* ಮೋದಿ-ಟ್ರಂಪ್ ಮಧ್ಯೆ ದೂರವಾಣಿ ಸಂಭಾಷಣೆ ನಡೆದಿಲ್ಲ: ವಿದೇಶಾಂಗ ಸಚಿವಾಲಯ ಸ್ಪಷ್ಟನೆ
ನವದೆಹಲಿ: ರಷ್ಯಾದಿಂದ ಭಾರತ ಕಚ್ಚಾತೈಲ ಖರೀದಿಸಲ್ಲ ಅಂತ ಪ್ರಧಾನಿ ಮೋದಿ (PM Modi) ಭರವಸೆ ಕೊಟ್ಟಿದ್ದಾರೆಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿಕೆಗೆ ಭಾರತ ತಿರುಗೇಟು ನೀಡಿದೆ.
ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, ರಷ್ಯಾದಿಂದ ಭಾರತ ಕಚ್ಚಾತೈಲ ಖರೀದಿಸಲ್ಲ ಅಂತ ಮೋದಿ ಭರವಸೆ ಕೊಟ್ಟಿದ್ದಾರೆ. ಇದೊಂದು ದೊಡ್ಡ ಹೆಜ್ಜೆಯಾಗಿದೆ ಎಂದಿದ್ದರು. ಇದಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ಮೋದಿ-ಟ್ರಂಪ್ ಮಧ್ಯೆ ಯಾವುದೇ ದೂರವಾಣಿ ಸಂಭಾಷಣೆ ನಡೆದಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ಭಾರತದ ಆರ್ಥಿಕತೆಗೆ ರಷ್ಯಾದ ತೈಲ ಮುಖ್ಯ, ನಮ್ಮ ಸಂಬಂಧ ನಂಬಿಕೆ ಮೇಲೆ ಕಟ್ಟಿರುವ ಸೇತುವೆ: ರಷ್ಯಾ
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯೆ ನೀಡಿದ್ದು, ಭಾರತದ ಆಮದು ನೀತಿಗಳು ದೇಶದ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ ಮಾರ್ಗದರ್ಶಿಸಲ್ಪಡುತ್ತವೆ. ಭಾರತೀಯ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವುದು ಸರ್ಕಾರದ ಸ್ಥಿರ ಆದ್ಯತೆಯಾಗಿದೆ ಎಂದಿದ್ದಾರೆ.
ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ಪ್ರತಿಕ್ರಿಯಿಸಿ, ಮಾಸ್ಕೋ ಜೊತೆಗಿನ ಭಾರತದ ಇಂಧನ ಸಹಕಾರವು ಅದರ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅನುಗುಣವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತ ಇನ್ಮುಂದೆ ರಷ್ಯಾದಿಂದ ತೈಲ ಖರೀದಿಸಲ್ಲ, ಮೋದಿ ನನಗೆ ಭರವಸೆ ನೀಡಿದ್ದಾರೆ: ಟ್ರಂಪ್
ಈ ಮಧ್ಯೆ, ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಹೆದರುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ಟ್ರಂಪ್‌ಗೆ ಭರವಸೆ ನೀಡಿದ್ದಕ್ಕೆ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದು, ಟ್ರಂಪ್ ಹೇಳಿಕೆಗಳಿಗೆ ಮೋದಿ ಏಕೆ ಖಂಡನೆ ವ್ಯಕ್ತಪಡಿಸುವುದಿಲ್ಲ ಎಂದು ರಾಹುಲ್ ಗಾಂಧಿ ಗುಡುಗಿದ್ದಾರೆ.