ಸಾವಿರಾರು ಬಿಸಿಯೂಟ ಸಿಬ್ಬಂದಿಗಳಿಂದ ಪ್ರತಿಭಟನೆ- ಸಚಿವ ತನ್ವೀರ್ ಸೇಠ್ ಮನೆ ಮುತ್ತಿಗೆಗೆ ಪೊಲೀಸರ ತಡೆ

Public TV
1 Min Read

ಬೆಂಗಳೂರು: ಬಿಸಿಯೂಟ ಸಿಬ್ಬಂದಿಗಳಿಂದ ಇವತ್ತು ನಗರದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆ ನಡೆಸಲು ರಾಜ್ಯದ ವಿವಿಧ ಜಿಲ್ಲೆ ಗಳಿಂದ ಬಿಸಿಯೂಟ ತಯಾರಕರು ಬೆಂಗಳೂರಿಗೆ ಅಗಮಿಸಿದ್ದು, ಐವತ್ತು ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಶಿಕ್ಷಣ ಸಚಿವ ತನ್ವೀರ್ ಸೇಠ್ ಮನೆಗೆ ಮುತ್ತಿಗೆ ಹಾಕಲು ಬಿಸಿಯೂಟ ಕಾರ್ಯಕರ್ತೆಯರು ಮುಂದಾಗಿದ್ದು, ಫ್ರೀಡಂ ಪಾರ್ಕ್ ನಿಂದ ತನ್ವೀರ್ ಸೇಠ್ ನಿವಾಸದ ಕಡೆ ಹೊರಟಿದ್ದರು. ಮುತ್ತಿಗೆಗೆ ಹೊರಟ ರ‍್ಯಾಲಿಯನ್ನು ಪೊಲೀಸರು ತಡೆದ ಹಿನ್ನೆಲೆಯಲ್ಲಿ, ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ , ಬ್ಯಾರಿಕೇಡ್ ಗಳನ್ನ ತಳ್ಳಿದ್ದಾರೆ.

ಸಚಿವ ತನ್ವೀರ್‍ ಸೇಠ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ನಮ್ಮೆಲ್ಲರ ಕಷ್ಟ ಅವರಿಗೆ ಅರ್ಥವಾಗ್ತಿಲ್ವಾ? ನಾವು ನಮ್ಮ ಹಕ್ಕನ್ನ ಕೇಳ್ತಿದ್ದೀವಿ. ಕನಿಷ್ಟ ವೇತನ ಕೊಡಿ. ನ್ಯಾಯಯುತವಾಗಿ ನಮಗೆ ಕೊಡಬೇಕಾದ ವೇತನ ಕೊಡಿ. ಸಚಿವರು ಪ್ರತಿಭಟನಾ ಸ್ಥಳಕ್ಕೆ ಅಗಮಿಸಿ ಭರವಸೆ ನೀಡೋವರಗೆ ಪ್ರತಿಭಟನೆ ಹಿಂಪಡೆಯವುದಿಲ್ಲ ಎಂದು ಆಗ್ರಹಿಸಿದ್ದಾರೆ. ರಸ್ತೆ ಮಧ್ಯಯೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನೆ ಯಾಕೆ?: ಕನಿಷ್ಠ ವೇತನ, ಕೆಲಸ ಖಾಯಂ, ಪಿಎಫ್, ಐಎಸ್‍ಐ ಸೌಲಭ್ಯ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ಬಿಸಿಯೂಟ ತಯಾರಕರ ಸಂಘ ಹಾಗೂ ಎಐಟಿಯುಸಿ ವತಿಯಿಂದ ಪ್ರತಿಭಟನೆ ನಡೆಯುತ್ತಿದೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಇವತ್ತು ಬಿಸಿಯೂಟ ಇರುವುದಿಲ್ಲ. ಬೆಂಗಳೂರಿನಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಜಿಲ್ಲಾ ಅಡುಗೆ ಸಹಾಯಕರು ಪ್ರತಿಭಟನೆ ಮಾಡ್ತಿರೋದ್ರಿಂದ ಜಿಲ್ಲೆಗಳಲ್ಲಿ ಮಾತ್ರ ಇಂದು ಬಿಸಿಯೂಟದ ಸಮಸ್ಯೆ ಎದುರಾಗಲಿದೆ.

ಈ ಹಿಂದೆ ಸಾಕಷ್ಟು ಭಾರಿ ಪ್ರತಿಭಟನೆ ಮಾಡಿದ್ರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ಪ್ರತಿಭಟನೆಯಲ್ಲಿ ಇಲಾಖೆ 5200 ರೂ. ಕನಿಷ್ಟ ವೇತನ ನೀಡುವ ಭರವಸೆ ನೀಡಿತ್ತು. ಪ್ರಸಕ್ತ ವರ್ಷದಿಂದ ಪ್ರತಿ ತಿಂಗಳು 5200 ರೂ. ನೀಡುವುದಾಗಿ ಸಚಿವರು ಭರವಸೆ ನೀಡಿದ್ದರು. ಆದ್ರೆ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಕಾರ್ಯಕರ್ತೆಯರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಈ ವೇಳೆ ಪ್ರತಿಭಟನೆಗೆ ಬಂದಿದ್ದ ಮೂವರು ಮಹಿಳೆಯರು ಅಸ್ವಸ್ಥಗೊಂಡಿದ್ದು, ಸ್ಥಳದಲ್ಲೇ ಅವರನ್ನ ಸಹೋದ್ಯೋಗಿಗಳು ಆರೈಕೆ ಮಾಡಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *