ಸಂಸತ್ತಿನಲ್ಲಿ ಸಂಸದರ ಸಬ್ಸಿಡಿ ಆಹಾರಕ್ಕೆ ಕತ್ತರಿ – ಯಾವ ಆಹಾರಕ್ಕೆ ಎಷ್ಟು ರೂ. ಇತ್ತು?

Public TV
1 Min Read

ನವದೆಹಲಿ: ಬಹು ವರ್ಷಗಳಿಂದ ಚರ್ಚೆಯಾಗುತ್ತಿದ್ದ ಸಂಸದರ ಊಟ, ಉಪಹಾರದ ಸಬ್ಸಿಡಿ ಕುರಿತು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಲೋಕಸಭೆಯ ಆವರಣದಲ್ಲಿರುವ ಯಾವುದೇ ಕ್ಯಾಂಟೀನ್‍ಗಳಲ್ಲಿ ಸಬ್ಸಿಡಿ ನೀಡದಿರಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ. ಸ್ಪೀಕರ್ ಓಂ ಬಿರ್ಲಾ ಅವರ ಮನವಿಯಂತೆ ಸಂಸದರು ಅವಿರೋಧವಾಗಿ ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಸತ್ತಿನ ಕ್ಯಾಂಟೀನಲ್ಲಿ ಆಹಾರಕ್ಕೆ ನೀಡುವ ಸಬ್ಸಿಡಿಯಿಂದಾಗಿ ಸರ್ಕಾರಕ್ಕೆ ಪ್ರತಿ ವರ್ಷ 17 ಕೋಟಿ ರೂ ನಷ್ಟ ಉಂಟಾಗುತ್ತಿತ್ತು. ಲೋಕಸಭೆಯ ಕ್ಯಾಂಟೀನ್‍ಗಳಲ್ಲಿ ಸಂಸದರಿಗೆ, ಅಧಿಕಾರಿಗಳಿಗೆ ಹಾಗೂ ಲೋಕಸಭೆಗೆ ಭೇಟಿ ನೀಡುವವರಿಗೆ ಕಡಿಮೆ ಬೆಲೆಗೆ ಆಹಾರವನ್ನು ನೀಡಲಾಗುತ್ತದೆ. ಈ ಕುರಿತು ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಿದ್ದು, ಈ ಸಬ್ಸಿಡಿಯನ್ನು ತೆಗೆಯಬೇಕೆಂಬ ಒತ್ತಾಯ ಕೇಳಿ ಬಂದಿತ್ತು.

ಲೋಕಸಭೆಯಲ್ಲಿನ ನಾಲ್ಕು ಕ್ಯಾಂಟೀನ್‍ಗಳ ನಿರ್ವಹಣೆ ವೆಚ್ಚ 16.43 ಕೋಟಿ ರೂ.ಗಳಾಗಿದ್ದು ಈ ಹಣವನ್ನು ಪಾವತಿಸಬೇಕು ಎಂದು ಉತ್ತರ ರೈಲ್ವೇ ಕಳೆದ ವರ್ಷ ಲೋಕಸಭೆಯ ಕಾರ್ಯಾಲಯಕ್ಕೆ ಮನವಿ ಮಾಡಿತ್ತು. ಇದು ಕೇವಲ 2017-18ನೇ ಸಾಲಿನ ವೆಚ್ಚವಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿತ್ತು.

ಪಾರ್ಲಿಮೆಂಟ್ ಹೌಸ್, ಪಾರ್ಲಿಮೆಂಟ್ ಹೌಸ್ ಅನೆಕ್ಸ್, ಪಾರ್ಲಿಮೆಂಟ್ ಹೌಸ್ ರಿಸೆಪ್ಷನ್ ಹಾಗೂ ಪಾರ್ಲಿಮೆಂಟ್ ಹೌಸ್‍ನ ಗ್ರಂಥಾಲಯಗಳಲ್ಲಿ ಉತ್ತರ ರೈಲ್ವೇ ಕ್ಯಾಂಟೀನ್ ಸ್ಥಾಪಿಸಿದೆ.

ಡಿಸೆಂಬರ್ 2015ರಲ್ಲಿ ಲೋಕಸಭಾ ಕಾರ್ಯಾಲಯವು ಜ.1, 2016ರಿಂದ ಕ್ಯಾಂಟೀನ್‍ಗಳು ಯಾವುದೇ ಲಾಭ, ಯಾವುದೇ ನಷ್ಟ ಇಲ್ಲದೇ ಕಾರ್ಯ ನಿರ್ವಹಿಸಬೇಕು ಎಂದು ಹೇಳಿತ್ತು.

ಡಿಸೆಂಬರ್ 2018ರ ಆರ್‍ಟಿಐ ಮಾಹಿತಿ ಪ್ರಕಾರ, ಲೋಕಸಭೆಯ ಕ್ಯಾಂಟೀನ್‍ಗಳಲ್ಲಿ ರೋಟಿಗೆ 2 ರೂ., ದಾಲ್ 5 ರೂ., ಅನ್ನ 7 ರೂ., ಮಸಾಲ ದೋಸೆ 18 ರೂ. ಹಾಗೂ ಚಿಕ್ಕನ್ ಕರ್ರಿ ಕೇವಲ 50 ರೂ. ದರ ನಿಗದಿಯಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *