ಮಂಗಳೂರು ನಗರದಲ್ಲಿ ತಲೆಯೆತ್ತಿದೆ ಸ್ಮಾರ್ಟ್ ಮಾರ್ಕೆಟ್‌ಗಳು – ಉದ್ಘಾಟನೆಯಾಗದೇ ಪಾಳುಬಿದ್ದ ಹೊಸ ಕಟ್ಟಡಗಳು

Public TV
2 Min Read

– ನಿರ್ಮಾಣ ಕಾಮಗಾರಿ ಶುರುವಾಗಿ ದಶಕವಾದರೂ ಪೂರ್ಣವಾದ ಕಟ್ಟಡದ್ದು ಮತ್ತೊಂದು ಕಥೆ

ಮಂಗಳೂರು: ಸುಸಜ್ಜಿತ ಕಟ್ಟಡವಿದ್ರೂ ಮಳಿಗೆಗಳಿಲ್ಲ ಎನ್ನುವ ಕೊರತೆ, ಮಳಿಗೆಗಳಿದ್ದರೆ ಗ್ರಾಹಕರಿಲ್ಲ ಎನ್ನುವ ಕೊರಗು. ಮತ್ತೊಂದೆಡೆ ನಿರ್ಮಾಣ ಶುರುವಾಗಿ ದಶಕವಾದರೂ ಪೂರ್ಣಗೊಂಡಿಲ್ಲ ಎನ್ನುವ ದೂರು. ಹೀಗೆ ಕಡಲನಗರಿಯ ಹೈಟೆಕ್ ಮಾರುಕಟ್ಟೆಗಳು ದಿಕ್ಕು ದೆಸೆಯಿಲ್ಲದಂತಾಗಿದೆ.

ಒಂದೆಡೆ ನಿರ್ಮಾಣವಾದ ಕಟ್ಟಡಗಳಿಗೆ ಸೂಕ್ತ ನಿರ್ವಹಣೆ ಇಲ್ಲ. ನಿರ್ಮಾಣ ಹಂತದಲ್ಲಿರುವ ಕಟ್ಟಡಗಳದ್ದು ಇನ್ನೊಂದು ಕಥೆ. ಹೀಗೆ, ಸ್ಮಾರ್ಟ್ ಸಿಟಿ ಮಂಗಳೂರು ನಗರದಲ್ಲಿ ವ್ಯಾಪಾರಿಗಳಿಗೆ ಹಾಗೂ ಗ್ರಾಹಕರಿಗೆ ಮೂಲಸೌಕರ್ಯ ನೀಡುವ ಉದ್ದೇಶದಿಂದ ಆರಂಭವಾದ ನಗರದ ಪ್ರಮುಖ ಮಾರುಕಟ್ಟೆಗಳಿಗೆ ಸ್ಟ್ರೋಕ್ ಆಗಿದೆ. ಒಂದೊಂದು ಮಾರುಕಟ್ಟೆಯದ್ದು ಒಂದೊಂದು ಕಥೆ ಅನ್ನೋ ಹಾಗಾಗಿದೆ. ಬಹುತೇಕ ಕಟ್ಟಡಗಳು ಸ್ಮಾರ್ಟ್ ಸಿಟಿ, ಮಂಗಳೂರು ಮಹಾನಗರ ಪಾಲಿಕೆ ಅನುದಾನದಲ್ಲಿ ನಿರ್ಮಾಣಗೊಂಡರೆ, ಬೆರಳೆಣಿಕೆಯ ಕಟ್ಟಡಗಳು ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣಗೊಳ್ಳುತ್ತಿವೆ.

ಹೇಳುವುದಕ್ಕೆ ಇವುಗಳೆಲ್ಲವೂ ಹೈಟೆಕ್ ಮಾರುಕಟ್ಟೆಗಳು. 12.29 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ನಗರದ ಉರ್ವಾ ಮಾರುಕಟ್ಟೆ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗದೆ ನಿರಾಶ್ರಿತರ ತಾಣವಾಗಿ ಮಾರ್ಪಟ್ಟಿದ್ದು ಶೋಚನೀಯ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ನಿರ್ಮಾಣವಾದ ಮೊದಲ ಮಾರುಕಟ್ಟೆಯೇ ಈ ರೀತಿಯಾಗಿ ಸೈಡ್ ಲೈನ್ ಆದಂತಿದೆ. ಮೂರು ಅಂತಸ್ತಿನ ಉರ್ವಾ ಮಾರುಕಟ್ಟೆಯಲ್ಲಿ ಬೆರಳೆಣಿಕೆಯ ಮಳಿಗೆಗಳನ್ನು ಬಿಟ್ಟರೆ, ಉಳಿದೆಲ್ಲವೂ ನಿರಾಶ್ರಿತರಿಗೆ ಆಶ್ರಯತಾಣವಾಗಿದೆ. ಇದೇ ಹಾದಿಯಲ್ಲಿ ಕದ್ರಿಯ ಮಲ್ಲಿಕಟ್ಟೆ ಮಾರುಕಟ್ಟೆಯೂ ಜೊತೆಯಾಗಿದೆ. ಇಲ್ಲೂ ಅಷ್ಟೇ ಕಟ್ಟಡ ಹೈಟೆಕ್ ಇದ್ದರೂ ವರ್ತಕರಿಗೆ ಬೇಕಾದಂತೆ ನಿರ್ಮಿಸಿಲ್ಲ ಎನ್ನುವ ದೂರು ಕೇಳಿ ಬರುತ್ತಿದೆ. ಹೀಗಾಗಿ, ಕಟ್ಟಡ ರೆಡಿಯಾಗಿ ಮರ‍್ನಾಲ್ಕು ವರ್ಷಗಳಾದರೂ ಇನ್ನೂ ಉದ್ಘಾಟನೆ ಭಾಗ್ಯ ಮಾತ್ರ ಸಿಕ್ಕಿಲ್ಲ.

ಮಂಗಳೂರು ನಗರದ ಪ್ರಮುಖ ಮಾರುಕಟ್ಟೆಯಾಗಿದ್ದ ಸೆಂಟ್ರಲ್ ಮಾರ್ಕೆಟ್‌ನ ಹಳೆಯ ಕಟ್ಟಡ ಕೆಡವಿ ಹೊಸದಾಗಿ ನಿರ್ಮಿಸುತ್ತಿದ್ದರೂ, ಆರಂಭದಲ್ಲಿದ್ದ ವೇಗ ಈಗಿಲ್ಲ ಎನ್ನುವ ಮಾತಿದೆ. 2026ರ ಜನವರಿ 16ಕ್ಕೆ ಪೂರ್ಣಗೊಳ್ಳಬೇಕಿದ್ದ ಕಟ್ಟಡ ಅರ್ಧ ಕಾಮಗಾರಿ ಮುಗಿದ ಬಳಿಕ ವೇಗ ಕಳೆದುಕೊಂಡಿದೆ. ಇನ್ನು ಕಂಕನಾಡಿ ಹಾಗೂ ಸುರತ್ಕಲ್ ಮಾರುಕಟ್ಟೆಗಳು ಕಾಮಗಾರಿ ಆರಂಭವಾಗಿ ದಶಕ ಸಮೀಪಿಸಿದರೂ ದಡ ಸೇರುವ ಲಕ್ಷಣ ಕಾಣುತ್ತಿಲ್ಲ. ಎಲ್ಲವೂ ಆದಷ್ಟು ಬೇಗ ಜನರ ಉಪಯೋಗಕ್ಕೆ ಸಿಗಲಿದೆ ಎನ್ನುವ ಮಾಮೂಲಿ ಉತ್ತರ ನೀಡುತ್ತಿದೆ ಪಾಲಿಕೆ.

Share This Article