ಮುಚ್ಚಿಡಲು ಏನೂ ಇಲ್ಲ, ಸಮನ್ಸ್ ರಾಜಕೀಯ ಪ್ರೇರಿತ: ಕೇಜ್ರಿವಾಲ್

Public TV
1 Min Read

ನವದೆಹಲಿ: ‌ ನನಗೆ ಮುಚ್ಚಿಡಲು ಏನೂ ಇಲ್ಲ, ಸಮನ್ಸ್‌ ರಾಜಕೀಯ ಪ್ರೇರಿತವಾಗಿದೆ. ಹೀಗಾಗಿ ಈ ಕೂಡಲೇ ಸಮನ್ಸ್‌ (Summons) ಹಿಂಪಡೆಯಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Aravind Kejriwal) ಹೇಳಿದರು.

ಮದ್ಯ ನೀತಿ ಪ್ರಕರಣದಲ್ಲಿ (Liquor Policy Case) ತಮಗೆ ಜಾರಿ ಮಾಡಿರುವ ಇಡಿ ಸಮನ್ಸ್‌ಗೆ ಗುರುವಾರ ಪ್ರತಿಕ್ರಿಯಿಸಿದ್ದು, ಸಂಸ್ಥೆ ನೀಡಿದ ಹಿಂದಿನ ಸಮನ್ಸ್‌ನಂತೆಯೇ ಈ ಸಮನ್ಸ್ ಕೂಡ ಕಾನೂನುಬಾಹಿರವಾಗಿದೆ. ಇದು ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾಗಿರುವುದರಿಂದ ಸಮನ್ಸ್ ಅನ್ನು ಇಡಿ ಹಿಂಪಡೆಯಬೇಕು ಎಂದು ಹೇಳಿದ್ದಾರೆ.

ಸಮನ್ಸ್‌ಗೆ ಪ್ರತಿಯಾಗಿ ಆರು ಪುಟಗಳ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್, ನನಗೆ ಕಳುಹಿಸಲಾಗುತ್ತಿರುವ ಸಮನ್ಸ್‌ಗಳು ಯಾವುದೇ ವಸ್ತುನಿಷ್ಠ ಅಥವಾ ತರ್ಕಬದ್ಧ ಮಾನದಂಡವನ್ನು ಆಧರಿಸಿಲ್ಲ, ದೇಶದಲ್ಲಿ ಬಹು ನಿರೀಕ್ಷಿತ ಸಂಸತ್ತಿನ ಚುನಾವಣೆಯ ಕೊನೆಯ ಕೆಲವು ತಿಂಗಳುಗಳಲ್ಲಿ ಸಂವೇದನಾಶೀಲ ಸುದ್ದಿಯನ್ನು ಸೃಷ್ಟಿಸಲು ಈ ಸಮನ್ಸ್ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಸಿದ್ದು, ಡಿಕೆಶಿಯ ಶಾಸಕರ ಪಟ್ಟಿಗೆ ಹೈಕಮಾಂಡ್‌ ಬ್ರೇಕ್‌ – ದೆಹಲಿ ಸಭೆಯ ಇನ್‌ಸೈಡ್‌ ಸ್ಟೋರಿ

ಸದ್ಯ ರದ್ದುಗೊಂಡಿರುವ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯವು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಇದು ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯದಿಂದ ನೀಡಿರುವ ಎರಡನೇ ಸಮನ್ಸ್ ಆಗಿದೆ.

ಕಳೆದ ತಿಂಗಳು ಜಾರಿ ನಿರ್ದೇಶನಲಾಯ ಅರವಿಂದ್ ಕೇಜ್ರಿವಾಲ್ ಅವರಿಗೆ ನವೆಂಬರ್ 2 ರಂದು ಮೊದಲ ಬಾರಿ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಕೇಳಿತ್ತು. ಆದರೆ ಇದು ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥರು ವಿಚಾರಣೆಗೆ ಹಾಜರಾಗದೆ ಚುನಾವಣೆ ಪ್ರಚಾರಕ್ಕೆ ತೆರಳಿದ್ದರು.

Share This Article