ರಾಷ್ಟ್ರೀಯತೆಯ ಹೆಸರಿನಲ್ಲಿ ಕಾಶ್ಮೀರಿಗಳ ಹಕ್ಕು ಕಸಿಯಲಾಗುತ್ತಿದೆ- ಪ್ರಿಯಾಂಕಾ ಗಾಂಧಿ

Public TV
2 Min Read

ನವದೆಹಲಿ: ಕಾಶ್ಮೀರಿಗಳಿಗೆ ಪ್ರಜಾಪ್ರಭುತ್ವದ ಹಕ್ಕುಗಳನ್ನು ನಿರಾಕರಿಸುವುದಕ್ಕಿಂತ ‘ರಾಜಕೀಯ ಹಾಗೂ ರಾಷ್ಟ್ರ ವಿರೋಧಿ’ ಇನ್ನೊಂದಿಲ್ಲ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಕಿಡಿ ಕಾರಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿ, ಕಾಶ್ಮೀರಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಮಹಿಳೆಯೊಬ್ಬರು ಹೇಳಿಕೊಳ್ಳುತ್ತಿರುವ ಕ್ಲಿಪ್‍ನ್ನು ಹಾಕಿದ್ದಾರೆ. ಇದು ಇನ್ನೂ ಎಷ್ಟು ದಿನಗಳ ಕಾಲ ಮುಂದುವರಿಯಲಿದೆ? ರಾಷ್ಟ್ರೀಯತೆಯ ಹೆಸರಿನಲ್ಲಿ ಕಾಶ್ಮೀರಿಗಳ ಮೌನ ಹಾಗೂ ರಾಷ್ಟ್ರೀಯತೆಯ ಹೆಸರಿನಲ್ಲಿ ಮೂಲೆಗುಂಪು ಮಾಡಿರುವ ಲಕ್ಷಾಂತರ ಜನರ ಪೈಕಿ ಇದು ಒಂದು ಉದಾಹರಣೆ ಎಂದು ವಿಡಿಯೋ ಹಾಕಿದ್ದಾರೆ.

ಇತ್ತೀಚೆಗೆ ರಾಹುಲ್ ಗಾಂಧಿ ಅವರು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲು ಯತ್ನಿಸಿದ್ದರು. ಆದರೆ, ಶ್ರೀನಗರ ವಿಮಾನ ನಿಲ್ದಾಣದಲ್ಲೇ ಅವರನ್ನು ತಡೆದು ಮರಳಿ ದೆಹಲಿಗೆ ಕಳುಹಿಸಲಾಗಿತ್ತು. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಸಹ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿ, ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಿದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು.

ರಾಹುಲ್ ಗಾಂಧಿ ಹಾಗೂ ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ಮಧ್ಯೆ ಟ್ವೀಟ್ ವಾರ್ ನಡೆದಿತ್ತು. ಈ ಮಧ್ಯೆ ರಾಹುಲ್ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿ, ನೈಜ ಪರಿಸ್ಥಿತಿಯನ್ನು ಅರಿಯಲು ಯೋಜನೆ ರೂಪಿಸಿದ್ದರು. ಆದರೆ, ರಾಹುಲ್ ಗಾಂಧಿ ಸೇರಿದಂತೆ ಇತರ ವಿರೋಧ ಪಕ್ಷದ ನಾಯಕರನ್ನು ಅಲ್ಲಿನ ಆಡಳಿತ ಮಂಡಳಿ ಶ್ರೀನಗರ ವಿಮಾನ ನಿಲ್ದಾಣದಿಂದ ಹೊರ ಕಳುಹಿಸಿತ್ತು.

ಅಧಿಕಾರಿಗಳು ತಿಳಿಸಿದ ಪ್ರಕಾರ ಜಮ್ಮು ಕಾಶ್ಮೀರದಲ್ಲಿನ ಪರಿಸ್ಥತಿ ಸಹಜವಾಗಿಲ್ಲ ಎಂಬುದು ಸಾಬೀತಾಗಿದೆ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದರು. ಕೆಲವು ದಿನಗಳ ಹಿಂದೆ ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ರಾಜ್ಯಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದರು. ಅವರ ಆಹ್ವಾನವನ್ನು ಸ್ವೀಕರಿಸಿ ಇಲ್ಲಿಗೆ ಆಗಮಿಸಲು ನಿರ್ಧರಿಸಿದೆ. ರಾಜ್ಯಕ್ಕೆ ಭೇಟಿ ನೀಡಲು ವಿಮಾನದ ವ್ಯವಸ್ಥೆ ಮಾಡುವುದಾಗಿ ಸಹ ರಾಜ್ಯಪಾಲರು ತಿಳಿಸಿದ್ದರು. ನಾನು ವಿಮಾನದ ಅಗತ್ಯವಿಲ್ಲ, ನಿಮ್ಮ ಆಹ್ವಾನವನ್ನು ಸ್ವೀಕರಿಸಿ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದೆ ಎಂದು ಶ್ರೀನಗರ ವಿಮಾನ ನಿಲ್ದಾಣದಿಂದ ಹೊರಗೆ ಕಳುಹಿಸದ ನಂತರ ರಾಹುಲ್ ಕಿಡಿ ಕಾರಿದ್ದರು.

ರಾಹುಲ್ ಗಾಂಧಿ ಹಾಗೂ ವಿರೋಧ ಪಕ್ಷಗಳ ನಾಯಕರ ತಂಡ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡುವುದಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ರಾಜ್ಯ ಸರ್ಕಾರ ಟ್ವೀಟ್ ಮಾಡಿ, ಗಡಿಯಾಚೆಗಿನ ಭಯೋತ್ಪಾದನೆ ಹಾಗೂ ಇತರ ಬೆದರಿಕೆಗಳಿಂದ ಜನರನ್ನು ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ. ಇನ್ನೊಂದೆಡೆ ಜನಸಾಮಾನ್ಯರ ಜೀವನ ಕ್ರಮೇಣ ಪುನಃಸ್ಥಾಪನೆಯಾಗುತ್ತಿದೆ. ಇದಕ್ಕೆ ವಿರೋಧ ಪಕ್ಷಗಳು ಭಂಗ ತರುವ ಪ್ರಯತ್ನಗಳನ್ನು ಹಿರಿಯ ರಾಜಕೀಯ ಮುಖಂಡರು ಮಾಡಬಾರದು. ಒಂದು ವೇಳೆ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದಲ್ಲಿ ಅದು ನಿರ್ಬಂಧಗಳನ್ನು ಉಲ್ಲಂಘಿಸಿದಂತೆ. ಅಲ್ಲದೆ, ಜನರನ್ನು ಅನಾನುಕೂಲತೆಗೆ ತಳ್ಳಿದಂತೆ ಎಂದು ಎಚ್ಚರಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *