ಉತ್ತರ ಕರ್ನಾಟಕದತ್ತ ದೇವೇಗೌಡರ ಚಿತ್ತ

Public TV
1 Min Read

ಬೆಂಗಳೂರು : ಹಳೇ ಮೈಸೂರು ಭಾಗದಲ್ಲಿ ಮಾತ್ರ ಜೆಡಿಎಸ್ ಅಸ್ತಿತ್ವ ಅನ್ನೋ ಅಪವಾದ ಕಳಚಲು ಜೆಡಿಎಸ್ ವರಿಷ್ಠ ದೇವೇಗೌಡರು ಪಣ ತೊಟ್ಟಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಮಾತ್ರ ಪಕ್ಷ ಇದ್ದರೆ ಮುಂದೆ ಅಧಿಕಾರ ಹಿಡಿಯೋದು ಕಷ್ಟ ಅಂತ ತಿಳಿದಿರೋ ದೇವೇಗೌಡರು, ಉತ್ತರ ಕರ್ನಾಟಕದ ಕಡೆ ಮುಖ ಮಾಡಿ, ಉತ್ತರದಲ್ಲೂ ಪಕ್ಷ ಸಂಘಟನೆಗೆ ರಣತಂತ್ರ ರೂಪಿಸಿದ್ದಾರೆ.

ಜೆಡಿಎಸ್ ಗೆ ಉತ್ತರ ಕರ್ನಾಟಕದಲ್ಲಿ ಸರಿಯಾದ ನೆಲೆಯಿಲ್ಲ. ಹೀಗಾಗಿ ಏಕಾಂಕಿಯಾಗಿ ಅಧಿಕಾರ ಹಿಡಿಯೋದು ಕಷ್ಟ. ಇದನ್ನ ಅರಿತಿರೋ ದೇವೇಗೌಡರು ಈ ಬಾರಿ ಶತಾಯಗತಾಯ ಉತ್ತರ ಕರ್ನಾಟಕದಲ್ಲಿ ಪಕ್ಷದ ಬಾವುಟ ಹಾರಿಸಲು ಸಿದ್ದತೆ ಆರಂಭ ಮಾಡಿಕೊಂಡು, ಉತ್ತರ ಶಿಕಾರಿಗೆ ಮುಹೂರ್ತ ಇಟ್ಟಿದ್ದಾರೆ.

ಉತ್ತರ ಕರ್ನಾಟಕಕ್ಕೆ ಹೆಚ್ಚು ಪ್ರಾತಿನಿಧ್ಯ ನೀಡೋ ನಿಟ್ಟಿನಲ್ಲಿ ಹಾಲಿ-ಮಾಜಿ ಶಾಸಕರನ್ನ ಪಕ್ಷ ಸಂಘಟನೆಗೆ ಬಳಸಿಕೊಳ್ಳಲು ತೀರ್ಮಾನ ಮಾಡಿದ್ದು, ಎಲ್ಲರಿಗೂ ಟಾರ್ಗೆಟ್ ನೀಡೋಕೆ ರೆಡಿಯಾಗಿದ್ದಾರೆ. ಪ್ರತಿ ಜಿಲ್ಲೆಗಳಲ್ಲಿ ಜಿಲ್ಲಾ ಸಮಿತಿ ರಚನೆ ಮಾಡೋದು, ಅ ಸಮಿತಿ ಮೂಲಕ ಪಕ್ಷದ ಸದಸ್ಯತ್ವ ನೋಂದಣಿಗೆ ಪ್ಲಾನ್ ಮಾಡಿದ್ದಾರೆ. ಇದಲ್ಲದೆ ಉತ್ತರ ಕರ್ನಾಟಕದಲ್ಲಿ ರೈತ, ಪರಿಶಿಷ್ಟ ಜಾತಿ-ಪಂಗಡ, ಹಿಂದುಳಿದ ವರ್ಗಗಳ ಸಮಾವೇಶ ಮಾಡೋಕು ಪ್ಲಾನ್ ಮಾಡಿದ್ದಾರೆ. ಇಷ್ಟೇ ಅಲ್ಲದೆ ಸ್ವತಃ ದೇವೇಗೌಡರು ಉತ್ತರ ಕರ್ನಾಟಕದ ಜಿಲ್ಲಾ ಪ್ರವಾಸ ಮಾಡಿ ಪಕ್ಷ ಬಲವರ್ಧನೆಗೆ ಅಗತ್ಯ ರೂಪುರೇಷೆ ಸಿದ್ಧ ಮಾಡಲಿದ್ದಾರೆ.

ಜನವರಿ ಬಳಿಕ ಉತ್ತರದ ಶಿಕಾರಿ ಆರಂಭ ಮಾಡಲಿರೋ ದೇವೇಗೌಡರು, ಮೈಸೂರು ಭಾಗದಷ್ಟೇ ಉತ್ತರ ಕರ್ನಾಟಕದಲ್ಲಿ ಪಕ್ಷ ಬೆಳೆಸಲು ನಿರ್ಧಾರ ಮಾಡಿದ್ದಾರೆ. ಉತ್ತರ ಗೆದ್ದವರು ಅಧಿಕಾರ ಹಿಡಿಯುತ್ತಾರೆ ಅನ್ನೋ ಮಾತಿದೆ. ಹೀಗಾಗಿ ಉತ್ತರ ಕರ್ನಾಟಕದ ಮೇಲೆ ದೇವೇಗೌಡರು ಕಣ್ಣಿಟ್ಟಿದ್ದಾರೆ. ಬಿಜೆಪಿ ಕಾಂಗ್ರೆಸ್ ಅನ್ನೋ ಪ್ರಬಲ ರಾಷ್ಟ್ರೀಯ ಪಕ್ಷಗಳ ನಡುವೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಉತ್ತರ ಶಿಕಾರಿಯಲ್ಲಿ ಯಶಸ್ಸು ಕಾಣುತ್ತಾ ಕಾದುನೋಡಬೇಕು.

Share This Article
Leave a Comment

Leave a Reply

Your email address will not be published. Required fields are marked *