ತಮಿಳು ನಟ ದಳಪತಿ ವಿಜಯ್‌ಗೆ (Vijay) ಮದ್ರಾಸ್ ಹೈಕೋರ್ಟ್ (Madras High Court) ಮತ್ತೆ ಶಾಕ್ ಕೊಟ್ಟಿದೆ. ಜ.21 ರ ವರೆಗೂ ‘ಜನನಾಯಗನ್’ (Jana Nayagan) ಸಿನಿಮಾ ಬಿಡುಗಡೆ ಮಾಡದಂತೆ ಆದೇಶ ಹೊರಡಿಸಿದೆ.
ವಿಜಯ್ ಅವರ ‘ಜನನಾಯಗನ್’ ಚಿತ್ರಕ್ಕೆ ಯುಎ ಪ್ರಮಾಣಪತ್ರ ನೀಡುವಂತೆ ನಿರ್ದೇಶಿಸಿದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಪ್ರಶ್ನಿಸಿತ್ತು. ತುರ್ತು ವಿಚಾರಣೆ ನಡೆಸಬೇಕು ಮತ್ತು ಪರಿಷ್ಕರಣಾ ಸಮಿತಿಯು ಚಿತ್ರವನ್ನು ಪರಿಶೀಲಿಸಬೇಕು ಎಂದು ಮಂಡಳಿ ಕೋರಿತ್ತು. ಹೊಸ ವಿಚಾರಣೆಯ ನಂತರ, ನ್ಯಾಯಾಲಯವು ಜ.21 ರವರೆಗೆ ಜನನಾಯಗನ್ ಚಿತ್ರವನ್ನು ಬಿಡುಗಡೆ ಮಾಡದಂತೆ ಆದೇಶಿಸಿದೆ. ಇದನ್ನೂ ಓದಿ: ‘ಜನನಾಯಗನ್’ ಸಿನಿಮಾ ರಿಲೀಸ್‌ಗೆ ಗ್ರೀನ್ ಸಿಗ್ನಲ್ – UA ಸರ್ಟಿಫಿಕೇಟ್ ನೀಡುವಂತೆ ಮದ್ರಾಸ್ ಹೈಕೋರ್ಟ್ ಆದೇಶ
ಅಗತ್ಯ ಮಾರ್ಪಾಡುಗಳನ್ನು ಮಾಡಿದ ನಂತರ ಪ್ರಮಾಣಪತ್ರವನ್ನು ನೀಡುವಂತೆ ಮದ್ರಾಸ್ ಹೈಕೋರ್ಟ್ ಶುಕ್ರವಾರ ಸಿಬಿಎಫ್‌ಸಿಗೆ ಸೂಚಿಸಿತ್ತು. ಇದರ ವಿರುದ್ಧ ಸಿಬಿಎಫ್‌ಸಿ ಮೇಲ್ಮನವಿ ಸಲ್ಲಿಸಿತ್ತು. ಚಿತ್ರದಲ್ಲಿ ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದ ಲಾಂಛನಗಳಿವೆ. ಇದನ್ನು ತಜ್ಞರು ಪರಿಶೀಲಿಸಬೇಕು ಎಂದು ಸಿಬಿಎಫ್‌ಸಿ ವಾದಿಸಿತ್ತು.
ಇದಕ್ಕೂ ಮೊದಲು, ಜ.7 ರಂದು ಚಿತ್ರದ ನಿರ್ಮಾಣ ಸಂಸ್ಥೆಯು ಸಿನಿಮಾ ಬಿಡುಗಡೆಯನ್ನು ಮುಂದೂಡುವುದಾಗಿ ತಿಳಿಸಿತ್ತು. ಜ.9 ರಂದು ಸಿನಿಮಾ ರಿಲೀಸ್ ಆಗಬೇಕಿತ್ತು. ಕಾರಣಾಂತರಗಳಿಂದ ಮುಂದೂಡಲಾಗಿದೆ. ಹೊಸ ದಿನಾಂಕವನ್ನು ಶೀಘ್ರವೇ ತಿಳಿಸಲಾಗುವುದು ಎಂದು ಹೇಳಿತ್ತು.
ಪೊಂಗಲ್ ಹಬ್ಬಕ್ಕೆ ಒಂದು ವಾರದ ಮುನ್ನಾ ದಿನವಾದ ಜನವರಿ 9ರಂದು (ಇಂದು), ವಿಶ್ವದಾದ್ಯಂತ ಜನನಾಯಗನ್ ಸಿನಿಮಾ ಬಿಡುಗಡೆಯಾಗಬೇಕಿತ್ತು. ತಮಿಳು ಚಿತ್ರಗಳನ್ನು ಹೆಚ್ಚುಹೆಚ್ಚು ಪ್ರದರ್ಶಿಸುವ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ವಿಜಯ್ ಕಟೌಟ್ ರಾರಾಜಿಸುತ್ತಿದ್ದವು. ಆದ್ರೆ ಸೆನ್ಸಾರ್ ಮಂಡಳಿಯ ನಿರ್ಧಾರವು ಅಭಿಮಾನಿಗಳ ಆಸೆಗೆ ತಣ್ಣೀರು ಎರಚಿತ್ತು. ಇದನ್ನೂ ಓದಿ: ವಿಜಯ್ ಫ್ಯಾನ್ಸ್‌ಗೆ ಶಾಕ್; ಜ.9 ಕ್ಕೆ ‘ಜನನಾಯಗನ್’ ರಿಲೀಸ್ ಆಗಲ್ಲ
‘ಜನನಾಯಗನ್’ ತಮ್ಮ ಕೊನೆಯ ಸಿನಿಮಾ ಎಂದು ಈಗಾಗಲೇ ವಿಜಯ್ ಮಲೇಷ್ಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಹಾಗಾಗಿ, ಫ್ಯಾನ್ಸ್ ಈ ಸಿನಿಮಾದ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಮತ್ತೊಂದು ಕಡೆ ಕೇಂದ್ರ ಸರ್ಕಾರದ ದ್ವೇಷದ ರಾಜಕಾರಣ ಇದು ಅನ್ನೋ ಕೂಗು ವಿಜಯ್ ಅಭಿಮಾನಿಗಳ ಕಡೆಯಿಂದ ಕೇಳಿಬಂದಿದೆ.


