ಉತ್ತರ ಕರ್ನಾಟಕದ ಭಾಗದಲ್ಲಿ ಅಳ್ಳಿಟ್ಟು ಉಂಡೆ ಸಿಕ್ಕಾಪಟ್ಟೆ ಫೇಮಸ್. ಈ ಅಳ್ಳಿಟ್ಟು ಉಂಡೆಯಲ್ಲಿ ಸಾಕಷ್ಟು ಪ್ರೋಟಿನ್‌ಗಳಿದ್ದು, ಜೀರ್ಣಕ್ರಿಯೆ, ತೂಕ ನಿರ್ವಹಣೆ ಮಾಡಲು ಸಹಕಾರಿಯಾಗಿದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಆರೋಗ್ಯಕರ ಹಾಗೂ ಸುಲಭವಾಗಿ ಮಾಡಬಹುದಾದ ಅಳ್ಳಿಟ್ಟು ಉಂಡೆ ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ರೆ ಇದನ್ನು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ.
ಬೇಕಾಗುವ ಸಾಮಗ್ರಿಗಳು:
ಜೋಳದ ಅರಳು – ಒಂದು ಕಪ್
ಗೋದಿ ಹಿಟ್ಟು – ಒಂದು ಕಪ್
ಬೆಲ್ಲದ ಪುಡಿ – ಒಂದು ಕಪ್
ತುಪ್ಪ – ಮೂರರಿಂದ ನಾಲ್ಕು ಚಮಚ
ಅಕ್ಕಿ – ಒಂದು ಚಮಚ
ಗಸಗಸೆ – ಅರ್ಧ ಚಮಚ
ಏಲಕ್ಕಿ – ಅಗತ್ಯಕ್ಕೆ ತಕ್ಕಷ್ಟು
ಲವಂಗ – ಸ್ವಲ್ಪ
ಜಾಯಿಕಾಯಿ ಪುಡಿ – ಒಂದು ಚಿಟಿಕೆ
ನೀರು – ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ:
*ಮೊದಲಿಗೆ ಒಂದು ಚಮಚದಷ್ಟು ಅಕ್ಕಿಯನ್ನು ಹುರಿದುಕೊಂಡು ತಣ್ಣಗಾಗಲು ಬಿಡಿ.
*ಆ ಬಳಿಕ ಜೋಳದ ಅರಳು, ಹುರಿದಿಟ್ಟ ಅಕ್ಕಿ ಸೇರಿಸಿ ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿ.
*ಈ ಮಿಶ್ರಣಕ್ಕೆ ಗೋಧಿ ಹಿಟ್ಟು, ತುಪ್ಪ ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ.
*ಇನ್ನೊಂದು ಪಾತ್ರೆಯಲ್ಲಿ ನೀರು ಕಾಯಿಸಿ, ಅದಕ್ಕೆ ಪುಡಿ ಮಾಡಿದ ಬೆಲ್ಲ ಹಾಕಿ ಚೆನ್ನಾಗಿ ಕರಗಿಸಿ.
*ಈಗಾಗಲೇ ಪುಡಿ ಮಾಡಿದ ಹುರಿದ ಅರಳು, ಗೋಧಿ ಹಾಗೂ ಅಕ್ಕಿ ಹಿಟ್ಟಿನ ಮಿಶ್ರಣ ಹಾಕಿ ಕೈಯಾಡಿಸುತ್ತ ಇರಿ. ತಳ ಬಿಡುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ.
*ಇನ್ನೊಂದು ಕಡೆ ಏಲಕ್ಕಿ, ಲವಂಗ ಮತ್ತು ಗಸಗಸೆ, ಜಾಯಿಕಾಯಿ ಎಲ್ಲ ಸೇರಿಸಿ ಪುಡಿ ಮಾಡಿಕೊಳ್ಳಿ.
*ಈ ಮಿಶ್ರಣಕ್ಕೆ ಪುಡಿ ಮಾಡಿರುವುದನ್ನು ಸೇರಿಸಿ ಕೈಗೆ ತುಪ್ಪ ಸವರಿಕೊಂಡು ಉಂಡೆಗಳಾಗಿ ಕಟ್ಟಿದರೆ ಸಿಹಿಯಾದ ಅಳ್ಳಿಟ್ಟು ಸವಿಯಲು ಸಿದ್ಧ.