ಗೋವಾಗಿಂತ ದೊಡ್ಡದಾದ ಕೊಡಗಿನ ಬಗ್ಗೆ ಮಾತ್ನಾಡೋರು ಯಾರಿಲ್ಲ- ಪಾಟೀಲ ಪುಟ್ಟಪ್ಪ

Public TV
2 Min Read

ಧಾರವಾಡ: ಕೊಡಗು ಅನಾಥ ಸ್ಥಿತಿ ಅನುಭವಿಸುತ್ತಿದೆ. ಕೊಡಗು ಗೋವಾಗಿಂತ ದೊಡ್ಡದು. ಆದರೆ ಅದರ ಪರ ಮಾತನಾಡುವವರು ಯಾರೂ ಇಲ್ಲ ಅಂತ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುರಂತ ಏನಂದ್ರೆ ಲೋಕಸಭೆಯಲ್ಲಿ ಒಬ್ಬ ಮನುಷ್ಯ ಆರಿಸಿ ಬರುತ್ತಾನೆ. ಆದ್ರೆ ಅವನು ಕೊಡಗಿನವನಲ್ಲ. ಅವನು ಮೈಸೂರಿನವನು. ಅವನು ಸ್ಫರ್ಧೆ ಮಾಡಿ ಆರಿಸಿ ಬರುತ್ತಾನೆ. ಕೊಡಗಿನ ಪ್ರತಿನಿಧಿ ಅವನು ತಮ್ಮವನು ಅಂತ ಅವರು ತಿಳಿದುಕೊಳ್ಳಬೇಕು. ಆದ್ರೆ ಕೊಡಗಿನ ಪ್ರತಿನಿಧಿ ಯಾರೂ ಕೇಂದ್ರ ಸರ್ಕಾರದಲ್ಲಿಲ್ಲ. ಕೊಡಗು ಒಂದು ದೃಷ್ಟಿಯಿಂದ ಅನಾಥ ಸ್ಥಿತಿಯನ್ನು ಅನುಭವಿಸಬೇಕಾಗಿ ಬಂದಿದೆ. ಈಗ ಕೊಡಗನ್ನು ಮೈಸೂರಿನ ಒಬ್ಬ ಮನುಷ್ಯ ಕೇಂದ್ರ ಪಾರ್ಲಿಮೆಂಟಿನಲ್ಲಿ ಪ್ರತಿನಿಧಿಸುತ್ತಾ ಇದ್ದಾನೆ. ಅವನಿಗೂ ಕೊಡಗಿಗೂ ಏನೂ ಸಂಬಂಧ ಇಲ್ಲ. ಆದ್ರೆ ಅವನು ಕೊಡಗಿನ ಪ್ರತಿನಿಧಿ. ಸ್ವತಂತ್ರ ರಾಜ್ಯವಾಗಿದ್ದ ಕೊಡಗು ಇವತ್ತು ಅನಾಥ ಸ್ಥಿತಿಯಲ್ಲಿದೆ ಅಂತ ಅವರು ಹೇಳಿದ್ರು.

ಗೋವಾ ಭಾರತ ಒಕ್ಕೂಟದಲ್ಲಿ ಒಂದು ರಾಜ್ಯವಾಗಿದೆ. ಆದ್ರೆ ಕೊಡಗು ಏನೂ ಲೆಕ್ಕಕ್ಕೇ ಇಲ್ಲ. ಕೊಡಗು ಗೋವೆಗಿಂತ ದೊಡ್ಡದಾಗಿತ್ತು. ಆದ್ರೆ ಇವತ್ತು ಅದರ ಪರವಾಗಿ ಮಾತನಾಡುವವರು ಯಾರು ಇಲ್ಲದಂತಾಗಿದೆ. ಅದರ ಪರವಾಗಿ ಧ್ವನಿಯೆತ್ತುವಂತಹ ಒಂದು ಸೌಹಾರ್ದ ಸಹಾಯವಾಗುತ್ತಿಲ್ಲ ಅಂದ್ರು.

ಯಾರಿಂದಲೂ ಸೋಲಿಸಲು ಸಾಧ್ಯವಾಗದ ಕೊಡಗನ್ನು ಇಂದು ವರುಣ ಸೋಲಿಸಿದ್ದಾನೆ. ಇತ್ತೀಚೆಗೆ ಕೊಡಗಿನ ಬಗ್ಗೆ ಒಂದು ಕನಸು ಬಿತ್ತು. ಇಡೀ ದಿನ ಅದೇ ಕನಸು. ಅಲ್ಲಿ ಕೊಡಗಿನ ಶಾಲೆಗಳನ್ನು ನೋಡಬೇಕು ಅಂತ ಹೋದೆ. ಆದ್ರೆ ಅಲ್ಲಿ ಶಾಲೆಗಳು ಇದ್ದವು ಎಂಬುದಕ್ಕೆ ಕುರುಹು ಕೂಡ ಇರಲಿಲ್ಲ. ಇವತ್ತಿಗೂ ಕೂಡ ಅದೇ ಪರಿಸ್ಥಿತಿ ಇದೆ. ನನಗೆ ಈಗ ಅಪರಾಧಿ ಮನೋಭಾವ ಕಾಡುತ್ತಿದೆ. ಕೊಡಗನ್ನ ನೂತನ ರಾಜ್ಯದಲ್ಲಿ ಸೇರಿಸುವ ಪ್ರಯತ್ನ ಮಾಡಿದ್ದೆ. ಇವತ್ತು ನನಗೆ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ. ರಾಕ್ಷಸ ಮಳೆಗೆ ಕಾಫಿ, ಏಲಕ್ಕಿ, ಮೆಣಸು ಕೊಚ್ಚಿ ಹೋಗಿದೆ. ಸರ್ಕಾರ ಅವರನ್ನ ಉಳಿಸುವ ಕೆಲಸ ಮಾಡಬೇಕು. ಹಣ ಎತ್ತಿ ಜೆಬಿಗೆ ತುಂಬಿಕೊಳ್ಳೊ ಜನರು ಇದ್ದಾರೆ. ಅದರ ದುರುಪಯೋಗ ಆಗಬಾರದು ಅಂತ ಅವರು ತಿಳಿಸಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *