3,700 ಕೆ.ಜಿ ಸ್ಫೋಟಕ, 10 ಸೆಕೆಂಡ್- 1,200 ಕೋಟಿಯ ದೈತ್ಯ ಅವಳಿ ಕಟ್ಟಡ ಉಡೀಸ್

Public TV
1 Min Read

– ನೆಲಸಮಗೊಳಿಸಲು ಮಾಡಿದ ಖರ್ಚು ಎಷ್ಟು..?

ಲಕ್ನೋ: ದೇಶದ ಅತಿ ಎತ್ತರದ ವಸತಿ ಕಟ್ಟಡ ನೋಯ್ಡಾದ ಸೂಪರ್‌ಟೆಕ್ ಟ್ವಿನ್ ಟವರ್ ಇನ್ನು ಇತಿಹಾಸ ಮಾತ್ರ. ಕುತುಬ್ ಮಿನಾರ್‌ಗಿಂತಲೂ ಎತ್ತರದಲ್ಲಿ ನಿರ್ಮಿಸಲಾಗಿದ್ದ ಕಟ್ಟಡವನ್ನು ಭಾನುವಾರ ಮಧ್ಯಾಹ್ನ ಸರಿಯಾಗಿ 2:30ಕ್ಕೆ ಕ್ಷಣ ಮಾತ್ರದಲ್ಲೇ ಧ್ವಂಸಗೊಳಿಸಲಾಗಿದೆ.

ಟ್ವಿನ್ ಟವರ್ ಅನ್ನು ಸ್ಫೋಟಗೊಳಿಸಲು ಬರೋಬ್ಬರಿ 3,700 ಕೆ.ಜಿ ಸ್ಫೋಟಕಗಳನ್ನು ಬಳಸಲಾಗಿದೆ. ಕಟ್ಟಡದ ಕಂಬಗಳಲ್ಲಿ ಸುಮಾರು 7,000 ರಂಧ್ರಗಳನ್ನು ಮಾಡಿ ಸ್ಫೋಟಕಗಳನ್ನು ಅಳವಡಿಸಲಾಗಿತ್ತು. ಕಟ್ಟಡ ಧ್ವಂಸಕ್ಕೆ 70,000 ಸರ್ಕ್ಯೂಟ್‌ಗಳನ್ನೂ ಹೊಂದಿಸಲಾಗಿದೆ.

ಇದೀಗ ಧ್ವಂಸಗೊಂಡ ಕಟ್ಟಡದ ಅವಶೇಷ ಸುಮಾರು 55,000 ಟನ್‌ಗಳಷ್ಟು ಆಗಿದ್ದು, ಅದನ್ನು ತೆರವುಗೊಳಿಸಲು 3 ತಿಂಗಳು ತೆಗೆದುಕೊಳ್ಳಬಹುದು ಎಂದು ಎಂಜಿನಿಯರುಗಳು ತಿಳಿಸಿದ್ದಾರೆ. ಅವಶೇಷಗಳನ್ನು ಸಂಗ್ರಹಿಸಲು ಈಗಾಗಲೇ ಪ್ರದೇಶವನ್ನು ಗೊತ್ತುಪಡಿಸಲಾಗಿದೆ. 

ಕಟ್ಟಡ ಧ್ವಂಸದಿಂದ ಸ್ಥಳೀಯರಿಗೆ ಹಾನಿಯಾಗಬಾರದೆಂಬ ಕಾರಣಕ್ಕೆ ಸುಮಾರು 7,000 ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಸಂಜೆ 5:30ಕ್ಕೆ ನಿವಾಸಿಗಳನ್ನು ಹಿಂದಿರುಗಲು ಅನುಮತಿಸಲಾಗುತ್ತದೆ. ಸ್ಫೋಟದಿಂದ ಉಂಟಾದ ಧೂಳಿನಿಂದ ರಕ್ಷಣೆ ಪಡೆಯಲು ನಿವಾಸಿಗಳಿಗೆ ಮಾಸ್ಕ್‌ಗಳನ್ನು ಧರಿಸಲು ಅಧಿಕಾರಿಗಳು ಕೇಳಿಕೊಂಡಿದ್ದಾರೆ.

ಸೂಪರ್ಟೆಕ್ ಸಂಸ್ಥೆ ನಿರ್ಮಿಸಿದ್ದ ಈ ಕಟ್ಟಡ ವಿವಾದದ ಕೇಂದ್ರ ಬಿಂದುವಾಗಿತ್ತು. ಈ ಟ್ವಿನ್ ಟವರ್ಸ್ ಅನ್ನು ಕೆಡವಲು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಿರುವ ಹಿನ್ನೆಲೆ ಕಟ್ಟಡ ಧ್ವಂಸ ಮಾಡಲು ಸೂಚನೆ ನೀಡಿದ  ಹಿನ್ನಲೆ ಕಳೆದೊಂದು ವಾರದಿಂದ ಕಟ್ಟಡ ಕೆಡವಲು ತಯಾರಿ ಮಾಡಿಕೊಳ್ಳಲಾಗಿತ್ತು.

ಒಟ್ಟಿನಲ್ಲಿ 1,200 ಕೋಟಿ ರೂ.ಗೂ ಅಧಿಕ ಹಣ ಖರ್ಚು ಮಾಡಿ 7.5 ಲಕ್ಷ ಚದರ ಅಡಿಯಲ್ಲಿ ನಿರ್ಮಾಣ ಮಾಡಲಾದ ದೆಹಲಿಯ ಕುತುಬ್‌ಮಿನಾರ್‌ಗಿಂತಲೂ ಎತ್ತರದಲ್ಲಿರುವ ಈ ಟವರ್‌ ಅನ್ನು 20 ಕೋಟಿ ರೂ. ಖರ್ಚು ಮಾಡಿ ಇದೀಗ ಕೆಡವಲಾಗಿದೆ.

ಎಡಿಫೈಸ್ ಎಂಜಿನಿಯರಿಂಗ್ ಎಂಬ ಸಂಸ್ಥೆ ಈ ಕಟ್ಟಡ ಧ್ವಂಸದ ಹೊಣೆ ಹೊತ್ತಿದ್ದು, 100 ಕೋಟಿ ವಿಮೆ ಮಾಡಿಸಿದೆ. ಹರಿಯಾಣದ ಹಿಸ್ಸಾರ್‌ನ ಬ್ಲಾಸ್ಟಿಂಗ್ ತಜ್ಞ ಚೇತನ್ ದತ್ತಾ 100 ಮೀ. ದೂರದಿಂದ ಬ್ಲಾಸ್ಟ್‌ಗೆ ಸ್ವಿಚ್ ಒತ್ತಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *