ಅಮೆರಿಕದಲ್ಲಿ ಪಾಕ್ ಪ್ರಧಾನಿಗೆ ಭಾರೀ ಮುಖಭಂಗ

Public TV
3 Min Read

ವಾಷಿಂಗ್ಟನ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಪ್ರಧಾನಿ ಪಟ್ಟಕ್ಕೆ ಏರಿದ ಬಳಿಕ ಮೊದಲ ಬಾರಿಗೆ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಆದರೆ ಅಲ್ಲಿ ಟ್ರಂಪ್ ಆಡಳಿತ ಅವರಿಗೆ ಕ್ಯಾರೇ ಅಂದಿಲ್ಲ. ಅವರಿಗೆ ಅದ್ದೂರಿ ಸ್ವಾಗತವಿರಲಿ, ಯುಎಸ್‍ನ ಟಾಪ್ ಯಾವೊಬ್ಬ ಅಧಿಕಾರಿ ಕೂಡ ಪಾಕ್ ಪ್ರಧಾನಿಯ ಸ್ವಾಗತ ಮಾಡಲು ಬಂದಿರಲಿಲ್ಲ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ತೀವ್ರ ಮುಖಭಂಗವನ್ನು ಅನುಭವಿಸಿದೆ.

ಸಾಮಾನ್ಯವಾಗಿ ಬೇರೆ ರಾಷ್ಟ್ರದ ಗಣ್ಯರು ಅಥವಾ ಪ್ರಧಾನಿಗಳು ಬಂದರೆ ಅವರನ್ನು ರಾಷ್ಟ್ರಗಳು ಗೌರವದಿಂದ ಅದ್ದೂರಿಯಾ ಸ್ವಾಗತಿಸುತ್ತವೆ. ಆದರೆ ವಾಷಿಂಗ್ಟನ್ ವಿಮಾನ ನಿಲ್ದಾಣದಲ್ಲಿ ಇಮ್ರಾನ್ ಅವರ ಸ್ವಾಗತಕ್ಕೆ ಅಮೆರಿಕ ಯಾವುದೇ ವ್ಯವಸ್ಥೆ ಮಾಡಿರಲಿಲ್ಲ. ಅಷ್ಟೇ ಅಲ್ಲದೆ ಟ್ರಂಪ್ ಸರ್ಕಾರದ ಪ್ರಮುಖರಾದ ಯಾರೂ ಕೂಡ ವಿಮಾನ ನಿಲ್ದಾಣಕ್ಕೆ ಬಂದಿರಲಿಲ್ಲ. ಬಹಳ ಅಪೇಕ್ಷೆ ಇಟ್ಟುಕೊಂಡಿದ್ದ ಯುಎಸ್‍ಗೆ ಬಂದಿದ್ದ ಪಾಕ್ ಪ್ರಧಾನಿಗೆ ಈ ರೀತಿ ಸ್ವಾಗತದಿಂದ ಭಾರಿ ಮುಜುಗರ ಉಂಟಾಗಿದೆ.

ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಪಾಕಿಸ್ತಾನ ಹಾಗೂ ಇಮ್ರಾನ್ ಖಾನ್ ಅವರನ್ನು ನೆಟ್ಟಿಗರು ಟ್ರೋಲ್ ಮಾಡಲು ಶುರುಮಾಡಿದ್ದಾರೆ. ಇಮ್ರಾನ್ ಖಾನ್ ಅವರು ಮೆಟ್ರೊದಲ್ಲಿ ಪ್ರಯಾಣಿಸುತ್ತಿರುವ ಫೋಟೋಗಳು ಹಾಗೂ ಏರ್ ಪೋರ್ಟ್‍ನಲ್ಲಿ ಅಮೆರಿಕ ಸ್ವಾಗತ ಕೋರದ ವಿಡಿಯೋ ಇಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಪಾಕ್ ಕಾಲೆಳೆಯುತ್ತಿದ್ದಾರೆ.

ಇನ್ನೊಂದೆಡೆ ಇಮ್ರಾನ್ ಖಾನ್ ಅಮೆರಿಕ ಪ್ರವಾಸ ಕೈಗೊಂಡಿರುವುದಕ್ಕೆ ಪಾಕಿಸ್ತಾನ ಪ್ರಜೆಗಳು ಹೆಮ್ಮೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮೇಲೆ ಪೋಸ್ಟ್ ಹಾಕುತ್ತಲೇ ಇದ್ದಾರೆ. ಆದರೆ ನೆಟ್ಟಿಗರು ಮಾತ್ರ ಈ ವಿಷಯಕ್ಕೆ ಪಾಕಿಸ್ತಾನವನ್ನು ಟ್ರೋಲ್ ಮಾಡಿಕೊಂಡು ಸಖತ್ ಮಜ ಪಡೆಯುತ್ತಿದ್ದಾರೆ.

ಈ ಹಿಂದೆ 2015ರ ಅಕ್ಟೋಬರ್ ನಲ್ಲಿ ಅಂದಿನ ಪಾಕ್ ಪ್ರಧಾನಿ ನವಾಜ್ ಷರೀಫ್ ಅಮೆರಿಕಕ್ಕೆ ಭೇಟಿ ನೀಡಿದ್ದರು. ತದನಂತರ ಇಮ್ರಾನ್ ಖಾನ್ ಅವರು ಯುಎಸ್‍ಗೆ ಬಂದಿದ್ದಾರೆ. ಕತಾರ್ ಏರ್ ವೇಸ್‍ನ ವಿಮಾನದಲ್ಲಿ ವಾಷಿಂಗ್ಟನ್‍ಗೆ ಭಾನುವಾರ ಪಾಕ್ ಪ್ರಧಾನಿ ಬಂದಿಳಿದಾಗ, ಅವರ ಮೊದಲು ಅಮೆರಿಕ ತಲುಪಿದ್ದ ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಅವರೇ ಸ್ವಾಗತಿಸಿದರು. ಜೊತೆಗೆ ವಾಡಿಕೆಯಂತೆ ಅಮೆರಿಕದ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾತ್ರ ಈ ವೇಳೆ ಉಪಸ್ಥಿತರಿದ್ದರು. ಸದ್ಯ ಅಮೆರಿಕದಲ್ಲಿನ ಪಾಕ್ ರಾಯಭಾರಿ ಅಸದ್ ಮಜೀದ್ ಖಾನ್ ಅವರ ಅಧಿಕೃತ ನಿವಾಸದಲ್ಲಿ ಉಳಿದಿದ್ದಾರೆ.

ಜುಲೈ 21 ರಿಂದ 23ರವರೆಗೆ ಇಮ್ರಾನ್ ಖಾನ್ ಅವರು ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿದ್ದು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಐಎಂಎಫ್‍ನ ಹಂಗಾಮಿ ಮುಖ್ಯಸ್ಥ ಡೇವಿಡ್ ಲಿಪ್ಟನ್, ವಿಶ್ವಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲ್‍ಪಾಸ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ.

ಆರ್ಥಿಕ ಮುಗ್ಗಟ್ಟಿನಿಂದ ಪಾಕಿಸ್ತಾನ ತತ್ತರಿಸುತ್ತಿದ್ದು, ಆರ್ಥಿಕ ನೆರವನ್ನು ಕೋರಿ, ನೆರವು ಪಡೆಯಲು ಈ ಚರ್ಚೆಗಳಲ್ಲಿ ಪಾಕ್ ಪ್ರಧಾನಿ ಮನವಿ ಮಾಡಲಿದ್ದಾರೆ ಎನ್ನಲಾಗಿದೆ. ಅಲ್ಲದೆ ಯುಎಸ್‍ಎಯಲ್ಲಿ ವಾಸವಾಗಿರುವ ಪಾಕಿಸ್ತಾನಿಯರನ್ನು ಉದ್ದೇಶಿಸಿ ಇಮ್ರಾನ್ ಖಾನ್ ಭಾಷಣ ಮಾಡಲಿದ್ದಾರೆ. ಬಲೂಚಿಸ್ತಾನ ಮೂಲದವರು, ಸಿಂಧಿಗಳು ಹಾಗೂ ಮೊಹಾಜಿರ್ ಗಳು ಇಮ್ರಾನ್ ಭೇಟಿ ವಿರುದ್ಧ ಅಮೆರಿಕದ ವಿವಿಧೆಡೆಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಶ್ವೇತಭವನ ಹಾಗೂ ಕ್ಯಾಪಿಟಲ್ ಹಿಲ್ ಎದುರು ಕೂಡ ಪ್ರತಿಭಟನೆಗೆ ಅನೇಕ ಸಂಘಟನೆಗಳು ಸಿದ್ಧತೆ ಮಾಡಿಕೊಂಡಿದೆ.

ಭಯೋತ್ಪಾದನೆ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ಕುಖ್ಯಾತಿ ಹೊಂದಿದೆ. ಆದ್ದರಿಂದ ಮೊದಲಿನಿಂದಲೂ ಟ್ರಂಪ್ ಅವರು ಪಾಕಿಸ್ತಾನದ ಬಗ್ಗೆ ತಾತ್ಸಾರ ಧೋರಣೆ ಹೊಂದಿದ್ದರು. ಈ ಹಿಂದೆ ಹಲವು ಭಾರಿ ಅಮೇರಿಕ ಉಗ್ರರನ್ನು ಮಟ್ಟಹಾಕಲು ಕ್ರಮ ಕೈಗೊಳ್ಳಿ ಎಂದು ಪಾಕ್‍ಗೆ ಎಚ್ಚರಿಸಿತ್ತು. ಅಲ್ಲದೆ ಅಮೆರಿಕಕ್ಕೆ ತೆರಳುವ ಮೂರು ದಿನದ ಹಿಂದೆಯಷ್ಟೆ ಪಾಕಿಸ್ತಾನ ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀಜ್ನನನ್ನು ಬಂಧಿಸಿತ್ತು. ಆಗ ಅಮೆರಿಕ ಪ್ರತಿಕ್ರಿಯಿಸಿ, ತನ್ನನ್ನು ಮೆಚ್ಚಿಸಲು ಪಾಕ್ ಈ ರೀತಿ ಯತ್ನಿಸಿದರೆ ಫಲಸಿಗುವುದಿಲ್ಲ. ಉಗ್ರರ ವಿರುದ್ಧ ಪಾಕ್ ಕಠಿಣ ಕ್ರಮ ಕೈಗೊಂಡು ತೋರಿಸಬೇಕು ಎಂದು ತಿರುಗೇಟು ನೀಡಿತ್ತು.

Share This Article
Leave a Comment

Leave a Reply

Your email address will not be published. Required fields are marked *