ಅಮೆರಿಕದಲ್ಲಿ ನೋ ಸೆಕ್ಸ್‌, ನೋ ಮ್ಯಾರೆಜ್‌, ನೋ ಗಿವಿಂಗ್‌ ಬರ್ತ್‌ – ಏನಿದು ‘4ಬಿ ಮೂವ್‌ಮೆಂಟ್‌’?

Public TV
4 Min Read

ಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಟ್‌ ಟ್ರಂಪ್‌ (Donald Trump) 2ನೇ ಬಾರಿಗೆ ಗೆಲುವು ಕಂಡಿದ್ದಾರೆ. ಇದು ಕೆಲವರಲ್ಲಿ ಸಂತಸ ತಂದಿದ್ದರೆ ಅಲ್ಲಿನ ಕೆಲ ಮಹಿಳೆಯರಲ್ಲಿ ಆಕ್ರೋಶ ತರಿಸಿದೆ. ಟ್ರಂಪ್‌ ಗೆಲುವಿಗೆ ಪುರುಷರೇ ಕಾರಣ ಎಂದು ದೂಷಿಸುತ್ತಿರುವ ಮಹಿಳೆಯರು ಇದೀಗ ʻ4ಬಿ ಮೂವ್‌ಮೆಂಟ್‌ʼ (4ಬಿ ಚಳವಳಿ) ಶುರು ಮಾಡಿದ್ದಾರೆ.

ದಕ್ಷಿಣ ಕೊರಿಯಾ ಮೂಲದ ʻ4ಬಿ ಮೂವ್‌ಮೆಂಟ್‌ʼ (4B Movement) ಈಗ ಅಮೆರಿಕದಲ್ಲಿ ಜನಪ್ರಿಯವಾಗಿದೆ. ಇದರ ಪ್ರಕಾರ, ಮಹಿಳೆಯರು ಪುರುಷರ ಜೊತೆ ಸೆಕ್ಸ್‌ ಮಾಡದೇ ಇರುವ ಪ್ರತಿಜ್ಞೆ ಮಾಡಿದ್ದಾರೆ. ಜೊತೆಗೆ ಅದರೊಂದಿಗೆ ನೋ ರಿಲೇಷನ್‌ಶಿಪ್‌, ನೋ ಮ್ಯಾರೇಜ್‌ ಹಾಗೂ ನೋ ಗಿವಿಂಗ್‌ ಬರ್ತ್‌ ಎನ್ನುವ ಪ್ರತಿಜ್ಞೆಯೊಂದಿಗೆ ಚಳವಳಿಯಲ್ಲಿ ಪಾಲ್ಗೊಂಡಿದ್ದಾರೆ. ಅಂದ್ರೆ ಸೆಕ್ಸ್‌ನಲ್ಲಿ ಭಾಗಿಯಾಗದೇ ಇರೋದು, ರಿಲೇಷನ್‌ಶಿಪ್‌ನಲ್ಲಿ ಇರದೇ ಇರೋದು, ಮದುವೆ ಆಗದೇ ಇರೋದು ಹಾಗೂ ಮಕ್ಕಳನ್ನು ಹೆರದೇ ಇರುವುದು ಈ ಚಳವಳಿಯ ಮುಖ್ಯ ಉದ್ದೇಶ. ಇದು ಪುರುಷರ ಮೇಲೆ ತಮ್ಮ ಸೇಡು ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆ ಬಣ್ಣದ ಬಗ್ಗೆ ಜಮೀರ್ ನಿಂದನೆ – ವಿವಾದದ ಬಳಿಕ ಪ್ರೀತಿಯಿಂದ ಕರೆದಿದ್ದು ಅಂತ ಸ್ಪಷ್ಟನೆ

ಚುನಾವಣೆ ವೇಳೆ ಹಲವು ಪ್ರಚಾರ ಕಾರ್ಯಕ್ರಮಗಳಲ್ಲಿ ಕಮಲಾ ಹ್ಯಾರಿಸ್ ಅವರ ಡೆಮಾಕ್ರಟಿಕ್ ಕ್ಯಾಂಪ್ ಟ್ರಂಪ್ ಅವರ ಸ್ತ್ರೀವಾದಿ ವಿರೋಧಿ ಚಿತ್ರಣವನ್ನು ಪ್ರಚಾರ ಮಾಡಿತ್ತು. ಇದೇ ವೇಳೆ ನೀಲಿ ಚಿತ್ರತಾರೆ ಸ್ಟಾರ್ಮಿ ಡೇನಿಯಲ್ಸ್‌ ಜೊತೆಗಿನ ʻಹಶ್‌ ಮನಿʼ ಪ್ರಕರಣದ ಬಗ್ಗೆಯೂ ಆರೋಪ ಮಾಡಿತ್ತು. ಇದರ ಹೊರತಾಗಿಯೂ ಟ್ರಂಪ್‌ ಗೆಲುವು ಸಾಧಿಸಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಮಹಿಳೆಯರು ಟ್ರಂಪ್ ಗೆಲುವಿನ ಬಗ್ಗೆ ಕಣ್ಣೀರಿಡುತ್ತಿರುವ ವೀಡಿಯೊಗಳು ಹಾಗೂ ʻನೋ ಸೆಕ್ಸ್‌ʼ ಎಂಬ ಪೋಸ್ಟರ್‌ಗಳನ್ನ ತಮ್ಮ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ 4ಬಿ ಚಳವಳಿಯ ಇತಿಹಾಸ ಏನು ಎಂಬುದನ್ನು ನೋಡೋಣ ….

4ಬಿ ಎಂದರೇನು?
4ಬಿ ಅಂದ್ರೆ ಕೊರಿಯನ್‌ ಭಾಷೆಯಲ್ಲಿ 4 ಬಿಸ್‌ ಎಂದರ್ಥ, ಇದನ್ನು ಬಿಹೊನ್, ಬಿಚುಲ್ಸನ್, ಬೈಯೋನೇ ಮತ್ತು ಬೈಸೆಕ್ಸೆಯು ಎಂಬ ಪದಗಳಿಂದ ಗುರುತಿಸುತ್ತಾರೆ. ಅಂದ್ರೆ ಮದುವೆ, ಹೆರಿಗೆ, ಪ್ರಣಯ ಮತ್ತು ಲೈಂಗಿಕ ಸಂಬಂಧಗಳ ನಿರಾಕರಣೆ. ಈಗಲೂ ಅಲ್ಲಿನ ಮಹಿಳೆಯರು ತಾವು ನಿಜವಾಗಿ ಸ್ವತಂತ್ರದಿಂದ ಮತ್ತು ಸಂತೋಷದಿಂದ ಇರಲು ಅವುಗಳಿಂದ ಮುಕ್ತರಾಗಬೇಕು ಎಂದು ನಂಬುತ್ತಾರೆ. ಅಲ್ಲದೇ ವಿವಾಹಿತ ಮನೆಯನ್ನು ನಡೆಸುವ ಜವಾಬ್ದಾರಿ, ಮಗುವಿಗೆ ಜನ್ಮ ನೀಡಿ ಬೆಳೆಸುವ ಹೊಣೆ, ಇವೆಲ್ಲವು ಅಸಮಂಜಸವಾದ ಕ್ರಮ. ಮಾತೃತ್ವದ ಕರ್ತವ್ಯಗಳಿಗಾಗಿ ಅನೇಕ ಮಹಿಳೆಯರು ದಂಡನೆಗೆ ಒಳಗಾಗುತ್ತಿದ್ದಾರೆ. ಇಷ್ಟೆಲ್ಲಾ ಸಹಿಸಿಕೊಂಡರು ಹಣ ಸಂಪಾದಿಸಬೇಕೆನ್ನುವುದು ಮಾತ್ರವೇ ನಾವು ಪುರುಷರಿಂದ ಮಾಡುವ ನಿರೀಕ್ಷೆ. ಆದ್ದರಿಂದ ಮದುವೆ, ಹೆರಿಗೆ, ಪ್ರಣಯ ಮತ್ತು ಲೈಂಗಿಕ ಸಂಬಂಧಗಳಿಂದ ನಾವು ಮುಕ್ತವಾಗಿರಬೇಕು ಅನ್ನೋದು ಈ ಚಳವಳಿಯ ಉದ್ದೇಶ. ಇದನ್ನೂ ಓದಿ: ದೆಹಲಿ, ಮುಂಬೈನಲ್ಲಿ ಈರುಳ್ಳಿ ದರ ಕೆ.ಜಿ. 80 ರೂ.ಗೆ ಏರಿಕೆ – 5 ವರ್ಷಗಳಲ್ಲೇ ಗರಿಷ್ಠ

ದಕ್ಷಿಣ ಕೊರಿಯಾದಲ್ಲಿ ಚಳವಳಿ ಹುಟ್ಟಿಕೊಂಡಿದ್ದು ಯಾವಾಗ?
4ಬಿ ಚಳವಳಿ ಮೊದಲು ದಕ್ಷಿಣ ಕೊರಿಯಾದಲ್ಲಿ ಹುಟ್ಟಿಕೊಂಡಿದ್ದು, 2016ರ ಸುಮಾರಿಗೆ. ಸಿಯೋಲ್‌ ಸುರಂಗಮಾರ್ಗ ನಿಲ್ದಾಣದಲ್ಲಿ ಯುವತಿಯೊಬ್ಬಳ ಕೊಲೆಯಾಗಿತ್ತು. ಆಗ ಕೊಲೆಗಾರ ನಾನು ಮಹಿಳೆಯರಿಂದ ನಿರ್ಲಕ್ಷಿಸಲ್ಪಟ್ಟಿದ್ದೇನೆ ಎಂದು ಹೇಳಿಕೊಂಡಿದ್ದ. ಇದೇ ಸಮಯದಲ್ಲಿ ಕೊರಿಯಾದಲ್ಲಿ ಮಹಿಳೆಯರ ಔಚಾಲಯದಲ್ಲಿ ಹಾಗೂ ಲೈಂಗಿಕ ಕ್ರಿಯೆ ನಡೆಸುವಂತಹ ಸಂದರ್ಭದಲ್ಲಿ ಸ್ಪೈಕ್ಯಾಮ್‌ಗಳನ್ನಿಟ್ಟು ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ ಪ್ರಕರಣವು ಬೆಳಕಿಗೆ ಬಂದಿತ್ತು. ಇದರಿಂದಾಗಿ ಮಹಿಳೆಯರು ಪುರುಷರ ವಿರುದ್ಧ ಸೇಡು ತೀರಿಸಿಕೊಳ್ಳಲು 4ಬಿ ಚಳವಳಿಗೆ ಮುಂದಾದರು. ಇದೇ ವೇಳೆ ಮೀಟೂ ಆಂದೋಲನ ಮಹಿಳೆಯರ ಈ ಹೋರಾಟಕ್ಕೆ ಪುಷ್ಟಿ ನೀಡಿತು.

4ಬಿ ಮೂವ್‌ಮೆಂಟ್‌ ಮಹಿಳೆಯರಿಗೆ ಅನುಕೂಲವೇ?
4ಬಿ ಚಳವಳಿ ಮಹಿಳೆಯರಿಗೆ ವೈಯಕ್ತಿಕವಾಗಿ ಅನುಕೂಲವಾದರೂ ಪುರುಷರೊಂದಿಗಿನ ದ್ವೇಷ ಸಾಧಿಸುವ ಉದ್ದೇಶ ಹೊಂದಿದೆ ಎಂದು ಕೆಲವು ಸ್ತ್ರೀವಾದಿಗಳು ನಂಬುತ್ತಾರೆ. ಈ ಚಳವಳಿಯು ಪುರುಷರನ್ನು ಮತ್ತು ಕೌಟುಂಬಿಕ ಜೀವನದಿಂದ ಮಹಿಳೆಯರು ಹಿಂದೆ ಸರಿಯುವಂತೆ ಮಾಡುತ್ತದೆ. ಹೆಂಡತಿ ಮತ್ತು ತಾಯಿ ಪಾತ್ರಕ್ಕಿಂತ ಸಮಾಜದಲ್ಲಿ ಹೆಚ್ಚಿನ ಪಾತ್ರಗಳನ್ನು ನಿರ್ವಹಿಸಬೇಕು ಎಂದು ಪ್ರಚೋದನೆ ನೀಡುತ್ತದೆ. ಮುಖ್ಯವಾಗಿ ಪುರುಷರಿಂದ ನಿಯಂತ್ರಿಸಲ್ಪಡುವ ಕರ್ತವ್ಯಗಳಿಂದ ಮುಕ್ತರಾಗಿ, ತಮ್ಮ ಸ್ವಂತ ಗುರಿ, ಹವ್ಯಾಸ, ಸಂತೋಷಗಳತ್ತ ಕೇಂದ್ರೀಕರಿಸಬಹುದು. ಸ್ತ್ರೀದ್ವೇಷಿ ಸಂಸ್ಥೆಗಳಿಂದ ದೂರ ಇರಬಹುದು. ಮಹಿಳೆಯರಲ್ಲಿ ಒಗ್ಗಟ್ಟು ಹೆಚ್ಚಾಗುತ್ತದೆ, ಸಲಿಂಗ ಸಂಬಂಧಗಳಲ್ಲೇ ಸಂತೋಷ ಕಾಣಬಹುದು. ಜೊತೆಗೆ ಒಟ್ಟಾಗಿ ಕೆಲಸ ಮಾಡುವುದರಿಂದ ಮಹಿಳೆಯರ ಉತ್ತಮ ಒಡನಾಟ ಮತ್ತು ಭಾವನಾತ್ಮಕ ಬೆಂಬಲಕ್ಕಾಗಿ ಪರಸ್ಪರ ಅವಲಂಬಿತರಾಗಬಹುದು ಎಂದು ಸ್ತ್ರೀವಾದಿಗಳು ಪ್ರತಿಪಾದಿಸುತ್ತಾರೆ. ಇದನ್ನೂ ಓದಿ: ರಾಹುಲ್‌ ಗಾಂಧಿಗೆ ಮತ್ತೆ ಸಂಕಷ್ಟ – FIR ದಾಖಲಿಸುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

4ಬಿ ಹೊಸ ಕಲ್ಪನೆಯೇ?
ಅಮೆರಿಕದಲ್ಲಿ ಸದ್ಯ ಹುಟ್ಟಿಕೊಂಡಿರುವ 4ಬಿ ಚಳವಳಿ ಹೊಸದೇನಲ್ಲ. ಈ ಹಿಂದೆ ಸೋಶಿಯಲ್‌ ಮೀಡಿಯಾದಲ್ಲಿ ʻಬಾಯ್ಸೋಬರ್‌ʼ ಎಂಬ ಕ್ಯಾಂಪೇನ್‌ ಅಮೆರಿಕನ್ನರು ಆರಂಭಿಸಿದ್ದರು. ಈ ಮೂಲಕ ಮಹಿಳೆಯರು ತಮ್ಮ ವೈಯಕ್ತಿಕ ಸಂತೋಷ, ಯೋಗಕ್ಷೇಮ, ಸುರಕ್ಷತೆಗೆ ಅದ್ಯತೆ ನೀಡಲು ಪುರುಷರೊಂದಿಗಿನ ಎಲ್ಲಾ ರೀತಿಯ ಲೈಂಗಿಕ ಸಂಬಂಧಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದರು. ಇದಕ್ಕು ಮುನ್ನ 1960 ರಿಂದ 1980ರ ದಶಕದಲ್ಲಿ ಮತ್ತೊಮ್ಮೆ ಸ್ತ್ರೀವಾದಿಗಳ ಚಳವಳಿ ಆರಂಭಗೊಂಡಿತ್ತು. ಈ ವೇಳೆ ಮಹಿಳೆಯರು ʻಪ್ರತ್ಯೇಕ ಸ್ತ್ರೀವಾದವನ್ನು ಪ್ರತಿಪಾದನೆ ಮಾಡಿದ್ದರು. ಆಗ ತಮ್ಮ ಮೇಲೆ ದಬ್ಬಾಳಿಕೆ ಮಾಡುವ, ತಮ್ಮನ್ನು ನಿಯಂತ್ರಿಸಲ್ಪಡುವ ಪುರುಷರಿಂದ ದೂರ ಉಳಿಬೇಕು ಎಂಬ ನಿರ್ಧಾರ ತೆಗೆದುಕೊಂಡಿದ್ದರು. ಈ ಎಲ್ಲಾ ವಿಚಾರಗಳನ್ನು 1973ರಲ್ಲಿ ʻಲವ್‌ ಯುವರ್‌ ಎನಿಮಿʼ ಪ್ರಸಿದ್ಧ ಪತ್ರಿಕೆ ಬಿತ್ತರ ಮಾಡಿತ್ತು. ಅಲ್ಲದೇ ಇದು ಸ್ತ್ರೀವಾದಿಗೆ ಬೆಂಬಲ ನೀಡಿ, ಮದುವೆ, ಸೆಕ್ಸ್‌, ಪುರುಷರೊಂದಿಗಿನ ಸಂಬಂಧಗಳಿಂದ ದೂರವಿರುವಂತೆ ಉತ್ತೇಜನ ನೀಡಿತ್ತು.

ಏನಿದು ಸೆಲ್‌-16?
1930-70ರ ದಶಕದಲ್ಲಿ ಅಮೆರಿಕದಲ್ಲಿ ಈ ಸೆಲ್‌-16 ಚಳವಳಿ ಆರಂಭಗೊಂಡಿತ್ತು. ಇದು ಮಹಿಳೆಯರು ಬ್ರಹ್ಮಚಾರಿಯಾಗಿಯೇ ಉಳಿಬೇಕು, ಪುರುಷರಿಂದ ಜೀವನ ಪರಿಯಂತ ದೂರವಿರಬೇಕು, ಆತ್ಮ ರಕ್ಷಣೆಗಾಗಿ ಕರಾಟೆ ಸೇರಿದಂತೆ ಸಮರ ಕಲೆಗಳನ್ನು ಕಲಿಯಬೇಕು ಈ ಚಳವಳಿ ಪ್ರತಿಪಾದಿಸಿತ್ತು.

ಸದ್ಯ ಈಗ ನಡೆಯುತ್ತಿರುವ ಹೋರಾಟ ಯಾವ ರೀತಿ ಅಂತ್ಯ ಕಾಣುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Share This Article