ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ನಿಗೂಢ ಶವಗಳ ಹೂತಿಟ್ಟ ಪ್ರಕರಣ ಸಂಬಂಧ ಎಸ್‌ಐಟಿ ಶೋಧಕ್ಕಿಳಿದಿದೆ. ದೂರುದಾರ ಹೇಳಿದಂತೆ 13 ಜಾಗಗಳನ್ನು ಗುರುತಿಸಿ ಅಸ್ಥಿಪಂಜರಗಳ ಹುಡುಕಾಟ ಆರಂಭಿಸಿದ್ದು, ಇವತ್ತು 7 ಹಾಗೂ 8 ಪಾಯಿಂಟ್‌ಗಳ ಉತ್ಖನನ ಮುಗಿದಿದೆ.
4ನೇ ದಿನವಾದ ಶುಕ್ರವಾರ ಕಳೇಬರದ ಕುರುಹುಗಾಗಿ ಎಸ್‌ಐಟಿ ಶೋಧ ನಡೆಸಿದೆ ಪಾಯಿಂಟ್ ನಂಬರ್ 7, 8ರಲ್ಲಿ ಗುಂಡಿ ಅಗೆಯಲಾಗಿದೆ. ಇನ್ನು, 5 ಗುಂಡಿಗಳ ಶೋಧ ಕಾರ್ಯ ಬಾಕಿ ಉಳಿದಿದೆ. ಒಂದೆರಡು ದಿನಗಳಲ್ಲಿ ಎಲ್ಲ 13 ಸ್ಥಳ ಉತ್ಖನನ ಮುಗಿಯಲಿದೆ. 6ನೇ ಸ್ಥಳದಲ್ಲಿ ಪುರುಷನ ಅಸ್ಥಿಪಂಜರದ ಕುರುಹು ಸಿಕ್ಕಿದ್ದನ್ನು ಬಿಟ್ಟರೆ, ಇದುವರೆಗೆ ಎಸ್‌ಐಟಿಗೆ ಯಾವುದೇ ಸುಳಿವು ಸಿಕ್ಕಿಲ್ಲ.
ಗುರುವಾರ ಪಾಯಿಂಟ್ 6ರಲ್ಲಿ ಅಸ್ಥಿಪಂಜರದ ಕುರುಹು ಸಿಕ್ಕ ಬೆನ್ನಲ್ಲೇ ತನಿಖೆಯ ಪ್ರಗತಿ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ ಪಡೆದುಕೊಂಡಿದ್ದಾರೆ. ದೆಹಲಿಗೆ ತೆರಳೋ ಮುನ್ನ ಪೊಲೀಸ್ ಮಹಾನಿರ್ದೇಶಕ ಸಲೀಂ ಅವರಿಂದ ತನಿಖೆಯ ಮಾಹಿತಿ ಪಡೆದುಕೊಂಡಿದ್ದಾರೆ. ಇನ್ನೊಂದೆಡೆ, ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ, ಗೃಹ ಸಚಿವ ಪರಮೇಶ್ವರ್‌ರನ್ನು ಭೇಟಿಯಾಗಿದ್ದಾರೆ.
ಕೇಂದ್ರ ಸೇವೆಗೆ ಕರೆಸಿಕೊಳ್ಳುವ ಅಧಿಕಾರಿಗಳ ಪಟ್ಟಿಯಲ್ಲಿ ಮೊಹಾಂತಿ ಹೆಸರಿದ್ದು, ಈ ಭೇಟಿ ಮಹತ್ವ ಪಡೆದುಕೊಂಡಿತ್ತು. ಪ್ರಣಬ್ ಮೋಹಂತಿ ಅವರ ಹೆಸರು ಕೇಂದ್ರ ಸೇವೆಗೆ ಹೆಸರು ಪ್ರಕಟವಾಗಿದೆ. ಆದರೆ ಯಾವುದೇ ಹುದ್ದೆ ತೋರಿಸಿಲ್ಲ. ನಾವು ಕಳುಹಿಸಿದರೆ ಮಾತ್ರ ಅವರು ಹೋಗ್ತಾರೆ ಅಂತ ಪರಮೇಶ್ವರ್ ಹೇಳಿದ್ರು. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಸಮಾಜದ ಭಾವನೆಗಳಿಗೆ ಧಕ್ಕೆ ಆಗುವ ಪೋಸ್ಟ್ ಮೇಲೆ ಗಮನ ಹರಿಸಿದ್ದು, ಧರ್ಮಸ್ಥಳದ ವಿಚಾರದಲ್ಲೂ ಇಂಥ ಪೋಸ್ಟ್ ಹಾಕುತ್ತಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.