ದಲಿತ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ ಅಲ್ಲ!

Public TV
1 Min Read

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡದ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿದ್ಯಾರ್ಥಿ ಪಾಸ್ ನೀಡೋದಾಗಿ ಘೋಷಿಸಿದ್ದರು. ಅದರಂತೆ ವಿದ್ಯಾರ್ಥಿಗಳಿಗೆ ಪಾಸ್ ವಿತರಣೆ ಆಗ್ತಿದೆ. ಆದರೆ ಅದು ಉಚಿತವಾಗಿ ಅಲ್ಲ. ಅದರ ಬದಲಾಗಿ ವಿದ್ಯಾರ್ಥಿಗಳಿಂದ 130 ರಿಂದ 150 ರೂಪಾಯಿ ಶುಲ್ಕ ಪಡೆದು ಪಾಸ್ ನೀಡಲಾಗುತ್ತಿದೆ.

ಹೌದು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಹೆಸರಿಗೆ ಮಾತ್ರ ಉಚಿತ ಪಾಸ್ ನೀಡುತ್ತಿದ್ದೇವೆ ಅಂತ ಸಿಎಂ ಅವರು ವೇದಿಕೆಗಳಲ್ಲಿ ಹೇಳುತ್ತಿದ್ದರೂ ಪಾಸ್ ವಿಚಾರದಲ್ಲಿ ಲಕ್ಷಾಂತರ ಮಕ್ಕಳಿಂದ ಶುಲ್ಕ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಶಾಲಾ-ಕಾಲೇಜು ಮಕ್ಕಳಿಗೆ ವಿತರಣೆಯಾಗುತ್ತಿರುವ ಪಾಸ್ ಮೇಲೆ ಉಚಿತ ಅಂತ ಬರೆಯಲಾಗಿದೆ. ಹೀಗಿದ್ದರೂ ಸಂಸ್ಕರಣಾ ವೆಚ್ಚ ಹಾಗೂ ಇತರೆ ವೆಚ್ಚ ಅನ್ನೋ ಹೆಸರಲ್ಲಿ 130 ರಿಂದ 150 ರೂಪಾಯಿ ಹಣ ಪಡೆಯಲಾಗುತ್ತಿದೆ. ಇದನ್ನ ಪಾಸ್ ಕೌಂಟರ್ ಬಳಿ ಬ್ಯಾನರ್‍ಗಳಲ್ಲೂ ಹಾಕಲಾಗಿದೆ.

ಒಂದರಿಂದ ಏಳನೇ ತರಗತಿಯ ಮಕ್ಕಳಿಗೆ 130 ರೂ. ಶುಲ್ಕ ಪಡೆಯಲಾಗುತ್ತಿದೆ. ಎಸ್ಸಿ ಮತ್ತು ಎಸ್ಟಿ ಮಕ್ಕಳು ಹಾಗೂ ಸಾಮಾನ್ಯ ಮಕ್ಕಳಿಂದಲೂ ಶುಲ್ಕ ಪಡೆಯಲಾಗುತ್ತಿದೆ. 8ನೇ ತರಗತಿ ಯಿಂದ ಡಿಗ್ರಿ ವಿದ್ಯಾರ್ಥಿಗಳ ಬಳಿಯೂ ಸಂಸ್ಕರಣಾ ಹಾಗೂ ಇತರೆ ವೆಚ್ಚ ಅಂತ 150 ರೂಪಾಯಿ ಪಡೆಯಲಾಗುತ್ತಿದೆ.

ಕರ್ನಾಟಕ ರಾಜ್ಯ ಶೈಕ್ಷಣಿಕ ವರದಿ 2016-17ರ ಅನ್ವಯ 1-8 ತರಗತಿವರೆಗೆ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು 16,06,159 ಇದ್ದಾರೆ. ಪರಿಶಿಷ್ಟ ಪಂಗಡದಲ್ಲಿ 6,38,827 ವಿದ್ಯಾರ್ಥಿಗಳು ಇದ್ದಾರೆ. ಒಟ್ಟಾರೆ 22,44,986 ವಿದ್ಯಾರ್ಥಿಗಳು ಇದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯಿಂದ 130ರೂ. ಪಡೆದರೆ 30 ಕೋಟಿ ಹಣ ಸಾರಿಗೆ ಇಲಾಖೆಗೆ ಸಂಗ್ರಹವಾಗುತ್ತಿದೆ. ಇದು ಕೇವಲ 1-8 ತರಗತಿಯ ಅಂಕಿ ಅಂಶ. ಪದವಿಯ ವರೆಗೂ ಇದೇ ಶುಲ್ಕ ಪಡೆದರೆ ಸರ್ಕಾರಕ್ಕೆ ಇದರಿಂದಲೇ ಕೋಟಿ ರೂ. ಹಣ ಬೊಕ್ಕಸಕ್ಕೆ ಬರುತ್ತದೆ.

 

 

Share This Article
Leave a Comment

Leave a Reply

Your email address will not be published. Required fields are marked *