ಬಲೂನ್‌ಗಳಿಗೆ ಕಸ ಕಟ್ಟಿ ದಕ್ಷಿಣ ಕೊರಿಯಾಗೆ ರವಾನಿಸಿದ ಉತ್ತರ ಕೊರಿಯಾ!

Public TV
1 Min Read

ಸಿಯೋಲ್: ಉತ್ತರ ಕೊರಿಯಾ (North Korea) ತನ್ನ ಕ್ಷಿಪಣಿ ಪರೀಕ್ಷೆಗಳಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತದೆ. ಆದರೆ ಈ ಬಾರಿ ದಕ್ಷಿಣ ಕೊರಿಯಾಕ್ಕೆ ಕಿರುಕುಳ ನೀಡುವ ಉದ್ದೇಶದಿಂದ ಉತ್ತರ ಕೊರಿಯಾ ಹೊಲಸು ಹರಡಲು ಆರಂಭಿಸಿದೆ.

ದಕ್ಷಿಣ ಕೊರಿಯಾದ‌ (South Korea) 8 ಪ್ರಾಂತ್ಯಗಳಲ್ಲಿ ಸುಮಾರು 260 ಬಲೂನ್‌ಗಳು ಪತ್ತೆಯಾಗಿವೆ. ರಾಜಧಾನಿ ಸಿಯೋಲ್ ಮತ್ತು ದೇಶದ ಆಗ್ನೇಯ ಪ್ರಾಂತ್ಯದ ಜಿಯೊಂಗ್‌ಸಾಂಗ್‌ನಲ್ಲಿಯೂ ಬಲೂನ್‌ಗಳು ಬಿದ್ದಿವೆ. ಈ ಬಲೂನ್‌ಗಳು ಸಂಪೂರ್ಣವಾಗಿ ಕೊಳಕಿನಿಂದ ತುಂಬಿವೆ. ಆದ್ದರಿಂದ ದಕ್ಷಿಣ ಕೊರಿಯಾದ ಅಧಿಕಾರಿಗಳು ಮನೆಯೊಳಗೆ ಇರುವಂತೆ ಜನರಿಗೆ ಸಲಹೆ ನೀಡಿದ್ದಾರೆ. ಅಲ್ಲದೇ ಬಲೂನ್‌ಗಳ ಹತ್ತಿರ ಹೋಗಬೇಡಿ ಹಾಗೂ ಅವುಗಳನ್ನು ಮುಟ್ಟಬೇಡಿ ಎಂಬುದಾಗಿ ಸೂಚನೆ ನೀಡಿದ್ದಾರೆ.

ಸೇನೆಯಿಂದ ಎಚ್ಚರಿಕೆ: ಬಲೂನ್‌ಗಳೊಂದಿಗೆ (Balloon) ಬಂದಿರುವ ಕಸದಲ್ಲಿ ಪ್ಲಾಸ್ಟಿಕ್ ಬಾಟ್ಲಿಗಳು, ಹಾಳಾದ ಶೂಗಳ ಭಾಗಗಳು ಮತ್ತು ಮಣ್ಣು ಸೇರಿವೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿಯ ಜಂಟಿ ಮುಖ್ಯಸ್ಥರು ತಿಳಿಸಿದ್ದಾರೆ. ಸೇನೆಯು ಪ್ರಸ್ತುತ ಈ ಬಲೂನ್‌ಗಳ ಬಗ್ಗೆ ತನಿಖೆ ನಡೆಸುತ್ತಿದೆ. ಉತ್ತರ ಕೊರಿಯಾದ ಈ ಕ್ರಮದಿಂದ ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯಾಗಿದೆ. ಇದೊಂದು ಬೆದರಿಕೆಯಾಗಿದ್ದು, ಇಂತಹ ಅಮಾನವೀಯ ಕ್ರಮಗಳನ್ನು ಕೂಡಲೇ ನಿಲ್ಲಿಸುವಂತೆ ದಕ್ಷಿಣ ಕೊರಿಯಾದ ಸೇನೆಯು ಉತ್ತರ ಕೊರಿಯಾಕ್ಕೆ ಎಚ್ಚರಿಕೆ ನೀಡಿದೆ.

ವೀಡಿಯೋ, ಫೋಟೋಗಳು ವೈರಲ್:‌ ಬಲೂನ್‌ಗಳನ್ನು ಕಂಡ ದಕ್ಷಿಣ ಕೊರಿಯಾದ ಜನರು ಅದರ ವೀಡಿಯೋ ಹಾಗೂ ಫೋಟೋಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಸ್ಥಳೀಯ ಜನರ ಪ್ರಕಾರ, ಬಲೂನ್‌ಗಳನ್ನು ಊದಿ ನಂತ್ರ ದಾರದಿಂದ ಏನೋ ಕಟ್ಟಲಾಗಿತ್ತು.  ಅದರಲ್ಲಿ ಟಾಯ್ಲೆಟ್ ಪೇಪರ್, ಬ್ಯಾಟರಿ, ಕಸ ಮತ್ತಿತರ ವಸ್ತುಗಳು ಪತ್ತೆಯಾಗಿವೆ. ಇಂತಹ ವಸ್ತುಗಳು ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ನಾಗರಿಕರಿಗೆ ತಿಳಿಸಲಾಗಿದೆ.

Share This Article