ರಸ್ತೆಯ ಸಂಪರ್ಕವಿಲ್ಲ, 4 ಗ್ರಾಮಕ್ಕೆ ಒಂದೇ ತೂಗುಸೇತುವೆ

Public TV
2 Min Read

– ಜೀವ ಕೈಯಲ್ಲಿಟ್ಟುಕೊಂಡು ಬದುಕುತ್ತಿದ್ದಾರೆ ಜನ

ಬೆಳಗಾವಿ: ನಾಲ್ಕು ಗ್ರಾಮಗಳಿಗೆ ಒಂದೇ ತೂಗುಸೇತುವೆ ಆಧಾರವಾಗಿದ್ದು, ಮಳೆಗಾಲ ಬಂದರೆ ಸಾಕು ಈ ಊರಿನ ಜನರು ಮೂರು ತಿಂಗಳು ಬೇಕಾಗುವಷ್ಟು ಸಾಮಾಗ್ರಿಗಳನ್ನು ಮೊದಲೇ ಸ್ಟಾಕ್ ಮಾಡಿಕೊಳ್ಳಬೇಕು. ಈಗ ಮತ್ತೆ ಮಳೆ ಅಬ್ಬರ ಕೂಡ ಜೋರಾಗಿದ್ದು ಗ್ರಾಮಸ್ಥರ ಜೀವನ ಅತಂತ್ರ ಬದುಕಾಗಿಬಿಟ್ಟಿದೆ.

ಬೆಳಗಾವಿಯ ಖಾನಾಪುರ ತಾಲೂಕು ಬಹುತೇಕ ದಟ್ಟ ಅರಣ್ಯಕ್ಕೆ ಹೊಂದಿಕೊಂಡಿರುವುದರಿಂದ ಅನೇಕ ಹಳ್ಳಿಗಳು ಈ ಅರಣ್ಯ ಪ್ರದೇಶದಲ್ಲಿವೆ. ಮುಖ್ಯವಾಗಿ ಸಾತಳಿ, ಮಾಚಳಿ ಗ್ರಾಮದ, ಕಿರವಾಡ, ಹಣಬರವಾಡ ಸೇರಿದಂತೆ ಇಪ್ಪತ್ತಕ್ಕೂ ಅಧಿಕ ಗ್ರಾಮಗಳು ಈ ಅರಣ್ಯ ಪ್ರದೇಶದಲ್ಲಿದ್ದು, ಮಳೆಗಾಲ ಆರಂಭವಾದರೆ ಸಾಕು ಈ ಗ್ರಾಮಗಳ ಜನರು ಜೀವಭಯದಲ್ಲಿ ಬದುಕುತ್ತಿದ್ದಾರೆ. ಸಾತಳಿ, ಮಾಚಳಿ, ಕಿರವಾಡ, ಹಣಬರವಾಡ ಗ್ರಾಮಕ್ಕೆ ಒಂದೇ ತೂಗು ಸೇತುವೆ ಆಧಾರವಾಗಿದೆ. ಇಲ್ಲಿನ ಜನರು ರಸ್ತೆಯನ್ನೇ ಕಂಡಿಲ್ಲ. ಕಟ್ಟಿಗೆಗಳಿಂದ ನಿರ್ಮಾಣ ಮಾಡಿರುವ ಈ ಸೇತುವೆ ಯಾವಾಗ ಬೇಕಾದರೂ ಕಳಚಿ ಬೀಳುವ ಸಾಧ್ಯತೆಯಿದ್ದರೂ ಕೂಡ ಈ ನಾಲ್ಕು ಗ್ರಾಮದ ಜನರು ಮಾತ್ರ ಈ ಸೇತುವೆ ಮೇಲೆಯೇ ಜೀವನ ಸಾಗಿಸುತ್ತಿದ್ದಾರೆ.

ಹಲವು ದಶಕಗಳಿಂದ ಇವರ ಸಮಸ್ಯೆಗೆ ಯಾವುದೇ ಸರ್ಕಾರ ಸ್ಪಂದಿಸುತ್ತಿಲ್ಲ. ಈ ಕಾರಣಕ್ಕೆ ಅನಿವಾರ್ಯವಾಗಿ ಇಲ್ಲಿನ ಜನರು ತಮ್ಮ ಬದುಕನ್ನ ತಾವೇ ಕಟ್ಟಿಕೊಳ್ಳುತ್ತಿದ್ದಾರೆ. ದಟ್ಟ ಅರಣ್ಯ ಒಂದು ಕಡೆಯಾದರೆ ಇನ್ನೊಂದು ಕಡೆ ಕಾಡು ದಾಟಿ ನಾಡಿಗೆ ಬರಬೇಕಾದರೆ ಪಾಂಡರಿ ನದಿಯನ್ನು ಜನರು ದಾಟಬೇಕು. ಆದರೆ ಈ ನದಿಗೆ ಅಡ್ಡಲಾಗಿ ಯಾವುದೇ ಸೇತುವೆಯಾಗಲಿ, ದೋಣಿ ಸಂಪರ್ಕವಾಗಲಿ ಇಲ್ಲ. ಹೀಗಾಗಿ ಗ್ರಾಮಸ್ಥರೇ ಕಟ್ಟಿಗೆಗಳಿಂದ ಏಣಿ ರೀತಿಯಲ್ಲಿ ತೂಗುಸೇತುವೆ ಮಾಡಿಕೊಂಡು ಓಡಾಡುತ್ತಿದ್ದಾರೆ. ಇದು ಯಾವಾಗ ಕಳಚಿ ಬೀಳುತ್ತೆ ಎಂಬ ಜೀವಭಯದಲ್ಲೇ ನಿತ್ಯವೂ ನಾಲ್ಕು ಗ್ರಾಮದ ಜನರು ಇಲ್ಲಿ ಓಡಾಡುತ್ತಿದ್ದಾರೆ.

ಕೆಲವೊಮ್ಮೆ ನಿರಂತರವಾಗಿ ಮಳೆ ಸುರಿಯಲು ಆರಂಭವಾದರೆ ಗ್ರಾಮಸ್ಥರು ಕಟ್ಟಿಕೊಂಡಿರುವ ತೂಗುಸೇತುವೆ ಕೂಡ ಮುಳುಗಡೆಯಾಗುತ್ತೆ. ಪರಿಣಾಮ ಈ ಗ್ರಾಮಗಳು ನಾಡಿನ ಸಂಪರ್ಕವನ್ನೇ ಕಳೆದುಕೊಳ್ಳುತ್ತವೆ. ಈ ಕಾರಣಕ್ಕೆ ಗ್ರಾಮಸ್ಥರು ಮಳೆಗಾಲ ಆರಂಭಕ್ಕೂ ಮೂರು ತಿಂಗಳು ಮುನ್ನವೇ ಮಳೆಗಾಲ ಮುಗಿಯುವವರೆಗೂ ಜೀವನಕ್ಕೆ ಬೇಕಾಗುವ ಎಲ್ಲಾ ಸಾಮಾಗ್ರಿಗಳನ್ನ ಖರೀದಿ ಮಾಡಿ ಶೇಖರಿಸಿಟ್ಟುಕೊಂಡಿರುತ್ತಾರೆ. ಆದರೆ ಆರೋಗ್ಯ ಸಮಸ್ಯೆ ಏನಾದರು ಹೇಗೆ ನಿಭಾಯಿಸಬೇಕು ಎಂಬುದೇ ಈ ಗ್ರಾಮಸ್ಥರಿಗೆ ತೋಚುತ್ತಿಲ್ಲ. ಅನೇಕ ಬಾರಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಇಲ್ಲಿನ ಜನರು ಜೀವ ಬಿಟ್ಟಿರುವ ಪ್ರಕರಣ ಕೂಡ ಇದೆ. ಅಷ್ಟೇ ಅಲ್ಲದೆ ಗರ್ಭಿಣಿಯರನ್ನ ನಾಲ್ಕು ಜನರು ಕೂಡಿ ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಸೇರಿಸಿದ ಉದಾಹರಣೆ ಕೂಡ ಇಲ್ಲಿವೆ.

ಜಿಲ್ಲೆಯ ಲೋಂಡಾ ಗ್ರಾಮದಲ್ಲಿ ಆಸ್ಪತ್ರೆ ಸೇರಿದಂತೆ ಮಾರುಕಟ್ಟೆ ಇರುವುದರಿಂದ ಈ ನಾಲ್ಕು ಗ್ರಾಮದ ಜನರು ಇಲ್ಲಿಗೆ ಬರುತ್ತಾರೆ. ಆದರೆ ವಾಹನದಲ್ಲಿ ಓಡಾಡಲು ರಸ್ತೆ ಇಲ್ಲದ್ದರಿಂದ ಜನರು ಅನಿವಾರ್ಯವಾಗಿ 8 ಕಿ.ಮೀ. ನಷ್ಟು ನಡೆದುಕೊಂಡೇ ಜೀವನ ಸಾಗಿಸುತ್ತಿದ್ದಾರೆ. ಇಷ್ಟಾದರೂ ಜಿಲ್ಲಾಡಳಿತ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಗ್ರಾಮಸ್ಥರಿಗಾಗಿ ಒಂದು ಸೇತುವೆ ಹಾಗೂ ಗ್ರಾಮಕ್ಕೆ ಸಂಪರ್ಕಿಸುವಂತೆ ರಸ್ತೆಯನ್ನ ಮಾಡಲು ಮುಂದಾಗುತ್ತಿಲ್ಲ. ಆದ್ದರಿಂದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.

ಮಕ್ಕಳು ಸೇರಿದಂತೆ ಮಹಿಳೆಯರು, ವಯಸ್ಸಾದವರು ಜೀವ ಕೈಯಲ್ಲಿ ಹಿಡಿದುಕೊಂಡು ತೂಗು ಸೇತುವೆ ಮೇಲೆ ಓಡಾಡುತ್ತಿದ್ದಾರೆ. ಸರಿಯಾದ ರಸ್ತೆ ಇಲ್ಲದ್ದರಿಂದ ನಡೆದುಕೊಂಡು ಓಡಾಡುವ ಈ ಮಂದಿ ಅನೇಕ ಬಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಪ್ರತಿ ವರ್ಷ ಮಳೆಗಾಲ ಬಂದಾಗಲೂ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವ ಗ್ರಾಮಸ್ಥರಿಗೆ ಯಾರು ಕೂಡ ಸ್ಪಂದನೆ ಮಾಡುತ್ತಿಲ್ಲ. ಈಗಲಾದರೂ ಈ ನಾಲ್ಕು ಗ್ರಾಮಗಳಿಗೆ ಸರಿಯಾದ ರಸ್ತೆ, ಒಂದು ಸೇತುವೆಯನ್ನ ಸರ್ಕಾರ ಕಟ್ಟಿಸಿಕೊಡುವ ಚಿಂತನೆ ಮಾಡುತ್ತದೋ, ಇಲ್ಲವೋ ಎನ್ನುವುದನ್ನ ಕಾದುನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *