ನೋಟು ನಿಷೇಧದ ಅಧಿಸೂಚನೆಯೇ ಕಾನೂನುಬಾಹಿರ: ನ್ಯಾ.ನಾಗರತ್ನ

Public TV
2 Min Read

ನವದೆಹಲಿ: 2016ರ ನವೆಂಬರ್ 8ರಂದು ಅಧಿಸೂಚನೆ ಹೊರಡಿಸಿ ಕೈಗೊಂಡ ನೋಟು ನಿಷೇಧ(Note Ban) ಕ್ರಮವು ಕಾನೂನುಬಾಹಿರವಾಗಿದೆ. ಆದರೆ 2016 ರಲ್ಲಿದ್ದ ಯಥಾಸ್ಥಿತಿಯನ್ನು ಈಗ ಪುನಃಸ್ಥಾಪಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ನ್ಯಾಯಮೂರ್ತಿ(Supreme Court) ನಾಗರತ್ನ ಅವರು ತಮ್ಮ ತೀರ್ಪಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಅಮಾನ್ಯೀಕರಣ(Demonetisation) ನಿರ್ಧಾರ ಸರಿ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಐತಿಹಾಸಿಕ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್‌ನ ಐದು ನ್ಯಾಯಾಧೀಶರ ಪೈಕಿ ನಾಲ್ವರು ಕೇಂದ್ರ ನಿರ್ಧಾರ ಸರಿ ಎಂದು ಹೇಳಿದರೆ ನ್ಯಾಯಮೂರ್ತಿ ನಾಗರತ್ನ(Justice BV Nagarathna) ಭಿನ್ನ ತೀರ್ಪು ನೀಡಿದ್ದಾರೆ. ನೋಟು ಅಮಾನ್ಯೀಕರಣ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಎಲ್ಲಾ ಅರ್ಜಿಗಳನ್ನು ಸುಪ್ರೀಂ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಎಸ್.ಅಬ್ದುಲ್ ನಜೀರ್, ಬಿ.ಆರ್.ಗವಾಯಿ, ಎ.ಎಸ್.ಬೋಪಣ್ಣ, ವಿ.ರಾಮಸುಬ್ರಮಣಿಯನ್ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ಸಾಂವಿಧಾನಿಕ ಪೀಠವು 2022ರ ಡಿಸೆಂಬರ್ 7ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು.

ನ್ಯಾ. ನಾಗರತ್ನ ತೀರ್ಪಿನಲ್ಲಿ ಏನಿದೆ?
ನೋಟು ನಿಷೇಧದ ಕಾನೂನಾತ್ಮಕ ಅಂಶಗಳು ಸಂಸತ್ತಿನಲ್ಲಿ(Parliament ) ಚರ್ಚೆ ಆಗಬೇಕಿತ್ತು. ಸಂಸತ್ತು ಇಲ್ಲದೇ ಪ್ರಜಾಪ್ರಭುತ್ವ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಇಂತಹ ಪ್ರಮುಖ ನಿರ್ಧಾರ ಕೈಗೊಳ್ಳುವಾಗ ಸಂಸತ್ತನ್ನು ದೂರವಿಟ್ಟಿದ್ದು ಸರಿಯಲ್ಲ. ಇದನ್ನೂ ಓದಿ: ಕೇಂದ್ರ ಸರ್ಕಾರದ ನೋಟ್ ಬ್ಯಾನ್‌ ನಿರ್ಧಾರ ನ್ಯಾಯ ಸಮ್ಮತವಾಗಿದೆ: ಸುಪ್ರೀಂ ಕೋರ್ಟ್

ನೋಟು ಅಮಾನ್ಯೀಕರಣದ ಬಗ್ಗೆ ವಿಶ್ವಾದ್ಯಂತದ ಇತಿಹಾಸವನ್ನು ಉಲ್ಲೇಖಿಸಿದ್ದೇನೆ. ಕೇಂದ್ರ ಸರ್ಕಾರವು ನೋಟು ನಿಷೇಧದ ಬಗ್ಗೆ ಆರ್‌ಬಿಐ(RBI) ಅಭಿಪ್ರಾಯವನ್ನು ಮಾತ್ರ ಕೇಳಿತ್ತು. ಆರ್‌ಬಿಐ ಸ್ವತಂತ್ರ ನಿರ್ಧಾರವನ್ನು ಜಾರಿಗೊಳಿಸಿಲ್ಲ. ಆರ್‌ಬಿಐ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದಾಗ, “ಕೇಂದ್ರ ಸರ್ಕಾರವು ಬಯಸಿದಂತೆ”, “500 ಮತ್ತು 1000 ನೋಟುಗಳನ್ನು ಹಿಂಪಡೆಯಲು ಸರ್ಕಾರ ಶಿಫಾರಸು ಮಾಡಿದೆ” ಎಂಬ ಪದಗಳು ಮತ್ತು ಪದಗುಚ್ಛಗಳ ಬಳಕೆಯನ್ನು ನಾನು ಗಮನಿಸಿದ್ದೇನೆ. ಆರ್‌ಬಿಐ ಸ್ವತಂತ್ರ ನಿರ್ಧಾರವನ್ನು ಜಾರಿಗೊಳಿಸದೇ ಇರುವುದು ಸರಿಯಲ್ಲ.

RBI

ಆರ್‌ಬಿಐ ಕಾಯಿದೆ ಪ್ರಕಾರ, ನೋಟು ಅಮಾನ್ಯೀಕರಣದ ಶಿಫಾರಸು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಂಡಳಿಯಿಂದ ಬರಬೇಕಿತ್ತು. ಆದರೆ ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ ನವೆಂಬರ್ 7 ರಂದು ಆರ್‌ಬಿಐಗೆ ಪತ್ರ ಬರೆದು ಅಂತಹ ಶಿಫಾರಸಿಗೆ ಸಲಹೆ ನೀಡಿದೆ.

500 ಮತ್ತು 1000 ರೂ. ಎಲ್ಲಾ ಸರಣಿಯ ನೋಟುಗಳ ಅಮಾನ್ಯೀಕರಣದ ಸಂಪೂರ್ಣ ಕೆಲಸವನ್ನು 24 ಗಂಟೆಯಲ್ಲಿ ನಡೆಸಲಾಗಿದೆ. ಭಾರತದ ಆರ್ಥಿಕತೆ(Indian Economy) ಮತ್ತು ನಾಗರಿಕರ ಮೇಲೆ ಆಗುವ ಪರಿಣಾಮಗಳ ಬಗ್ಗೆ ಚರ್ಚೆ ನಡೆಸಿದ ಬಳಿಕ ಆರ್‌ಬಿಐ ಸ್ವತಂತ್ರ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕಿತ್ತು.

ಆರ್‌ಬಿಐ ಒಂದು ವೇಳೆ ನೋಟು ನಿಷೇಧ ನಿರ್ಧಾರವನ್ನು ಕೈಗೊಳ್ಳುವಂತೆ ಶಿಫಾರಸು ಮಾಡಿದರೂ ಸರ್ಕಾರ ಕೂಡಲೇ ನೋಟಿಫಿಕೇಶನ್‌ ಹೊರಡಿಸುವಂತಿಲ್ಲ. ಈ ನಿರ್ಧಾರ ಸಂಸತ್ತಿನ ಮೂಲಕ ಅಥವಾ ಸುಗ್ರೀವಾಜ್ಞೆಯ ಮೂಲಕ ನಡೆಯಬೇಕು. ಈ ಎಲ್ಲಾ ಕಾರಣದಿಂದ 2016 ನವೆಂಬರ್‌ 8ರ ನೋಟು ನಿಷೇಧದ ಅಧಿಸೂಚನೆ ಕಾನೂನಿಗೆ ವಿರುದ್ಧ ಮತ್ತು ಕಾನೂನುಬಾಹಿರವಾಗಿದೆ. ಆದರೆ 2016 ರಲ್ಲಿದ್ದ ಯಥಾಸ್ಥಿತಿಯನ್ನು ಈಗ ಪುನಃಸ್ಥಾಪಿಸಲು ಸಾಧ್ಯವಿಲ್ಲ.

ಆರ್ಥಿಕತೆಗೆ ಸಮಸ್ಯೆ ತರುತ್ತಿರುವ ಕಪ್ಪು ಹಣ, ಭಯೋತ್ಪಾದಕ ನಿಧಿ ಮತ್ತು ನಕಲಿ ನೋಟುಗಳನ್ನು ನಿಯಂತ್ರಿಸಲು ಈ ಕ್ರಮ ಸದುದ್ದೇಶವನ್ನು ಹೊಂದಿದೆ. ಉದ್ದೇಶ ಉತ್ತಮವಾಗಿದ್ದರೂ ಈ ಪ್ರಕ್ರಿಯೆ ಅನುಮಾನಾಸ್ಪದದಿಂದ ಕೂಡಿತ್ತು. ಅಮಾನ್ಯಗೊಳಿಸಲಾದ ಕರೆನ್ಸಿ ನೋಟುಗಳ ಮೌಲ್ಯದ ಸುಮಾರು ಶೇ.98 ರಷ್ಟು ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಬದಲಾಯಿಸಿದ್ದರಿಂದ ಕಾನೂನುಬದ್ಧ ಟೆಂಡರ್‌ ಆಗಿಯೇ ಮುಂದುವರಿಯುತ್ತದೆ. ಅಲ್ಲದೇ 2000 ರೂ. ಹೊಸ ನೋಟುಗಳನ್ನು ಆರ್‌ಬಿಐ ಬಿಡುಗಡೆ ಮಾಡಿದೆ. ಇದರಿಂದಾಗಿ ಈ ನೋಟು ನಿಷೇಧದ ನಿರ್ಧಾರ ಪರಿಣಾಮಕಾರಿಯಾಗಿಲ್ಲ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *