ್ದಾರೆ.

ಶುಕ್ರವಾರ ವೇಣುಗೋಪಾಲ್ ಭೇಟಿಗೆ ಡಿಕೆ ಆಪ್ತೇಷ್ಠರು ಅವಕಾಶ ಕೇಳಿದ್ದಾರೆ. ನಾಳೆ ಇನ್ನೊಂದು ಬಣ ಕೂಡ ದೆಹಲಿಗೆ ಹೋಗುವ ಸಾಧ್ಯತೆ ಇದೆ. ಆದರೆ, ನಾಳೆ ಖರ್ಗೆ ಬೆಂಗಳೂರಿಗೆ ಬರುವ ಸಾಧ್ಯತೆ ಇದೆ. ಈ ಬೆಳವಣಿಗೆಗಳ ಮಧ್ಯೆಯೇ ಸಿಎಂ ಸಿದ್ದರಾಮಯ್ಯ ಮನೆಯಲ್ಲೂ ಸಭೆ ನಡೆದಿದೆ.

ಸಚಿವರಾದ ಬೈರತಿ ಸುರೇಶ್, ಡಾ.ಎಂಸಿ ಸುಧಾಕರ್, ಮಹದೇವಪ್ಪ, ಹಿರಿಯ ಶಾಸಕ ಆರ್‌.ವಿ ದೇಶಪಾಂಡೆ ಸೇರಿ ಹಲವರು ಸಭೆ ನಡೆಸಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ಮಾತ್ರ ನವೆಂಬರ್ ಕ್ರಾಂತಿಯೂ ಇಲ್ಲ… ಅದೆಲ್ಲಾ ಭ್ರಾಂತಿ. ಜನ ಬಯಸಿದ್ರೆ ಮತ್ತೊಂದು ಬಾರಿಗೆ ಬಜೆಟ್ ಮಂಡಿಸೋದಾಗಿ ಹೇಳಿದ್ದಾರೆ. ಇನ್ನೊಂದಡೆ, ಅಧಿಕಾರ ಹಸ್ತಾಂತರ ಬಗ್ಗೆ ಹೈಕಮಾಂಡ್ ಏನನ್ನೂ ಹೇಳಿಲ್ಲ ಅಂತ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ಡಿಕೆಶಿ ಬಣ ದೆಹಲಿ ಪರೇಡ್‌
ಇನ್ನು, ದೆಹಲಿಯಲ್ಲಿ ಡಿಕೆಶಿ ಬಣ ಪರೇಡ್ ನಡೆಸಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಸಚಿವ ಚಲುವರಾಯಸ್ವಾಮಿಗೆ ತುರ್ತು ಬುಲಾವ್ ನೀಡಿದ್ದಾರೆ. ಶುಕ್ರವಾರ ಬೆಳಗ್ಗೆ 10:30ಕ್ಕೆ ಮೆಕ್ಕೆಜೋಳ ಖರೀದಿ ಸಂಬಂಧ ಸಭೆ ಕರೆದಿದ್ದಾರೆ. ಆದರೆ, ದೆಹಲಿಯಲ್ಲಿ ಕೃಷಿ ಸಚಿವರ ಭೇಟಿಗಾಗಿ ಬಂದಿದ್ದು ನಾಳೆ ಮಧ್ಯಾಹ್ನ ಬೆಂಗಳೂರಿಗೆ ವಾಪಸ್ ಆಗೋದಾಗಿ ಪಬ್ಲಿಕ್‌ಟಿವಿಗೆ ಚಲುವರಾಯಸ್ವಾಮಿ ಹೇಳಿದ್ದಾರೆ. ಸಿಎಂಗೆ ಮಾಹಿತಿ ಕೊಟ್ಟಿದ್ದೇನೆ ಅಂತ ತಿಳಿಸಿದ್ದಾರೆ.

ನ.21 ರಂದು ವೇಣುಗೋಪಾಲ್ ಭೇಟಿಗೆ ಅವಕಾಶವನ್ನೂ ಕೇಳಿರುವುದಾಗಿ ಹೇಳಿದ್ದಾರೆ. ಇನ್ನೊಂದೆಡೆ, ಆಪ್ತೇಷ್ಠರು ದೆಹಲಿಗೆ ಹೋಗಿರೋದ್ಯಾಕೆ ಅಂತ ಗೊತ್ತಿಲ್ಲ ಅಂತ ಮಾಗಡಿ ಶಾಸಕ ಬಾಲಕೃಷ್ಣ ಹೇಳಿದ್ದಾರೆ.

ಡಿಕೆಶಿ ಬಣದ ಶಾಸಕರ ಪ್ಲ್ಯಾನ್‌ ಏನು?
* ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹಾಕುವುದು
* ಪವರ್ ಶೇರ್ ಗೊಂದಲದ ಬಗ್ಗೆ ಕ್ಲಾರಿಟಿ ಕೊಡಿ
* ಕೊಟ್ಟ ಮಾತಿನಂತೆ ಎರಡೂವರೆ ವರ್ಷ ಕೊಡಿ ಎಂಬ ತಂತ್ರ
* ಡಿಸೆಂಬರ್‌ನಲ್ಲೇ ಮಾತುಕತೆ ನಡೆಸಿ ಇತ್ಯರ್ಥಕ್ಕೆ ಪಟ್ಟು
* ಕನಿಷ್ಠ ಪಕ್ಷ ಸಂಕ್ರಾಂತಿ ಬಳಿಕವಾದ್ರೂ ಅವಕಾಶದ ಪ್ರಸ್ತಾಪ
* ಸುಮ್ಮನಿದ್ದರೆ ಕ್ಲೈಮ್‌ ಕಷ್ಟ.. ಜೀವಂತವಾಗಿಡುವ ತಂತ್ರಗಾರಿಕೆ.

Share This Article