ಬಾಂಗ್ಲಾದಲ್ಲಿ ಹಿಂಸಾಚಾರಕ್ಕೆ ಅವಕಾಶ ಇಲ್ಲ – ಹಿಂದೂ ವ್ಯಕ್ತಿಯ ಗುಂಪುಹತ್ಯೆ ಖಂಡಿಸಿದ ಯೂನಸ್‌ ಸರ್ಕಾರ

2 Min Read

– ವಿದ್ಯಾರ್ಥಿ ನಾಯಕ ಉಸ್ಮಾನ್ ಹಾದಿ ಸಾವು ಬೆನ್ನಲ್ಲೇ ಹಿಂಸಾಚಾರ
– 30 ಮಂದಿ ಬಾಂಗ್ಲಾ ಪತ್ರಕರ್ತರ ರಕ್ಷಣೆ

ಢಾಕಾ: ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ಬಳಿಕ ಬಾಂಗ್ಲಾದೇಶದಲ್ಲಿ (Bangladesh ) ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ರಾಜಧಾನಿ ಢಾಕಾದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹೊಸ ಸಂಘರ್ಷಗಳಿಗೆ ದಾರಿ ಮಾಡಿಕೊಟ್ಟಿದೆ. ಇದರ ನಡುವೆ ಧರ್ಮನಿಂದನೆ ಆರೋಪ ಹೊತ್ತಿದ್ದ ಹಿಂದೂ ವ್ಯಕ್ತಿಯೊಬ್ಬನನ್ನ ಥಳಿಸಿ ಹತ್ಯೆ ಮಾಡಿರುವುದನ್ನ ಮೊಹಮ್ಮದ್‌ ಯೂನಸ್‌ (Muhammad Yunus) ನೇತೃತ್ವದ ಸರ್ಕಾರ ಖಂಡಿಸಿದೆ.

ʻನವ ಬಾಂಗ್ಲಾದೇಶದಲ್ಲಿ ಅಂತಹ ಹಿಂಸಾಚಾರಕ್ಕೆ ಎಂದಿಗೂ ಜಾಗವಿಲ್ಲ. ಈ ಕ್ರೂರ ಅಪರಾಧದಲ್ಲಿ ಭಾಗಿಯಾಗಿರುವ ಯಾರಿಗೂ ವಿನಾಯಿತಿ ಕೊಡಲ್ಲ. ಕೃತ್ಯದಲ್ಲಿ ಭಾಗಿಯಾಗಿರುವ ಯಾರನ್ನೂ ಸುಮ್ಮನೆ ಬಿಡಲ್ಲʼ ಎಂದು ಶಪಥ ಮಾಡಿದೆ.

ಹತ್ಯೆಯಾದ ಹಿಂದೂ ಮುಖಂಡ ದೀಪು ಚಂದ್ರ ದಾಸ್ (Hindu Man Dipu Chandra Das) ಢಾಕಾದ ದುಬಾಲಿಯಾ ಪ್ಯಾರಾ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಗಾರ್ಮೆಂಟ್‌ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದ್ದ. ಆದ್ರೆ ಗುರುವಾರ ತಡರಾತ್ರಿ ಚಂದ್ರದಾಸ್‌ ಪ್ರವಾದಿ ಮೊಹಮ್ಮದ್‌ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದನೆಂದು ಆರೋಪಿಸಿ ಸ್ಥಳೀಯ ನಿವಾಸಿಗಳ ಗುಂಪು ಥಳಿಸಿದ್ದು, ವ್ಯಕ್ತಿ ಸಾವನ್ನಪ್ಪಿದ್ದಾನೆ.

ಭಯೋತ್ಪಾದಕ ಗುಂಪುಗಳ ಬಗ್ಗೆ ಎಚ್ಚರ ವಹಿಸಿ
ಇನ್ನೂ ಬಾಂಗ್ಲಾದಲ್ಲಿ ಕೆಲ ಭಯೋತ್ಪಾದಕ ಗುಂಪುಗಳು ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿವೆ ಅನ್ನೋ ಸಂಶಯ ವ್ಯಕ್ತವಾಗಿದೆ. ಈ ಹಿನ್ನೆಲೆ ನಾಗರಿಕರು ಎಚ್ಚರದಿಂದಿರುವಂತೆ ಬಾಂಗ್ಲಾ ಮಧ್ಯಂತರ ಸರ್ಕಾರ ಸಲಹೆ ನೀಡಿದೆ. ಕೆಲವು ಪ್ರತ್ಯೇಕ ಭಯೋತ್ಪಾದಕ ಗುಂಪುಗಳು ನಡೆಸುತ್ತಿರುವ ಎಲ್ಲಾ ರೀತಿಯ ಹಿಂಸಾಚಾರದ ವಿರುದ್ಧ ಜಾಗರೂಕವಾಗಿರಬೇಕು. ಹಿಂಸಾತ್ಮಕ ಘಟನೆಗಳನ್ನ ನಾವು ಬಲವಾಗಿ ಖಂಡಿಸುತ್ತೇವೆ, ದೇಶದಲ್ಲಿ ಅಶಾಂತಿ ಸೃಷ್ಟಿಸಲು ನಾವು ಬಿಡೋದಿಲ್ಲ ಎಂದು ಹೇಳಿದೆ.

30 ಪತ್ರಕರ್ತರ ರಕ್ಷಣೆ
ಇನ್ನೂ ಉಸ್ಮಾನ್‌ ಹಾದಿ ಸಾವು ಖಂಡಿಸಿ ನಡೆಯುತ್ತಿದ್ದ ಹಿಂಸಾತ್ಮಕ ಪ್ರತಿಭಟನೆ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ 30 ಬಾಂಗ್ಲಾದೇಶಿ ಪತ್ರಕರ್ತರನ್ನ ರಕ್ಷಣೆ ಮಾಡಲಾಗಿದೆ.

ಪ್ರತಿಭಟನಾಕಾರರು ಮೊದಲು ಪ್ರಥಮ್ ಅಲೋ (ದೇಶದ ಅತಿದೊಡ್ಡ ಬಂಗಾಳಿ ಪತ್ರಿಕೆ) ಪತ್ರಿಕಾ ಕಚೇರಿ ಮೇಲೆ ದಾಳಿ ನಡೆಸಿದ್ದರು. ಕಟ್ಟಡದ ಹಲವು ಮಹಡಿಗಳನ್ನ ಧ್ವಂಸಗೊಳಿಸಿ, ಪೀಠೋಪಕರಣ ಹಾಗೂ ದಾಖಲೆಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ರಾತ್ರಿ ಪಾಳಿಯಲ್ಲಿದ್ದ ಕೆಲ ಪತ್ರಕರ್ತರು ಜೀವ ಉಳಿಸಿಕೊಳ್ಳಲು ಟೆರೆಸ್‌ ಮೇಲೆ ಓಡಿದರು. ಈ ವೇಳೆ‌ ಅವರ ಮೇಲೂ ದಾಳಿಗೆ ಮುಂದಾಗಿದ್ದ ಉದ್ರಿಕ್ತರಿಂದ ಸುಮಾರು 30 ಪತ್ರಕರ್ತರನ್ನ ರಕ್ಷಣೆ ಮಾಡಲಾಯಿತು.

ಷರೀಫ್‌ಗೆ ಗುಂಡೇಟಿಗೆ ಬಲಿ
2024ರ ಡಿ.12ರಂದು ಬಾಂಗ್ಲಾದೇಶ ವಿದ್ಯಾರ್ಥಿ ದಂಗೆಯ ನೇತೃತ್ವವಹಿಸಿದ್ದ ಷರೀಫ್ ಉಸ್ಮಾನ್ ಹಾದಿ ಅವರ ಮೇಲೆ, ಕಳೆದ ವಾರ ಮುಸುಕುಧಾರಿಗಳ ಗುಂಪೊಂದು ಗುಂಡಿನ ದಾಳಿ ನಡೆಸಿತ್ತು. ಹಾದಿ ಅವರಿಗೆ ಸಿಂಗಾಪುರದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತೆ ಫಲಕಾರಿಯಾಗದೇ ಹಾದಿ ಮೃತಪಟ್ಟಿದ್ದಾರೆ ಎಂದು ಸಿಂಗಾಪುರ ಸರ್ಕಾರದ ಮೂಲಗಳು ಖಚಿತಪಡಿಸಿವೆ.

Share This Article