ಆಳಂದ ಫೈಲ್ಸ್‌ | ಆನ್‌ಲೈನ್‌ನಲ್ಲಿ ಮತ ಅಳಿಸಲು ಸಾಧ್ಯವಿಲ್ಲ – ಇಂಚಿಚು ವಿವರ ನೀಡಿದ ಚುನಾವಣಾ ಆಯೋಗ

Public TV
4 Min Read

– ಆಳಂದದಲ್ಲಿ ಮತ ಅಳಿಸಲು ಸಲ್ಲಿಸಿದ್ದ 6,018 ಅರ್ಜಿಗಳ ಪೈಕಿ, 5,994 ಅರ್ಜಿಗಳು ಫೇಕ್‌
– ರಾಹುಲ್‌ ಗಾಂಧಿ ಆರೋಪಕ್ಕೆ ಚುನಾವಣಾ ಆಯೋಗ ಮತ್ತೆ ಸ್ಪಷ್ಟನೆ

ನವದೆಹಲಿ: ಸಾರ್ವಜನಿಕರು ಯಾವುದೇ ರೀತಿಯಲ್ಲೂ ಆನ್‌ಲೈನ್‌ನಲ್ಲಿ ಮತ ಅಳಿಸಲು ಸಾಧ್ಯವಿಲ್ಲ. ಯಾವುದೇ ಒಬ್ಬ ವ್ಯಕ್ತಿಯ ಹೆಸರು ಮತದಾರರ ಪಟ್ಟಿಯಲ್ಲಿ (Voters List) ಸೇರ್ಪಡೆ, ತಿದ್ದುಪಡಿ, ಅಳಿಸುವಿಕೆ ಮಾಡಬೇಕಾದ್ರೆ, ಕಾನೂನಿನ ಕಾರ್ಯವಿಧಾನಗಳ ಮೂಲಕವೇ ಮಾಡಬೇಕಾಗುತ್ತದೆ ಎಂದು ಚುನಾವಣಾ ಆಯೋಗ (Election Commission) ಮತ್ತೆ ಸ್ಪಷ್ಟನೆ ನೀಡಿದೆ.

ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ಅಕ್ರಮದ ಆರೋಪದ ಜ್ವಾಲೆ ಆರುವ ಮುನ್ನವೇ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಮತ್ತೊಂದು ಆರೋಪ ಮಾಡಿದ್ರು. ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದಲ್ಲಿ ವ್ಯವಸ್ಥಿತವಾಗಿ ಸಾವಿರಾರು ಮತದಾರರ ಹೆಸರನ್ನು, ಅದರಲ್ಲೂ ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದವರ ಹೆಸರನ್ನೇ ಗುರಿಯಾಗಿಸಿ ಅಳಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಅಷ್ಟೇ ಅಲ್ಲ, ಚುನಾವಣಾ ಆಯೋಗವನ್ನೇ ʻಮತ ಕಳ್ಳರ ರಕ್ಷಕರುʼ ಎಂದು ಜರೆದಿದ್ದರು. ಈ ಮೂಲಕ ಚುನಾವಣಾ ಆಯೋಗದ ವಿರುದ್ಧವೇ ನೇರ ಸಮರಕ್ಕೆ ಇಳಿದಿದ್ದರು.

ರಾಹುಲ್‌ ಗಾಂಧಿ ಆರೋಪಕ್ಕೆ ಮತ್ತೆ ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗ, ಯಾರೊಬ್ಬರು ಸಾರ್ವಜನಿಕರು ಯಾವುದೇ ಮತವನ್ನು ಆನ್‌ಲೈನ್‌ನಲ್ಲಿ ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಅಲ್ಲದೇ 2023 ರಲ್ಲಿ ಕಲಬುರಗಿ ಜಿಲ್ಲೆಯ ಆಳಂದ್‌ (Aland) ವಿಧಾನಸಭಾ ಕ್ಷೇತ್ರದಲ್ಲಿ ಮತಗಳನ್ನು ಅಳಿಸಲು ಕೆಲವು ವಿಫಲ ಪ್ರಯತ್ನಗಳನ್ನು ಮಾಡಲಾಗಿತ್ತು. ಈ ವಿಷಯದ ಬಗ್ಗೆ ತನಿಖೆ ನಡೆಸಲು ಚುನಾವಣಾ ಆಯೋಗದಿಂದಲೇ ಎಫ್‌ಐಆರ್‌ ದಾಖಲಿಸಲಾಗಿದೆ ಎಂಬುದನ್ನು ಉಲ್ಲೇಖಿಸಿ, ಪ್ರಕರಣ ದಾಖಲಿಸಲು ಕಾರಣವನ್ನೂ ವಿವರವಾಗಿ ತಿಳಿಸಿದೆ.

ಚುನಾವಣಾ ಆಯೋಗ ಹೇಳಿಕೆಯಲ್ಲಿ ಏನಿದೆ?
* ಯಾವುದೇ ಕ್ಷೇತ್ರದ ಮತದಾರರು ನಿರ್ದಿಷ್ಟ ಕ್ಷೇತ್ರದಿಂದ ತಮ್ಮ ನಮೂನೆಯನ್ನ ಅಳಿಸಬೇಕಾದ್ರೆ, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಆನ್‌ಲೈನ್‌ನಲ್ಲಿ ಫಾರ್ಮ್‌ 7ನ್ನು ಭರ್ತಿ ಮಾಡಬೇಕು. ಹಾಗೇ ಮಾಡಿದ್ರೂ ಮತಗುರುತು ಅಳಿಸಲ್ಪಡುತ್ತದೆ ಎಂದರ್ಥವಲ್ಲ. ಏಕೆಂದ್ರೆ 1960ರ ಮತದಾರರ ನೋಂದಣಿ ನಿಯಮಗಳ ಪ್ರಕಾರ, ಸಂಬಂಧಿತ ವ್ಯಕ್ತಿಗೆ ನೋಟಿಸ್‌ ನೀಡದೇ ಅಥವಾ ಆತನ ವಿಚಾರಣೆಗೆ ಅವಕಾಶ ಕೊಡದೇ ಮತಪಟ್ಟಿಯಿಂದ ಹೆಸರನ್ನು ಅಳಿಸಲಾಗುವುದಿಲ್ಲ.

* ಕರ್ನಾಟಕದ ಆಳಂದ ಪ್ರಕರಣದಲ್ಲಿ ನಮೂನೆ-7ರಲ್ಲಿ ಮತ ಅಳಿಸಲು 6,018 ಅರ್ಜಿಗಳು ಸಲ್ಲಿಕೆಯಾಗಿತ್ತು. ಅವುಗಳನ್ನು ಪರಿಶೀಲಿಸಿದಾಗ ಕೇವಲ 24 ಅರ್ಜಿಗಳಷ್ಟೇ ನೈಜವಾಗಿದ್ದವು ಅನ್ನೋದು ಕಂಡುಬಂದಿದೆ. ಉಳಿದ 5,994 ಅರ್ಜಿಗಳು ತಪ್ಪಾಗಿದ್ದವು. ಅದರಂತೆ 24 ಅರ್ಜಿಗಳನ್ನು ಸ್ವೀಕರಿಸಿ, ಉಳಿದ 5,994 ಅರ್ಜಿಗಳನ್ನು ತಿರಸ್ಕರಿಸಲಾಯಿತು.

* ಆಳಂದ ಪ್ರಕರಣದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಅರ್ಜಿಗಳು ಬಂದಿದ್ದರಿಂದ ಅನುಮಾನಗೊಂಡು ವಿಚಾರಣೆ ನಡೆಸಲಾಯಿತು. ಅವುಗಳು ಫೇಕ್‌ ಅಂತ ಕಂಡುಬಂದ ನಂತರ ಆಳಂದ ಚುನಾವಣಾ ನೋಂದಣಾಧಿಕಾರಿ ಅವರು 2023ರ ಫೆಬ್ರವರಿ 21ರಂದು ಎಫ್‌ಐಆರ್‌ ದಾಖಲಿಸಿದರು.

* ಪ್ರಕರಣ ದಾಖಲಿಸಿದ ಬಳಿಕ ಕೇಂದ್ರ ಚುನಾವಣಾ ಆಯೋಗದ ಸೂಚನೆ ಮೇರೆಗೆ ಕರ್ನಾಟಕದ ಆಯೋಗದ ಬಳಿ ಲಭ್ಯವಿದ್ದ ಎಲ್ಲಾ ಮಾಹಿತಿ, ದಾಖಲೆಗಳನ್ನು ತನಿಖೆ ನಡೆಸಲು 2023ರ ಸೆಪ್ಟೆಂಬರ್‌ 6ರಂದು ಅಂದಿನ ಕಲಬುರಗಿ ಎಸ್ಪಿಗೆ ನೀಡಲಾಯಿತು. ಫಾರ್ಮ್‌ (ನಮೂನೆ) ಸಂಖ್ಯೆ, ಆಕ್ಷೇಪಣೆ ಸಲ್ಲಿಸಿದವರ ಹೆಸರು, ಇಪಿಐಸಿ ಸಂಖ್ಯೆ, ಲಾಗಿನ್‌ಗೆ ಬಳಸಲಾದ ಮೊಬೈಲ್‌ ಸಂಖ್ಯೆ, ಪ್ರಕ್ರಿಯೆಗೆ ಒದಗಿಸಲಾದ ಮೊಬೈಲ್‌ ಸಂಖ್ಯೆ, ಅರ್ಜಿ ಸಲ್ಲಿಸಲು ಬಳಸಿದ ಸಾಫ್ಟ್‌ವೇರ್‌, ಐಪಿ ಅಡ್ರೆಸ್‌, ಅರ್ಜಿದಾರರ ಸ್ಥಳ, ದಿನಾಂಕ, ಸಮಯ ಸೇರಿದಂತೆ ಮತ ಅಳಿಸಲು ಸಲ್ಲಿಸಿದ್ದ ಅರ್ಜಿದಾರರ ಸಮಗ್ರ ವಿವರಗಳನ್ನ ತನಿಖಾಧಿಕಾರಿಗಳಿಗೆ ನೀಡಲಾಯಿತು. ಆ ಬಳಿಕವೂ ಕರ್ನಾಟಕದ ಸಿಇಒ ತನಿಖಾ ಸಂಸ್ಥೆಗಳಿಗೆ ನಿರಂತರ ಸಹಾಯ ಒಸಗಿಸುತ್ತಿದ್ದಾರೆ, ಹೆಚ್ಚಿನ ಮಾಹಿತಿ ದಾಖಲೆಗಳ ಅಗತ್ಯವಿದ್ದಲ್ಲಿ ಸಹಕರಿಸಿದ್ದಾರೆ.

* ದಾಖಲೆಗಳ ಪ್ರಕಾರ, 2018 ರಲ್ಲಿ ಸುಭಾದ್ ಗುತ್ತೇದಾರ್ (ಬಿಜೆಪಿ) ಮತ್ತು 2023 ರಲ್ಲಿ ಬಿ.ಆರ್ ಪಾಟೀಲ್ (ಕಾಂಗ್ರೆಸ್‌) ಆಳಂದ್ ವಿಧಾನಸಭಾ ಕ್ಷೇತ್ರದಲ್ಲಿ ಜಯಗಳಿಸಿದ್ದರು.

* ಇನ್ನೂ ಮಹಾರಾಷ್ಟ್ರದ ಚಂದ್ರಾಪುರದ ರಾಜೂರ ಪ್ರಕರಣದಲ್ಲಿ ಹೊಸ ಮತದಾರರ ನೋಂದಣಿಗಾಗಿ ಒಟ್ಟು 7,792 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಪರಿಶೀಲನೆ ವೇಳೆ ಇದರಲ್ಲಿ 6,861 ಅರ್ಜಿಗಳು ಅಮಾನ್ಯ ಅನ್ನೋದು ಕಂಡುಬಂದಿದ್ದರಿಂದ ತಿರಸ್ಕರಿಸಲಾಯಿತು. ಇಷ್ಟು ದೊಡ್ಡ ಸಂಖ್ಯೆ ಅರ್ಜಿಗಳು ಬಂದಿದ್ದರಿಂದ ಅನುಮಾನಿಸಿ ಚುನಾವಣಾ ನೋಂದಣಿ ಅಧಿಕಾರಿ ರಾಜೂರ ತನಿಖೆಗೆ ಮುಂದಾದರು. ನಂತರ ರಾಜೂರ ಪೊಲೀಸ್‌ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಲಾಯಿತು.

* ಯಾವುದೇ ಮತದಾರರ ಪಟ್ಟಿಯನ್ನು ಕಾನೂನಿನ ಪ್ರಕಾರವೇ ತಯಾರಿಸಲಾಗುತ್ತೆ, ಅದರಂತೆ ಯಾವುದೇ ತಿದ್ದುಪಡಿ, ಅಳಿಸುವಿಕೆ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಈ ರೀತಿ ಬದಲಾವಣೆಗಳು ಇದ್ದಲ್ಲಿ, ಕಾನೂನಿನ ಕಾರ್ಯವಿಧಾನಗಳ ಪ್ರಕಾರವೇ ಮಾಡಬೇಕಾಗುತ್ತೆ.

* ಅಲ್ಲದೇ ಭಾರತದ ಪ್ರತಿಯೊಬ್ಬ ಅರ್ಹ ಮತದಾರರು ವೋಟರ್‌ ಲಿಸ್ಟ್‌ನಲ್ಲಿ ದಾಖಲಾಗಿದ್ದಾರೆ, ಜೊತೆಗೆ ಯಾವುದೇ ಅನರ್ಹ ವ್ಯಕ್ತಿಯ ಹೆಸರು ದಾಖಲಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವ ಹಕ್ಕನ್ನು ಚುನಾವಣಾ ಆಯೋಗ ಹೊಂದಿದೆ ಎಂದು ಚುನಾವಣಾ ಆಯೋಗದ ಸಹಾಯಕ ನಿರ್ದೇಶಕ ಅಪೂರ್ವಕುಮಾರ್‌ ಸಿಂಗ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Share This Article