ನನ್ನ ಕೈಯಿಂದ ಅವಳು ಸಿಗರೇಟ್‌ ಕಿತ್ತೆಸೆದ ಆ ದಿನವೇ ನನಗೆ ನೋ ಸ್ಮೋಕಿಂಗ್‌ ಡೇ!

Public TV
3 Min Read

ವತ್ತು ಬೆಳಗ್ಗೆ ಪೇಪರ್‌ ಕೈಗೆತ್ತಿಕೊಂಡು ತಿರುಗಿಸುವಾಗ ʻನೋ ಸ್ಮೋಕಿಂಗ್‌ ಡೇʼ ಎಂಬ ತಲೆ ಬರಹದ ಒಂದು ಆರ್ಟಿಕಲ್‌ ಕಣ್ಣಿಗೆ ಬಿತ್ತು. ಅದನ್ನು ನೋಡುತ್ತಿದ್ದಂತೆ ನಾಲ್ಕೈದು ವರ್ಷಗಳ ನಾನು ನನ್ನ ಕಣ್ಮುಂದೆ ಬಂದೆ! ಆಗಿನ ನನ್ನನ್ನು ನೆನಪಿಸಿಕೊಂಡ್ರೆ ಅವ್ನೆನಾ ನಾನು? ಅದೇ ವ್ಯಕ್ತಿನಾ? ಆ ತೋಟದ ರಹಸ್ಯ ಜಾಗವೊಂದರಲ್ಲಿ ಸಿಗರೇಟ್‌ ಮುಚ್ಚಿಟ್ಟು ಸೇದುತ್ತಿದ್ದವ ನಾನೆನಾ? ಇಂತಹ ಹಲವು ಪ್ರಶ್ನೆಗಳು ಮನಸ್ಸಲ್ಲಿ ಸಾಲಾಗಿ ಬಂದು ನನ್ನನ್ನು ಅಣಕಿಸಿದವು. ಹೀಗಿದ್ದವ ಹೇಗೆ ತಕ್ಷಣ ಸಿಗರೇಟ್‌ ಬಿಟ್ಟೆ ಎಂಬುದನ್ನು ನೆನಪಿಸಿಕೊಂಡ್ರೆ ಈಗ ನನಗೆ ನಗು ಬರುತ್ತೆ!

ಅವತ್ತು ಜುಲೈ 23 ಅವಳ ಹುಟ್ಟುಹಬ್ಬ! ಬಾ ಇವತ್ತು ʻಪವಿತ್ರ ವನಕ್ಕೆʼ ಒಂದು ಕೇಕ್‌ ಬಲಿಕೊಟ್ಟು ಹುಟ್ಟುಹಬ್ಬ ಆಚರಿಸೋಣ ಎಂದು ಮಾತಾಡ್ಕೊಂಡಿದ್ವಿ.. ಅವಳು ಬರೋದು ಸ್ವಲ್ಪ ತಡ ಆಯ್ತು.. ಅವಳ ದಾರಿ ಕಾಯ್ತಾ, ಸಿಗರೇಟ್‌ ಹಚ್ಕೊಂಡು ಅವಳು ಬರುವ ದಾರಿ ನೋಡುತ್ತಾ ಇದ್ದೆ. ಇನ್ನೇನೂ ಒಂದು ಪಫ್‌ ಬಾಕಿ ಇತ್ತು.. ಬಂದವಳೇ ಸಿಗರೇಟ್‌ ಕಿತ್ತೆಸೆದು… ಗೋಪಾಲ ಇನ್ಮುಂದೆ ಸಿಗರೇಟ್‌ ಸೇದ್ರೆ ಕಾಲು ಮುರುದು ಬಿಡ್ತೀನಿ ಅಂತ ಜೋರ್‌ ಮಾಡಿದ್ಲು… ನಾನು ಥ್ಯಾಂಕ್ಸ್‌ ಅಂತ ಹಲ್ಲು ಬಿಟ್ಟೆ..! ಆಗ ಅವಳು ʻಸಿಗರೇಟ್‌ʼ ಬಗ್ಗೆ ಒಂದಷ್ಟು ಪಾಠ ಮಾಡಿದ್ದನ್ನು ಇಲ್ಲಿ ಹಂಚಿಕೊಳ್ತಾ ಇದಿನಿ!

ಪ್ರೇಮಿಯೊಬ್ಬನಿಗೆ ʻಸಿಗರೇಟ್‌ʼ ಪಾಠ!
ದೀಪ ಸುಡುತ್ತದೆ ಎಂದು ಗೊತ್ತಿದ್ರೂ, ದೀಪದ ಜ್ವಾಲೆಯ ಮಕರಂದ ಹೀರಲು ಪತಂಗ ಅದರತ್ತ ಸುಳಿಯುತ್ತದೆ. ಹಾಗೇ ಧೂಮಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ವಿಚಾರ ಗೊತ್ತಿದ್ರೂ ಸಹ ಸಿಗರೇಟ್‌ ಬಳಿ ಜನ ಸುಳಿಯುತ್ತಾರೆ. ಸಾಕಷ್ಟು ಮಂದಿ ತಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಅಥವಾ ಚಟದ ಕಾರಣದಿಂದ ಸಿಗರೇಟ್‌ಗೆ ಅಡಿಕ್ಟ್‌ ಆಗ್ತಾರೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ತಂಬಾಕು ಪ್ರತಿ ವರ್ಷ 8 ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಅವರಲ್ಲಿ 7೦ ಲಕ್ಷಕ್ಕೂ ಹೆಚ್ಚು ಮಂದಿಯ ಸಾವಿಗೆ ತಂಬಾಕು ಸೇವನೆಯೇ ಮುಖ್ಯ ಕಾರಣವಾಗಿದೆ. ಅದರಲ್ಲಿ ನೀನು ಒಬ್ಬ ಆಗ್ಬೇಕಾ?

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಧೂಮಪಾನವು, ಧೂಮಪಾನಿಗಳ ಸುತ್ತಮುತ್ತಲಿನವರ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ನಿನ್ನಿಂದ ಯಾಕೆ ಸುತ್ತಮುತ್ತ ಇದ್ದೋರ ಆರೋಗ್ಯ ಹಾಳಾಗ್ಬೇಕು? ನಿನ್ನ ಜೊತೆ ಹೆಚ್ಚಿರೋದು ನಾನೇ ಅಲ್ವಾ ಗೋಪಾಲ? ಸಿಗರೇಟ್‌ ಬೇಕಾ ಹೇಳು?

ಸಿಗರೇಟ್ ಸೇದುವುದು ಹೃದಯ, ರಕ್ತನಾಳಗಳು ಮತ್ತು ರಕ್ತ ಕಣಗಳನ್ನು ಹಾನಿಗೊಳಿಸುತ್ತದೆ. ಸಿಗರೇಟ್‌ನಲ್ಲಿರುವ ರಾಸಾಯನಿಕಗಳು ಮತ್ತು ಟಾರ್‌ಗಳು ವ್ಯಕ್ತಿಯ ಹೃದಯದ ಅಪಾಯವನ್ನು ಹೆಚ್ಚಿಸಬಹುದು, ಇದು ರಕ್ತನಾಳಗಳಲ್ಲಿ ಪ್ಲೇಕ್‌ನ ರಚನೆಗೆ ಕಾರಣವಾಗುತ್ತದೆ. ಈ ರಚನೆಯು ರಕ್ತದ ಹರಿವನ್ನು ಮಿತಿಗೊಳಿಸುತ್ತದೆ. ಇದು ಎದೆ ನೋವು, ಸ್ಟ್ರೋಕ್, ಹೃದಯಾಘಾತಕ್ಕೆ. ಹೃದಯದಲ್ಲಿ ನಾನಿದಿನಿ ಅಂತ ಹೇಳ್ತಾ ಇರ್ತಿಯಾ, ಈ ಹೊಗೆ ಇದನ್ನೆಲ್ಲ ಮಿಕ್ಸ್‌ ಮಾಡಿ ಹೃದಯದಲ್ಲಿ ಇಟ್ಕೋತಿಯಾ ನನ್ನ?

ಸಿಗರೇಟ್ ಸೇದುವುದು ಕಣ್ಣಿನ ಪೊರೆ, ಒಣ ಕಣ್ಣುಗಳು, ಗ್ಲುಕೋಮಾ, ಡಯಾಬಿಟಿಕ್ ರೆಟಿನೋಪತಿ ಸೇರಿದಂತೆ ವಿವಿಧ ಕಣ್ಣಿನ ಸಮಸ್ಯೆಗೆ ಕಾರಣ ಆಗತ್ತೆ. ಈಗಲೇ ಕನ್ನಡಕ ಬಂದಿದೆ ನೋಡು..! ನಾನು ನಿನ್ನ ಕಣ್ಣಿಗೆ ಚೆನ್ನಾಗಿ ಕಾಣ್ಬೇಕು! ನಗ್ಬೇಡಾ..! ನಿಂಗೆ ಸಿಗರೇಟ್‌ ಬಿಡೋಕೆ ಒಂದಷ್ಟು ಟಿಪ್ಸ್‌ ಹೇಳ್ತಿನಿ ಕೇಳು. ಬರೆದ್ಕೋ ಆ ಬೇಡದೇ ಇರೋ ಕವಿತೆ ಬರಿಯೋಕೆ ಇಟ್ಕೊಂಡಿರೋ ಡೈರಿಲಿ.. ನಾನೇ ಬರೆದ್ಕೊಡ್ತಿನಿ ಕೊಡು ಇಲ್ಲಿ..!

ಸಿಗರೇಟ್‌ ಸೇದಬೇಕು ಎನಿಸಿದಾಗ – ಆಳವಾದ ಉಸಿರನ್ನು ಎಳೆದ್ಕೋ, ಇದು ಸಿಗರೇಟ್‌ ಬೇಕು ಅನ್ನೋ ಬಯಕೆಯನ್ನ ಆದಷ್ಟು ದೂರ ಮಾಡತ್ತೆ. ಬೆಳಗಿನ ವಾಕಿಂಗ್‌ ಮನಸ್ಸನ್ನು ಉಲ್ಲಾಸಭರಿತವಾಗಿಸುತ್ತದೆ. ಇದು ಒತ್ತಡವನ್ನು ತಗ್ಗಿಸುತ್ತದೆ. ಇದರಿಂದ ಸಿಗರೇಟ್‌ ಸೇದಬೇಕು ಎಂಬ ಬಯಕೆ ಆಗುವುದಿಲ್ಲ. ಈಜು, ಸೈಕ್ಲಿಂಗ್‌, ಬೈಕಿಂಗ್‌, ಯೋಗ ಮತ್ತು ನೃತ್ಯದಂತಹ ಅನೇಕ ಚಟುವಟಿಕೆಗಳು ಸಹ ಸಿಗರೇಟ್‌ನಿಂದ ತಪ್ಪಿಸಿಕೊಳ್ಳಲು ಇರೋ ಬೆಸ್ಟ್‌ ಐಡಿಯಾ ಫಾಲೋ ಮಾಡು. ಅರ್ಥ ಆಯ್ತಾ?

ಇದೆಲ್ಲ ನೆನಪಿಸಿಕೊಂಡು ಪೇಪರ್‌ ಇಡುವ ಹೊತ್ತಿಗೆ, ಸರಿಯಾಗಿ ಹಾಲಿನವನು ಬಂದ..! ಅವನ ಜೇಬಲ್ಲಿ ಸಿಗರೇಟ್‌ ಪ್ಯಾಕ್‌ ನೋಡಿ ಅವನಿಗೆ ನಾನೊಂದಷ್ಟು ಪಾಠ ಮಾಡ್ದೇ… ಅವನು ಈಗ ಸಿಗರೇಟ್‌ ಬಿಟ್ನಂತೆ!

– ಗೋಪಾಲಕೃಷ್ಣ

Share This Article