ಪಾಕ್ ಸಂಸತ್ ಕಲಾಪ ಮುಂದೂಡಿಕೆ – ಅವಿಶ್ವಾಸದ ಸುಳಿಯಿಂದ ಪಾರಾದ ಇಮ್ರಾನ್ ಖಾನ್

Public TV
2 Min Read

ಇಸ್ಲಾಮಾಬಾದ್: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸೋಮವಾರದವರೆಗೆ ಅವಿಶ್ವಾಸದ ಸುಳಿಯಿಂದ ಪಾರಾಗಿದ್ದಾರೆ. ಪ್ರತಿಪಕ್ಷಗಳ ಸಂಸದರ ಗದ್ದಲ, ಪ್ರತಿಭಟನೆಯ ನಡುವೇ ಪಾಕ್ ಸಂಸತ್ ಕಲಾಪ ಮಾರ್ಚ್ 28ಕ್ಕೆ ಮುಂದೂಡಿಕೆ ಆಗಿದೆ.

PAK

ಕಲಾಪದಲ್ಲಿ ಮೃತ ಸಂಸದನಿಗೆ ಶೋಕಾಚರಣೆ ಸಲ್ಲಿಸಿ, ಮಾರ್ಚ್ 28ಕ್ಕೆ ಕಲಾಪ ಮುಂದೂಡಿಕೆ ಮಾಡಲಾಯ್ತು. ಹೀಗಾಗಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಆಗಿಲ್ಲ. ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ ಸಂಸದ ಖಯಾಲ್ ಜಮಾನ್ ಅವರ ನಿಧನದಿಂದಾಗಿ ಮಾರ್ಚ್ 28 ರಂದು ಸಂಜೆ 4 ಗಂಟೆಗೆ ಅಧಿವೇಶನ ಮುಂದೂಡಲಾಗಿದೆ ಎಂದು ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ಅಸಾದ್ ಕೈಸರ್ ಅವರು ತಿಳಿಸಿದ್ದಾರೆ. ಪಾಕಿಸ್ತಾನ ಸಂಸತ್ತಿನ ಸಂಪ್ರದಾಯದ ಪ್ರಕಾರ ಮೊದಲ ಅಧಿವೇಶನವು ಖಯಾಲ್ ಜಮಾನ್ ಅವರಿಗೆ ಗೌರವ ಸಲ್ಲಿಸಲು ಸೀಮಿತವಾಗಿದೆ. ಇದನ್ನೂ ಓದಿ: ಏನೇ ಆದರೂ ರಾಜೀನಾಮೆ ನೀಡಲ್ಲ: ವಿರೋಧಿಗಳಿಗೆ ಇಮ್ರಾನ್ ಖಾನ್ ಸೆಡ್ಡು

ಇಮ್ರಾನ್‍ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸರ್ಕಾರವು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಪಾಕಿಸ್ತಾನ ಅಳಿವಿನ ಅಂಚಿನತ್ತ ಸಾಗುತ್ತಿದೆ ಮತ್ತು ಹಣದುಬ್ಬರ ಸಮಸ್ಯೆ ಎದುರಿಸಲಾಗುತ್ತಿದೆ ಎಂದು ಆರೋಪಿಸಿ ಮಾರ್ಚ್ 8 ರಂದು ವಿರೋಧ ಪಕ್ಷಗಳು ರಾಷ್ಟ್ರೀಯ ಅಸೆಂಬ್ಲಿ ಸಚಿವಾಲಯದ ಮುಂದೆ ಅವಿಶ್ವಾಸ ನಿರ್ಣಯ ಸಲ್ಲಿಸಿದ್ದವು. ಇದರಿಂದಾಗಿ ಮಾರ್ಚ್ 25ರಂದು ಇಮ್ರಾನ್‍ಖಾನ್‍ರನ್ನು ಪದಚ್ಯುತಿಗೊಳಿಸಲು ಅವಿಶ್ವಾಸ ಗೊತ್ತುವಳಿ ಮಂಡಿಸಲು ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಇಂದು ಖಯಾಲ್ ಜಮಾನ್ ಅವರ ನಿಧನದ ಕಾರಣದಿಂದಾಗಿ ಸಭೆಯನ್ನು ಮಾರ್ಚ್ 28ಕ್ಕೆ ಮುಂದೂಡಲಾಗಿದೆ. ಇದನ್ನೂ ಓದಿ: ಶ್ರೀಲಂಕಾ ಆರ್ಥಿಕ ಸ್ಥಿತಿ ಗಂಭೀರ – ದಿನ ಬಳಕೆ ವಸ್ತುಗಳ ಬೆಲೆ ಎಷ್ಟು?

ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್ 2018ರಲ್ಲಿ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಭಾರಿಗೆ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಸ್ವಪಕ್ಷದೊಂದಿಗೆ ಪ್ರತಿಪಕ್ಷದ ನಾಯಕರೂ ಭಿನ್ನಮತ ಮರೆತು ಒಂದಾಗಿವೆ. ಕೆಲ ವೇಳೆ ಅವಿಶ್ವಾಸ ನಿರ್ಣಯ ಸಭೆಯಲ್ಲಿ ತೆಹ್ರೀಕ್-ಎ-ಇನ್ ಸಾಫ್ ನೇತೃತ್ವದ ಸರ್ಕಾರವು ಬಹುಮತ ಕಳೆದುಕೊಂಡಿದೆ ಎಂದು ಪ್ರತಿಪಕ್ಷಗಳು ದೂರಿವೆ.

ಪಾಕಿಸ್ತಾನದ ಸಂಸತ್ತು ಗುರುವಾರ ರಾತ್ರಿಯೇ 15 ಅಂಶಗಳ ಅಜೆಂಡಾ ಬಿಡುಗಡೆ ಮಾಡಿದೆ. ಇದರಲ್ಲಿ ಅವಿಶ್ವಾಸ ನಿರ್ಣಯ ಗೊತ್ತುವಳಿಯೂ ಸೇರಿದೆ. ಆರ್ಥಿಕತೆಯನ್ನೂ ಇಮ್ರಾನ್ ಖಾನ್ ಸಮರ್ಪಕವಾಗಿ ನಿರ್ವಹಿಸಿಲ್ಲ. ಹಣದುಬ್ಬರ ಪ್ರಮಾಣ ಎರಡಂಕಿಗೆ ಹೆಚ್ಚಾಗಿರುವ ಕಾರಣ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಾಗಿದೆ. ಜನಸಾಮಾನ್ಯರಲ್ಲಿ ಸರ್ಕಾರದ ಬಗ್ಗೆ ಅಸಮಾಧಾನ ಮನೆಮಾಡಿದ್ದು, ರಾಜಕೀಯ ಭವಿಷ್ಯಕ್ಕೆ ಆತಂಕ ತಂದೊಡ್ಡಿದೆ. ವಿರೋಧ ಪಕ್ಷಗಳ ನಾಯಕರ ವಿರುದ್ಧ ಆಡಳಿತಾರೂಢ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ನಡೆದುಕೊಂಡ ರೀತಿಯ ಬಗ್ಗೆ ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡಿದೆ. ವಿರೋಧ ಪಕ್ಷಗಳು ಒಗ್ಗೂಡಲು ಸಹ ಇದು ಮುಖ್ಯಕಾರಣವಾಗಿದೆ ಎಂಬ ಅಂಶವನ್ನು ಇದರಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಉಕ್ರೇನ್‌ ಯುದ್ಧದ ನಡುವೆಯೇ ಮುರಿದು ಬಿತ್ತು ಪುಟಿನ್‌ ಮಗಳ ಮದುವೆ!

ಪಾಕಿಸ್ತಾನದ ಸಂಸತ್ತು 342 ಸದಸ್ಯಬಲ ಹೊಂದಿದೆ. ಅಧಿಕಾರಕ್ಕೆ ಬರಲು 172 ಸದಸ್ಯ ಬಲ ಅಗತ್ಯವಿದೆ. ಇಮ್ರಾನ್ ಖಾನ್‌ರ ಪಿಟಿಐ ನೇತೃತ್ವದ ಮೈತ್ರಿಕೂಟವು 179 ಸದಸ್ಯಬಲ ಹೊಂದಿದೆ. ಪಿಟಿಐ ಪಕ್ಷದ 155 ಸಂಸದರು ಸಂಸತ್ತಿನಲ್ಲಿದ್ದಾರೆ. ಅವಿಶ್ವಾಸ ಗೊತ್ತುವಳಿಯಲ್ಲಿ ಪಾಲ್ಗೊಳ್ಳುವುದಾಗಿ 3 ಪ್ರಮುಖ ಮಿತ್ರಪಕ್ಷಗಳು ಹೇಳಿಕೆ ನೀಡಿವೆ. ಪಾಕಿಸ್ತಾನದ ಸಂಸತ್ತಿನಲ್ಲಿ ವಿರೋಧ ಪಕ್ಷಗಳು 163 ಸ್ಥಾನಗಳನ್ನು ಹೊಂದಿವೆ. ಪಿಟಿಐ ಪಕ್ಷ ತೊರೆದಿರುವ ಸಂಸದರು ವಿರೋಧ ಪಕ್ಷಗಳೊಂದಿಗೆ ಕೈಜೋಡಿಸಿದರೆ ಇಮ್ರಾನ್ ಖಾನ್ ಸರ್ಕಾರ ಸುಲಭವಾಗಿ ಪತನವಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *