ಕೊಡಗು ನಿರಾಶ್ರಿತರಿಗೆ ಸೂರು ವಿಳಂಬ- ಇತ್ತ ಬಾಡಿಗೆ ಮನೆಯೂ ಸಿಗ್ತಿಲ್ಲ

Public TV
2 Min Read

ಮಡಿಕೇರಿ: ಪ್ರಾಕೃತಿಕ ವಿಕೋಪದಿಂದ ಸೂರು ಕಳೆದುಕೊಂಡ ಸಾವಿರಾರು ನಿರಾಶ್ರಿತರಿಗೆ ಸೂರು ಕಲ್ಪಿಸೋ ಕಾರ್ಯ ವಿಳಂಬವಾಗ್ತಿರೋದ್ರಿಂದ ಸಂತ್ರಸ್ತರು ನಿರಾಶ್ರಿತ ಕೇಂದ್ರದಲ್ಲಿರಲು ಹಿಂದೇಟು ಹಾಕ್ತಿದ್ದಾರೆ. ಅದ್ರಿಂದ ಬಾಡಿಗೆ ಮನೆಗಳಿಗೆ ತೆರಳೋಕೆ ಮುಂದಾಗ್ತಿರೋ ನಿರಾಶ್ರಿತ ಕುಟುಂಬಗಳಿಗೆ ಜಿಲ್ಲಾಡಳಿತ ತಿಂಗಳ ಬಾಡಿಗೆ ಕೊಡೋಕೆ ರೆಡಿ ಇದ್ರೂ ಬಾಡಿಗೆ ಮನೆಗಳು ಸಿಗ್ತಿಲ್ಲ. ಅತ್ತ ನಿರಾಶ್ರಿತ ಕೇಂದ್ರಗಳಲ್ಲಿ ಗುಂಪು ಗುಂಪಾಗಿ ಇರೋಕು ಆಗದೆ, ಇತ್ತ ಬಾಡಿಗೆ ಮನೆಯೂ ಸಿಗದೆ ಸಂತ್ರಸ್ತರು ಪರದಾಡ್ತಿದ್ದಾರೆ.

ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಮನೆ ಮಠ ಕಳೆದುಕೊಂಡು ನಿರಾಶ್ರಿತರ ಕೇಂದ್ರ ಸೇರಿರೋ ಸಂತ್ರಸ್ತರು ಇನ್ನೂ ಕೂಡಾ ಅಲ್ಲೇ ಇದ್ದಾರೆ. ಒಂದೂವರೆ ತಿಂಗಳು ಕಳೆದ್ರೂ ಸಂತ್ರಸ್ತರಿಗೆ ಇನ್ನೂ ಸೂರು ಸಿಕ್ಕಿಲ್ಲ. ಸೂರು ಕಲ್ಪಿಸೋ ಕಾರ್ಯ ವಿಳಂಬವಾಗ್ತಿರೋದ್ರಿಂದ ನಿರಾಶ್ರಿತರ ಕೇಂದ್ರದಲ್ಲಿರೋಕೆ ಸಂತ್ರಸ್ತರು ಹಿಂದೇಟು ಹಾಕ್ತಿದ್ದಾರೆ. ಅದಕ್ಕೆ ಪ್ರಮುಖ ಕಾರಣವಾಗಿರೋದು ಸಂತ್ರಸ್ತರು ಈ ಹಿಂದೆ ಬದುಕಿದ್ದ ರೀತಿ. ಬಹುತೇಕ ಸಂತ್ರಸ್ತರು ಕಾಫಿ ತೊಟಗಳ ನಡುವೆ ಒಂಟಿ ಮನೆಗಳಲ್ಲಿ ಬದುಕು ಕಟ್ಟಿಕೊಂಡಿದ್ದರು. ಹೀಗೆ ಜೀವನ ನಡೆಸಿದ್ದವರು ನಿರಾಶ್ರಿತರ ಕೇಂದ್ರದಲ್ಲಿ ಇರೋಕೆ ಹಿಂಜರಿಯುತ್ತಿದ್ದಾರೆ. ಸದ್ಯ ಬಾಡಿಗೆ ಮನೆ ಹುಡುಕುವ ಪ್ರಯತ್ನ ಮಾಡ್ತಿದ್ದಾರೆ.


ಜಿಲ್ಲಾಡಳಿತ ಕೂಡ ಸಂತ್ರಸ್ತರ ಪಯತ್ನಕ್ಕೆ ಸಾಥ್ ನೀಡಿದೆ. ಬಾಡಿಗೆ ಮನೆಗಳಿಗೆ ಹೋಗೋರಿಗೆ ತಿಂಗಳಿಗೆ 10 ಸಾವಿರದವರೆಗೆ ಭರಿಸೋದಕ್ಕೆ ಕೊಡಗು ಜಿಲ್ಲಾಡಳಿತ ರೆಡಿ ಇದೆ. ಇಷ್ಟಿದ್ರೂ ದುರಂತ ಎಂಬಂತೆ ಬಾಡಿಗೆ ಮನೆಗಳು ಸಿಗ್ತಿಲ್ಲ. ಸರ್ಕಾರವೇ ಹಣ ಭರಿಸೋದಕ್ಕೆ ರೆಡಿ ಇದ್ರೂ ಬಾಡಿಗೆ ಮನೆಗಳು ಸಿಗದಿರೋದು ಸಂತ್ರಸ್ತರನ್ನು ಮತ್ತಷ್ಟೂ ಆತಂಕಕ್ಕೀಡು ಮಾಡಿದೆ. ಹೆಚ್ಚಾಗಿ ಲೋಕಲೈಟ್ಸ್ ಇರೋದ್ರಿಂದ ಮತ್ತು ಬಹುತೇಕ ಬಾಡಿಗೆ ಮನೆಗಳು ಹೋಮ್ಸ್ ಸ್ಟೇಗಳಾಗಿ ಪರಿವರ್ತನೆ ಆಗಿರೋದ್ರಿಂದ ಈ ಸಮಸ್ಯೆ ಎದುರಾಗಿದೆ. ಅಷ್ಟೇ ಅಲ್ದೆ ಮಡಿಕೇರಿ ನಗರ ವ್ಯಾಪ್ತಿಯಲ್ಲೂ ಪ್ರಾಕೃತಿಕ ವಿಕೋಪಕ್ಕೆ ಕೆಲವು ಬಡಾವಣೆಗಳು ಬಲಿಯಾಗಿರೋದು ಸಂತ್ರಸ್ತರಿಗೆ ನುಂಗಲಾರದ ತುತ್ತಾಗಿದೆ. ಇನ್ನೂ ದೂರದ ಬಾಡಿಗೆ ಮನೆಗಳಿಗೆ ತೆರಳೋಕೆ ಮಕ್ಕಳ ವಿದ್ಯಾಬ್ಯಾಸ, ತಮ್ಮ ಕೆಲಸ ಅಡ್ಡಿಯಾಗಿದೆ ಅಂತ ಸಂತ್ರಸ್ತೆ ಭಾಗೀರಥಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

ಒಟ್ಟಿನಲ್ಲಿ ರೆಡ್ ಅಲರ್ಟ್ ಸಂದರ್ಭದಲ್ಲಿ ನಿರಾಶ್ರಿತ ಕೇಂದ್ರ ಸೇರಿದ್ದವರಿಗೆ ಒಂದೂವರೆ ತಿಂಗಳು ಕಳೆದ್ರೂ ಸೂರು ಸಿಕ್ಕಿಲ್ಲ. ತಮ್ಮ ಜೀವನ ಶೈಲಿಗೆ ಹೊಂದಿಕೊಳ್ಳದ ರೀತಿಯಲ್ಲಿರೋ ನಿರಾಶ್ರಿತರ ಕೇಂದ್ರದಲ್ಲಿ ತಿಂಗಳುಗಟ್ಟಲೆ ಇರೋದು ಕಷ್ಟ ಅಂತ ಬಾಡಿಗೆ ಮನೆಯತ್ತ ಮುಖ ಮಾಡೋಣ ಅಂದ್ರೆ ಅದೂ ಸಿಗದೆ ಸಂತ್ರಸ್ತರು ಕಂಗಾಲಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *