ಜನರ ಭಾವನೆ ಎತ್ತಿ ಹಿಡಿದಿದ್ದಕ್ಕೆ ನೋಟಿಸ್ ಜಾರಿ ಸರಿಯಲ್ಲ: ಯತ್ನಾಳ್ ಪರ ಸಚಿವ ಸುರೇಶ್ ಕುಮಾರ್ ಬ್ಯಾಟ್

Public TV
2 Min Read

ಮಡಿಕೇರಿ: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ಶಾಸಕರಾದ ಯತ್ನಾಳ್‍ಗೆ ನೋಟಿಸ್ ನೀಡಿದ್ದಾರೆ ಎಂದು ವ್ಯಾಖ್ಯಾನ ಮಾಡುವುದು ಸರಿಯಲ್ಲ. ಯಾವ ಉದ್ದೇಶಕ್ಕೆ ಅವರಿಗೆ ನೋಟಿಸ್ ಕೊಟ್ಟಿದ್ದಾರೆ ಎಂಬುದನ್ನು ವಿಚಾರಿಸುವೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ನಗರದ ಖಾಸಗಿ ಶಾಲೆಯೊಂದರ ಕಾರ್ಯಕ್ರಮಕ್ಕೆ ಆಗಮಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶೋಕಾಸ್ ನೊಟೀಸ್ ನೀಡಿರುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ನೋಟಿಸ್ ಎಂಬ ವ್ಯಾಖ್ಯಾನ ಸರಿಯಲ್ಲ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಲೆಕ್ಕಾಚಾರದ ಮಧ್ಯೆ ವ್ಯತ್ಯಾಸಗಳಾಗಿರಬಹುದು. ಪ್ರವಾಹದ ವೇಳೆ ಆಗಿರುವ ಮೂಲ ಸೌಕರ್ಯಗಳ ಹಾನಿ ಹಿನ್ನಲೆಯಲ್ಲಿ 38 ಸಾವಿರ ಕೋಟಿಯಷ್ಟು ನಷ್ಟವಾಗಿದೆ ಎಂದು ನಮ್ಮ ತಂಡ ವರದಿ ನೀಡಿದೆ. ನಮ್ಮ ಬಳಿ ಇದ್ದಷ್ಟು ಹಣದಿಂದ ಈಗಾಗಲೇ ಪರಿಹಾರ ಕೆಲಸಗಳನ್ನು ನಾವು ಪ್ರಾರಂಭಿಸಿದ್ದೇವೆ. ಪ್ರಾರಂಭಿಕ ಹಂತದಲ್ಲಿ ಸಂತ್ರಸ್ತರಿಗೆ ಹಾಗೂ ಒಂದಿಷ್ಟು ಮನೆಗಳ ನಿರ್ಮಾಣಕ್ಕೂ ಹಣ ಕೊಟ್ಟಿದ್ದೇವೆ. ಆದರೆ ಶಾಶ್ವತ ಕೆಲಸಗಳನ್ನು ಮಾಡಲು ಹೆಚ್ಚು ಹಣದ ಅಗತ್ಯವಿದೆ ಎಂದು ಕೇಂದ್ರ ಸರ್ಕಾರದ ಮಧ್ಯಂತರ ನೆರೆ ಪರಿಹಾರದ ಬಿಡುಗಡೆ ಕುರಿತು ಪ್ರತಿಕ್ರಿಯಿಸಿದರು.

ಕುಮಾರಸ್ವಾಮಿ ಯಾವ ಸಂದರ್ಭದಲ್ಲಿ ಏನೇನು ಹೇಳುತ್ತಾರೆ ಎನ್ನುವುದು ಜಗತ್ತಿಗೆ ಗೊತ್ತಿಲ್ಲ. ಈ ಬಗ್ಗೆ ನಾನು ವ್ಯಾಖ್ಯಾನ ಕೊಡುವ ಅಗತ್ಯವಿಲ್ಲ. ಹಾಗೆಯೇ ಸಿದ್ದರಾಮಯ್ಯನವರು ಇಷ್ಟು ದಿನ ವ್ಯಾಕರಣದ ಮೇಷ್ಟ್ರು ಆಗಿದ್ದವರು ಇದೀಗ ಈಗ ಇತಿಹಾಸ ಮೇಷ್ಟ್ರು ಆಗಲು ಹೊರಟಿದ್ದಾರೆ. ಇಂತಹ ಹೋಲಿಕೆ ಸಿದ್ದರಾಮಯ್ಯರ ರಾಜಕೀಯ ಧೋರಣೆಯನ್ನು ತೋರಿಸುತ್ತದೆ ಎಂದು ಸಿದ್ದರಾಮಯ್ಯನವರು ಮೋದಿಯವರನ್ನು ಹಿಟ್ಲರ್‍ಗೆ ಹೋಲಿಸಿದ್ದರ ಕುರಿತು ತಿರುಗೇಟು ನೀಡಿದರು.

ರಾಜ್ಯದಲ್ಲಿ ಸಿಎಂ ಪುತ್ರ ಆಡಳಿತ ಮಾಡುತ್ತಿದ್ದಾರೆ ಎಂಬ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ಆರೋಪಗಳಿಗೆ ಸಿಎಂ ಪುತ್ರ ಹಾಗೂ ಸಿಎಂ ಎಲ್ಲರೂ ಸ್ಪಷ್ಟನೆ ಕೊಟ್ಟಿದಾರೆ. ನಾವೇ ಆಡಳಿತ ಮಾಡುತ್ತಿರುವುದು, ಸಂವಿಧಾನೇತರ ವ್ಯಕ್ತಿಗಳು ಯಾರೂ ಆಡಳಿತ ಮಾಡುತ್ತಿಲ್ಲ ಎಂದರು.

ಮಕ್ಕಳ ಕಲಿಕಾ ಸಾಮಥ್ರ್ಯ ಹೆಚ್ಚಿಸಲು ಈ ವರ್ಷದಿಂದಲೇ 7ನೇ ತರಗತಿಗೆ ಪಬ್ಲಿಕ್ ಪರಿಕ್ಷೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದೇವೆ. ಮುಂದಿನ ವರ್ಷದಿಂದ ಪೂರ್ಣವಾಗಿ ಅಳವಡಿಸುತ್ತೇವೆ. ಮಕ್ಕಳ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *