ಬೀದರ್‌ನಲ್ಲಿ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ಹಾಕಂಗಿಲ್ಲ

Public TV
1 Min Read

ಬೀದರ್: ಜಿಲ್ಲೆಯಾದ್ಯಂತ ಮುಂದಿನ ಆದೇಶದವರೆಗೆ ಖಾಸಗಿ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ಬಂಕ್ ಸೇವೆಯನ್ನು ಷರತ್ತುಗಳಿಗೊಳಪಟ್ಟು ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಹೆಚ್.ಆರ್.ಮಹಾದೇವ್ ಆದೇಶ ಹೊರಡಿಸಿದ್ದಾರೆ.

ಈ ನಿಯಮ ಸರ್ಕಾರಿ ವಾಹನಗಳಿಗೆ, ಸರ್ಕಾರಿ ನೌಕರರಿಗೆ, ವೃದ್ಧರಿಗೆ, ವೈದ್ಯಕೀಯ ಸಿಬ್ಬಂದಿಗೆ, ಎಲ್ಲ ಅಂಬುಲೆನ್ಸ್ ಗಳಿಗೆ, ಔಷಧಿ ವ್ಯಾಪಾರಿಗಳಿಗೆ, ಪತ್ರಕರ್ತರಿಗೆ, ಗ್ಯಾಸ್ ಸಿಲಿಂಡರ್ ತಲುಪಿಸುವ ವಾಹನಗಳಿಗೆ ಸೇರಿದಂತೆ ಕೇವಲ ಅವಶ್ಯಕ ಸೇವಾ ವ್ಯಾಪ್ತಿಗೊಳಪಡುವುದನ್ನು ಹೊರತುಪಡಿಸಿ ಎಲ್ಲ ದ್ವಿಚಕ್ರ ವಾಹನಗಳಿಗೂ ಪೆಟ್ರೋಲ್ ಹಾಕದಂತೆ ಸೂಚಿಸಲಾಗಿದೆ.

ಅಗತ್ಯ ಸೇವೆಗಳ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಪೆಟ್ರೋಲ್ ತುಂಬಿಸುವಾಗ ಕಡ್ಡಾಯವಾಗಿ ಅವರ ಗುರುತಿನ ಚೀಟಿಯನ್ನು ತೋರಿಸಬೇಕು. ಪೆಟ್ರೋಲ್ ಬಂಕ್ ಸಿಬ್ಬಂದಿ ಸಹ ಐಡಿ ಕಾರ್ಡ್ ಪರಿಶೀಲಿಸಿ ಇಂಧನ ತುಂಬಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕೆಲ ಬೈಕ್ ಸವಾರರು ಅನಗತ್ಯವಾಗಿ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಇದರಿಂದಾಗಿ ಕಾನೂನು ಪಾಲನೆಯಲ್ಲಿ ಅಡೆತಡೆಯುಂಟಾಗುತ್ತಿದೆ. ಬೇಕಾಬಿಟ್ಟಿಯಾಗಿ ಜನ ಓಡಾಡುತ್ತಿದ್ದಾರೆ. ಹೀಗಾಗಿ ಮುಂದಿನ ಆದೇಶದವರೆಗೆ ಖಾಸಗಿ ದ್ವಿಚಕ್ರ ವಾಹನಗಳಿಗೆ ಜಿಲ್ಲೆಯಾದ್ಯಂತ ಪೆಟ್ರೋಲ್ ಬಂಕ್‍ಗಳ ಸೇವೆಯನ್ನು ನಿರ್ಬಂಧಿಸುವುದು ಅವಶ್ಯಕವಾಗಿದೆ. ಅದರಂತೆ ಸಿರ್‍ಪಿಸಿ ಕಾಯ್ದೆ 1973ರ ಕಲಂ 133 ರನ್ವಯ ಅಧಿಕಾರ ಚಲಾಯಿಸಿ ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *