ಆಗಸ್ಟ್ 2 ರಂದು ಉತ್ತರ ಕರ್ನಾಟಕದ 13 ಜಿಲ್ಲೆಗಳು ಬಂದ್!

Public TV
2 Min Read

ಹುಬ್ಬಳ್ಳಿ: ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿರುವ ರೈತ ಸಂಘ 13 ಜಿಲ್ಲೆಗಳ ಬಂದ್ ಕರೆ ನೀಡಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೋರಾಟಗಾರರು, ಉತ್ತರ ಕರ್ನಾಟವನ್ನು ನಿರಂತರವಾಗಿ ನಿರ್ಲಕ್ಷ್ಯ ಮಾಡಲಾಗಿದೆ. ರೈತರು ಸಹ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ರಾಜ್ಯ ಬಜೆಟ್‍ನಲ್ಲೂ ಉತ್ತರ ಕರ್ನಾಟಕ್ಕೆ ಅನ್ಯಾಯ ಮಾಡಲಾಗಿದೆ. ಅದ್ದರಿಂದ ಪ್ರತ್ಯೇಕ ರಾಜ್ಯ ರಚನೆ ಹೋರಾಟಕ್ಕಾಗಿ ಬೆಂಬಲ ಪಡೆಯಲು 13 ಜಿಲ್ಲೆಗಳದ್ಯಾಂತ ಸಂಚರಿಸಿ ಪ್ರತಿ ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳ ಬೆಂಬಲ ಪಡೆಯಲಾಗುವುದು. ಈ ಹೋರಾಟವನ್ನು ತೀವ್ರಗೊಳಿಸಲು ಆಗಸ್ಟ್ 2 ರಂದು ಬಂದ್ ಕರೆ ನೀಡಲಾಗಿದೆ ಎಂದು ಹೇಳಿದರು.

ಸಿಎಂ ಕುಮಾರಸ್ವಾಮಿ ಕಳೆದ ಎರಡು ದಿನಗಳ ಹಿಂದೆ ಪ್ರತ್ಯೇಕ ಉತ್ತರ ಕರ್ನಾಟಕ ಸ್ಥಾಪನೆ ಕುರಿತು ನೀಡಿರುವ ಹೇಳಿಕೆ ಹೆಚ್ಚು ನೋವು ತಂದಿದೆ. ಪ್ರತ್ಯೇಕ ರಾಜ್ಯ ಸ್ಥಾಪನೆ ಮಾಡಿದರೆ ಮಾಡಿಕೊಳ್ಳಿ, ಅಭಿವೃದ್ಧಿಗೆ ಎಲ್ಲಿಂದ ಹಣ ತರುತ್ತಿರಾ ಎಂದು ಪ್ರಶ್ನೆ ಮಾಡಿದ್ದಾರೆ. ಸದ್ಯ ಸಿಎಂ ತಮ್ಮ ಮಾತಿಗೆ ಬದ್ಧರಾಗುವ ಮೂಲಕ ಸಂಪುಟದಲ್ಲಿ ಈ ಕುರಿತು ಚರ್ಚೆ ನಡೆಸಿ ಕೇಂದ್ರಕ್ಕೆ ಪ್ರತ್ಯೇಕ ರಾಜ್ಯ ಸ್ಥಾಪನೆ ಮಾಡಲು ಶಿಫಾರಸ್ಸು ಮಾಡಿ. ಈ ಕುರಿತು ಸಮೀಕ್ಷೆ ನಡೆಸಲು ಸಮಿತಿ ರಚನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರವನ್ನು ಅಭಿವೃದ್ಧಿ ಮಾಡಿ ಎಂದು ಮನವಿ ಮಾಡಿಕೊಳ್ಳುವುದು ಬೇಡ. ಕಳಸಾ ಬಂಡೂರಿ ಹೋರಾಟ ನಾವೇ ಮಾಡಿಕೊಳ್ಳುತ್ತೇವೆ. ಸದ್ಯ ಕರೆ ನೀಡಿರುವ ಬಂದ್ ಗೆ 13 ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ದಾವಣಗೆರೆ, ಉತ್ತರ ಕನ್ನಡ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಬೀದರ್, ಬಳ್ಳಾರಿ, ಗದಗ, ಹಾವೇರಿ, ಯಾದಗಿರಿ ಜಿಲ್ಲೆಗಳ ವಿವಿಧ ಮಠಾಧೀಶರು, ಸಾರ್ವಜನಿಕ ಸಂಘ ಸಂಸ್ಥೆಗಳು, ವರ್ತಕರ ಸಂಘ, ವಿದ್ಯಾರ್ಥಿ ಒಕ್ಕೂಟಗಳು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಸ್ಥಾಪನೆಗೆ ಬೇಕಾದ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಈಗಾಗಲೇ ಸುವರ್ಣಸೌಧ ನಿರ್ಮಾಣ ಮಾಡಲಾಗಿದ್ದು, ಹೈಕೋರ್ಟ್ ಪೀಠ ಸೇರದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ. ಪ್ರತ್ಯೇಕ ರಾಜ್ಯ ಸ್ಥಾಪನೆಗೆ ಅನುಮತಿ ನೀಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರವಿದೆ. ಅದ್ದರಿಂದ ರಾಜ್ಯ ಸರ್ಕಾರ ಕೇವಲ ಪ್ರಸ್ತಾವನೆ ಮಾಡಿದರೆ ಸಾಕು. ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದರು.

ಇದೇ ವೇಳೆ ಸಂಪೂರ್ಣ ಸಾಲಮನ್ನಾ ಮಾಡದ ರಾಜ್ಯ ಸರ್ಕಾರ ವಿರುದ್ಧ ಕಿಡಿಕಾರಿದ ಹೋರಾಟಗಾರರು, ರೈತರ ಬಗ್ಗೆ ಸಿಎಂ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಹಲವು ರೈತ ಮಹಿಳೆಯರು ಸಹ ಸಾಲ ಮಾಡಿ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ತಮ್ಮ ಹೋರಾಟಕ್ಕೆ ಯಾವುದೇ ರಾಜಕೀಯ ಹೋರಾಟಗಾರರು ಬೆಂಬಲ ನೀಡಿ ಎಂದು ಬೇಡಿಕೆಯಿಟ್ಟಿಲ್ಲ, ಆದರೆ ಅವರು ನಮ್ಮೊಂದಿಗೆ ಹೋರಾಟಕ್ಕೆ ಬೆಂಬಲ ನೀಡಿದರೆ ಸ್ವಾಗತ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *