ಡಿಸೆಂಬರ್‌ನಲ್ಲಿ ಹೊಸ ಮನೆ ಗೃಹ ಪ್ರವೇಶ – ಯಾರಿಗೂ ಆಹ್ವಾನ ನೀಡಲ್ಲ ಎಂದ ಸಿದ್ದರಾಮಯ್ಯ!

Public TV
1 Min Read

– ಅಶೋಕ್‌ಗೆ ರಾಜ್ಯದ ಸಮಸ್ಯೆ ಏನ್‌ ಗೊತ್ತು – ಸಿಎಂ ಕಿಡಿ

ಮೈಸೂರು: ಡಿಸೆಂಬರ್‌ನಲ್ಲಿ ಹೊಸ ಮನೆ ಗೃಹ ಪ್ರವೇಶ (Gruhapravesha) ಮಾಡುತ್ತೇನೆ. ಯಾರನ್ನೂ ಗೃಹ ಪ್ರವೇಶಕ್ಕೆ ಆಹ್ವಾನಿಸುವುದಿಲ್ಲ. ಮಾಧ್ಯಮದವರನ್ನು ಆಹ್ವಾನಿಸುವುದಿಲ್ಲ, ನೀವು ಬಂದ್ರೂ ಬೇಡ ಎಂದು ಕಳುಹಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ಮೈಸೂರಿನಲ್ಲಿ (Mysuru) ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಹೊಸ ಮನೆ ಗೃಹ ಪ್ರವೇಶದ ವಿಚಾರವಾಗಿ ಪ್ರತಿಕ್ರಿಯಿಸಿ, ಮನೆಯ ಕೆಲಸ ಬಹುತೇಕ ಮುಕ್ತಾಯವಾಗಿದೆ. ಬರೀ ಕುಟುಂಬಸ್ಥರು ಮಾತ್ರ ಗೃಹ ಪ್ರವೇಶಮಾಡಿಕೊಳ್ಳುತ್ತೇವೆ. ನಾನು ಈಗ ಇರುವ ಮನೆ ನನ್ನದಲ್ಲ, ಮರಿಸ್ವಾಮಿ ಅವರದ್ದು. ಮರಿಸ್ವಾಮಿಯೇ ನನಗೆ ಹಾಗೂ ನನ್ನ ಮಗನಿಗೆ ಅನ್ನದಾತ ಎಂದಿದ್ದಾರೆ. ಇದನ್ನೂ ಓದಿ: GBA ಚುನಾವಣೆಗೆ ಜೆಡಿಎಸ್ ಸಿದ್ಧತೆ – ಅ.12ಕ್ಕೆ ಬೆಂಗ್ಳೂರಿನಲ್ಲಿ ಮಹಿಳಾ ಸಮಾವೇಶ: ದೇವೇಗೌಡ

ಗೃಹ ಪ್ರವೇಶ ಆದ ಮೇಲೆ ಹೊಸ ಮನೆಗೆ ಹೋಗುತ್ತೇವೆ. ಈ ಮನೆಯನ್ನು ಮರಿಸ್ವಾಮಿ ಖಾಲಿ ಇಟ್ಟರೆ ಜನರನ್ನ ಭೇಟಿ ಮಾಡಲು ಬಳಸಿಕೊಳ್ಳುತ್ತೇವೆ ಎಂದಿದ್ದಾರೆ.

ಜಾತಿ ಗಣತಿ ವಿಚಾರವಾಗಿ, ಗಣತಿ ಪ್ರಗತಿಯಲ್ಲಿದೆ. ಮೂರುವರೆ ಕೋಟಿ ಜನರ ಗಣತಿಯಾಗಿದೆ. ಇನ್ನೂ ಮೂರುನಾಲ್ಕು ದಿನ ಬಾಕಿ ಇದೆ. ಅಷ್ಟರೊಳಗೆ ರಾಜ್ಯದ ಒಂದುವರೆ ಕೋಟಿ ಮನೆಯ ಗಣತಿ ಆಗುತ್ತದೆ. ನಿಗದಿತ ಅವಧಿಯೊಳಗೆ ಗಣತಿ ಪೂರ್ಣಗೊಳಿಸುತ್ತಾರೆ ಎಂಬ ವಿಶ್ವಾಸ ಇದೆ. ಇಲ್ಲದಿದ್ದರೆ ಅಂದಿನ ಸ್ಥಿತಿ ನೋಡಿ ತೀರ್ಮಾನ ಮಾಡುತ್ತೇವೆ. ಆರಂಭದ ಮೂರು ದಿನ ತಾಂತ್ರಿಕ ದೋಷದಿಂದ ಸ್ವಲ್ಪ ಸಮಸ್ಯೆ ಆಗಿದೆ. ನಂತರ ಯಾವ ಸಮಸ್ಯೆ ಉಂಟಾಗಿಲ್ಲ ಎಂದಿದ್ದಾರೆ.

ಇದೇ ವೇಳೆ, ವಿಪಕ್ಷ ನಾಯಕ ಆರ್.ಅಶೋಕ್‌ ವಿರುದ್ಧ ಏಕವಚನದಲ್ಲೇ ಸಿಎಂ ವಾಗ್ದಾಳಿ ನಡೆಸಿದ್ದಾರೆ. ಪ್ರತಿ ನಿತ್ಯ ಆರ್‌ಎಸ್‌ಎಸ್‌ ಬರೆದುಕೊಡುವುದನ್ನು ಹೇಳುವ ಅಶೋಕನಿಗೆ ರಾಜ್ಯದ ಸಮಸ್ಯೆ ಏನು ಗೊತ್ತು? ಆರ್‌ಎಸ್‌ಎಸ್‌ ಏನು ಬರೆದುಕೊಡುತ್ತೋ ಅದನ್ನ ಅಶೋಕ ಹೇಳುತ್ತಾನೆ. ಅವನಿಗೆ ರೈತನ ಸಮಸ್ಯೆ, ನಾಡಿನ ಸಮಸ್ಯೆ ಏನು ಗೊತ್ತು? ಸುಮ್ನೆ ವಿಪಕ್ಷ ನಾಯಕನನ್ನಾಗಿ ಮಾಡಿದ್ದಾರೆ, ಆಗಿದ್ದಾನೆ ಅಷ್ಟೇ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ನವೆಂಬರ್-ಡಿಸೆಂಬರ್ ಒಳಗೆ ಸಿಎಂ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ತಾರೆ: ಆರ್.ಅಶೋಕ್ ಭವಿಷ್ಯ

Share This Article